ಬೆಳ್ತಂಗಡಿ- ಬಂಟ್ವಾಳ ಕುಲಾಲ ಸಂಘದ ವತಿಯಿಂದ ಭವ್ಯ ಸ್ವಾಗತ
ಬೆಳ್ತಂಗಡಿ(ನ.೧೯, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಶೋಷಿತ ಕುಂಬಾರ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು ಸರಕಾರ ಹಾಗೂ ಸಮಾಜದ ಗಮನಸೆಳೆದು ಸೌಲಭ್ಯ ಪಡೆಯುವ , ಒಗ್ಗಟ್ಟನ್ನು ಪ್ರದರ್ಶಿಸುವ ಹಾಗೂ ಸಮುದಾಯದ ಸಮಗ್ರ ಶ್ರೇಯೋಭಿವೃದ್ದ್ಗಿಚಿಂತನೆಯಿಂದ ಕಾಯಕಯೋಗಿ ಶಿವಶರಣ ಕುಂಬಾರ ಗುಂಡಯ್ಯ ಅವರ ಹುಟ್ಟೂರು ಬೀದರ್ ನಿಂದ ಆರಂಭಿಸಲ್ಪಟ್ಟ ಜನ ಸಂಕಲ್ಪ ಯಾತ್ರೆಯು ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದೆ. ಕರ್ನಾಟಕ ಕುಂಬಾರರ ಯುವಸೈನ್ಯ ಇದರ ಸ್ಥಾಪಕಾಧ್ಯಕ್ಷ ಬೆಂಗಳೂರಿನ ಶಂಕರಶೆಟ್ಟಿ ಕುಂಬಾರ ಅವರ ನೇತೃತ್ವದಲ್ಲಿ ಅಕ್ಟೊಬರ್ 30ರಂದು ಆರಂಭಗೊಂಡ ಈ ಜನಜಾಗೃತಿ ಸಂಕಲ್ಪಯಾತ್ರೆ ನವೆಂಬರ್ 17ರಂದು ದ.ಕ ಜಿಲ್ಲೆಯ ಬೆಳ್ತಂಗಡಿಗೆ ಆಗಮಿಸಿತು.
ಈ ಸಂದರ್ಭ ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರ ಸೇವಾ ಸಂಘದ ವತಿಯಿಂದ ಜಿಲ್ಲೆಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ನಿವೃತ್ತ ಕಂದಾಯ ನಿರೀಕ್ಷಕ ಪದ್ಮಕುಮಾರ್, ಕುಲಾಲ ಸಮುದಾಯದ ನಾಯಕಿ ವಿಮಲಾ ಕಂಚಿಂಜ, ಬೆಳ್ತಂಗಡಿ ಕುಲಾಲ ಯುವವೇದಿಕೆ ಅಧ್ಯಕ್ಷ ಲೋಕೇಶ್, ಉಮೇಶ್ ಕುಲಾಲ್, ಪುಷ್ಪರಾಜ್ ಲಾಯ್ಲ, ಲಲಿತ ಕುಲಾಲ್, ಮೊದಲಾದವರು ಉಪಸ್ಥಿತರಿದ್ದು ಶುಭಕೋರಿದರು. ಈ ಸಂದರ್ಭ ಸಂಕಲ್ಪ ಯಾತ್ರೆಯ ಧ್ಯೇಯೋದ್ದೇಶದ ಕುರಿತು ಶಂಕರ್ ಶೆಟ್ಟಿ ಕುಂಬಾರ ಮಾತನಾಡಿ, ಈ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಯನ್ನು ಕ್ರಮಿಸಿ ತ್ರಿಪದಿಬ್ರಹ್ಮ ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಮಾಸೂರಿನಲ್ಲಿ ಬಹಿರಂಗ ಸಮಾವೇಶ ಮೂಲಕ ಕೊನೆಗೊಳ್ಳಲಿದೆ ಎಂದರು.
ಬಂಟ್ವಾಳ ವರದಿ
ಕರ್ನಾಟಕ ಕುಂಬಾರರ ಯುವ ಸೈನ್ಯ ಬೆಂಗಳೂರು ಇದರ ನೇತೃತ್ವದಲ್ಲಿ ಚಾಲನೆ ಪಡೆದುಕೊಂಡ ಕುಂಬಾರ ಸಂಕಲ್ಪ ಯಾತ್ರೆಯು ಗುರುವಾರ ಬಂಟ್ವಾಳ ತಲುಪಿದ್ದು ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಭಾಭವನದ ಬಳಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ಕುಲಾಲ ಹಿರಿಯ ನಾಗರಿಕರ ಸಂಘ ಇದರ ವತಿಯಿಂದ ಸ್ವಾಗತಿಸಲಾಯಿತು.
ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಸಂಕಲ್ಪ ಯಾತ್ರೆಯ ರುವಾರಿ, ಕರ್ನಾಟಕ ಕುಂಬಾರರ ಯುವ ಸೈನ್ಯದ ಸ್ಥಾಪಕಾಧ್ಯಕ್ಷ ಶಂಕರ ಶೆಟ್ಟಿ ಕುಂಬಾರ ಮಾತನಾಡಿ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಕುಲಾಲ ಸಮುದಾಯದ ಬಂಧುಗಳನ್ನು ಒಗ್ಗೂಡಿಸಿ ಸ್ಪರ್ಧಾತ್ಮಕ ಬೆಳವಣಿಗೆಗೆ ಹೊಂದಲು ಜನಜಾಗೃತಿ ಮೂಡಿಸುವುದು, ಕುಂಬಾರ ಸಮಾಜಕ್ಕೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಶೇಷ ಒಳ ಮೀಸಲಾತಿಗೆ ಒತ್ತಾಯಿಸುವುದು, ಕುಂಬಾರಿಕೆ ಕಲೆಗೆ ಮರು ಜೀವ ನೀಡಿ ಕುಂಬಾರರು ತಯಾರಿಸುವ ಮಡಿಕೆಗಳನ್ನು ಸರಕಾರವೇ ಖರೀದಿಸುವುದು ಮತ್ತು ಸರಕಾರವೇ ಮಡಿಕೆ ಮಾರಾಟ ಕೇಂದ್ರಗಳನ್ನು ತೆರೆದು ಕುಂಬಾರಿಕೆ ವೃತ್ತಿ ಅವಲಂಬಿಸಿರುವವರಿಗೆ ಸಹಾಯ ಹಸ್ತ ನೀಡುವುದು, ಕುಂಬಾರರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಮೊದಲಾದ ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಸಂಕಲ್ಪ ಯಾತ್ರೆಯ ಮೂಲಕ ಕುಲಾಲ ಬಂಧುಗಳನ್ನು ಸಂಘಟಿಸುತ್ತಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ, ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಅಧ್ಯಕ್ಷ ಸತೀಶ್ ಕುಲಾಲ್ ಜಕ್ರಿಬೆಟ್ಟು, ಸಂಘಟನೆಯ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಡೊಂಬಯ ಕುಲಾಲ್, ಸುಕುಮಾರ್ ಬಂಟ್ವಾಳ್, ನಾರಾಯಣ ಸಿ ಪೆರ್ನೆ ಪುರುಷೋತ್ತಮ, ಹರಿಪ್ರಸಾದ್, ಕಾರ್ತಿಕ್ ಮಯ್ಯರಬೈಲು, ಸೋಮನಾಥ್, ಜಲಜಾಕ್ಷಿ ಕುಲಾಲ್, ರಮೇಶ್ ಕುಲಾಲ್ ಮುಡಿಪು ಕುಲಾಲ ಸಂಘದ ಸದಸ್ಯ ಸುಂದರ್ ಮುಡಿಪು, ಉಳ್ಳಾಲ ಕುಲಾಲ ಸಂಘದ ಸದಸ್ಯ ನವೀನ್ ಕುಲಾಲ್ ಪೆದಮಲೆ, ನಿತೇಶ್ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮಣ್ ಕುಲಾಲ್ ಅಗ್ರಬೈಲು ಸ್ವಾಗತಿಸಿದರು, ಕೇಶವ ಮಾಸ್ತರ್ ವಂದಿಸಿದರು, ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.