ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ). ಇದರ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ `ಕುಲಾಲ ಸಮ್ಮಿಲನ’ವು ವೈಭವದಿಂದ ಜರುಗಿತು.
ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾರಂಭದ ನೇತೃತ್ವವನ್ನು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಈ ಬಾರಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಯೂರ್ ಉಳ್ಳಾಲ್ ವಹಿಸಿಸಿಕೊಂಡಿದ್ದು, ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸುರತ್ಕಲ್ ಶಾಸಕ ವೈ ಭರತ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಆ ಬಳಿಕ ಮಾತನಾಡಿದ ಅವರು, ಭಾರತವನ್ನು ನಾಗರಿಕತೆಯ ತೊಟ್ಟಿಲು ಎನ್ನುತ್ತಾರೆ. ಕುಲಾಲ ಸಮುದಾಯ ಈ ನೆಲದ ನಾಗರಿಕತೆಯ ಹುಟ್ಟಿನೊಂದಿಗೆ ಜನ್ಮತಳೆದ ಶ್ರೇಷ್ಠ ಸಮುದಾಯವಾಗಿದೆ. ಬೆಂಕಿಯ ಬಳಿಕ ಹುಟ್ಟಿದ್ದು ಮಣ್ಣಿನ ಪಾತ್ರೆ. ಅದನ್ನೇ ಕುಲಕಸುಬಾಗಿ ಬೆಳೆಸಿಕೊಂಡ ಈ ಸಮುದಾಯ ಸಾಮಾಜಿಕವಾಗಿ ಹಿಂದುಳಿದ ವರ್ಗದಲ್ಲಿ ಗುರುತಿಸಿಕೊಳ್ಳಲು ಇದಕ್ಕೆ ಸಮಾಜದ ಶಾಂತಿ ಸಾತ್ವಿಕತೆಯೇ ಕಾರಣ ಎಂದರು. ಆದರೆ ಈ ಸಾತ್ವಿಕತೆ ನಮ್ಮ ದೌರ್ಬಲ್ಯವಾಗಬಾರದು. ಯಾಕೆಂದರೆ ದುರ್ಬಲ ಪ್ರಾಣಿಯನ್ನೇ ದೈವ ದೇವರಿಗೆ ಬಲಿ ಕೊಡಲಾಗುತ್ತದೆ. ಹೀಗಾಗಿ ಬಲಿಷ್ಠ ಸಂಘಟನೆಯನ್ನು ಬೆಳೆಸಿಕೊಂಡು ಇನ್ನಷ್ಟು ಸದೃಢವಾಗಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿಯಬೇಕು. ಆ ಮೂಲಕ ಬಡತನದಲ್ಲಿರುವ ಕಟ್ಟ ಕಡೆಯ ವ್ಯಕ್ತಿ ಕಣ್ಣೀರು ಒರೆಸುವ ಕೆಲಸ ಮಾಡಿದರೆ ಸಂಘ ಸಂಸ್ಥೆಯ ಸ್ಥಾಪನೆ ಸಾರ್ಥಕವಾಗುತ್ತದೆ ಎಂದರು.
ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕುಲಾಲ ಸಂಘದ ಅಧ್ಯಕ್ಷರು ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಇದರಲ್ಲಿ ಕುಂಭ ಕಲಾ ಮಂಡಳಿ ಸ್ಥಾಪನೆ ಕೂಡ ಒಂದಾಗಿದ್ದು, ಉಪ ಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಸದ್ಯವೇ ಈಡೇರಿಸುವ ಭರವಸೆ ನೀಡಿದ್ದಾರೆ. ಕುಲಾಲ ಸಂಘದ ಹಾಸ್ಟೆಲ್ ಸ್ಥಾಪನೆಗೆ ಜಾಗ ಮಂಜೂರು ಮಾಡಲು ಸರಕಾರದ ವತಿಯಿಂದ ಸದ್ಯದ ಪರಿಸ್ಥಿಯಲ್ಲಿ ಅಸಾಧ್ಯವಾಗಿದ್ದು, ಜಾಗದ ಅನುಕೂಲತೆ ಇದ್ದಲ್ಲಿ ಕಟ್ಟಡಕ್ಕಾಗಿ ಅನುದಾನ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಮಾಜಿ ಸಚಿವ ರಮಾನಾಥ ರೈ, ಮ.ನ.ಪಾ ಮೇಯರ್ ದಿವಾಕರ ಪಾಂಡೇಶ್ವರ, ಮೂಲ್ಕಿ ಮೂಡಬಿದ್ರೆ ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ಸಂತೋಷ್ ಕುಮಾರ್ ರೈ ಬೋಳ್ಯಾರು, ಪೃಥ್ವಿರಾಜ್ ಎಡಪದವು, ತೇಜಸ್ವಿರಾಜ್ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪುರುಷೋತ್ತಮ ಕಲ್ಬಾವಿ, ಸಂತೋಷ್ ಕುಲಾಲ್ ಪಕ್ಕಾಲು, ಶ್ರೀ ಸುಂದರ ಬಿ.ಬಂಗೇರ, ರವೀಂದ್ರ ಮುನ್ನಿಪ್ಪಾಡಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಲಾಲ ಸಮಾಜದ ಸಾಧಕರಾದ ಸಹಕಾರಿ ಧುರೀಣ ಶ್ರೀ ಬಿ.ಎಸ್ ಕುಲಾಲ್ ಪುತ್ತೂರು, ಸಾಮಾಜಿಕ ಧಾರ್ಮಿಕ ಮುಂದಾಳು, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ಬಂಗೇರ, ಹಿರಿಯ ಸೇವಕಿ ಶ್ರೀಮತಿ ಮಾಲತಿ, ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ ಅವರನ್ನು ಗಣ್ಯರ ಸಮ್ಮುಖ ಸನ್ಮಾನಿಸಲಾಯಿತು. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮಾಜದ ವಿವಿಧ ರಾಜಕೀಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಜರುಗಿತು. ಕನ್ನಡ ನಾಡು, ನುಡಿಯ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಜನಪದಕಲೆಗಳ ಶ್ರೀಮಂತಿಕೆ ವೇದಿಕೆಯಲ್ಲಿ ಅನಾವರಣಗೊಂಡಿತು.
ಲ| ಅನಿಲ್ ದಾಸ್ (ಗೌರವ ಸಂಚಾಲಕರು, ಕುಲಾಲ ಸಮ್ಮಿಲನ ಸ್ವಾಗತ ಸಮಿತಿ), ಗಿರೀಶ್ ಕೆ.ಎಚ್ (ಸಂಚಾಲಕರು, ಕುಲಾಲ ಸಮ್ಮಿಲನ ಸ್ವಾಗತ ಸಮಿತಿ), ದಯಾನಂದ ಅಡ್ಯಾರ್ (ಉಪಾಧ್ಯಕ್ಷರು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ), ಜೈರಾಜ್ ಪ್ರಕಾಶ್ (ಉಪಾಧ್ಯಕ್ಷರು ಯಾನೆ ಕುಲಾಲರ ಮಾತೃ ಸಂಘ), ಚಂದ್ರಕಾಂತ್ (ಪ್ರಧಾನ ಕಾರ್ಯದರ್ಶಿ ದ.ಕ ಜಿಲ್ಲಾ ಯಾನೆ ಕುಲಾಲರ ಮಾತೃ ಸಂಘ), ಮೊದಲಾದವರು ಕಾರ್ಯಕ್ರಮದ ಯಶಸ್ಸಿನ ಹಿಂದೆ ದುಡಿದರು. ಎಚ್ ಕೆ ನಯನಾಡು, ನವೀನ್ ಕುಲಾಲ್ ಪುತ್ತೂರು, ಪ್ರವೀಣ್ ಬಸ್ತಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ದ.ಕ., ಉಡುಪಿ, ಕಾಸರಗೋಡು ಜಿಲ್ಲೆ ಹಾಗೂ ಹೊರನಾಡ ಕುಲಾಲ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.