ಬೆಂಗಳೂರು : ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೇ ಮೊದಲ ಬಾರಿಗೆ ನ.14ರಿಂದ ಎರಡು ದಿನಗಳ ಮಕ್ಕಳ ಹಬ್ಬದ ಕಾರ್ಯಕ್ರಮ ಏರ್ಪಡಿಸಿದೆ. ಈ ಸಂದರ್ಭ ಮಕ್ಕಳ ಶೌರ್ಯ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಅರಳುತ್ತಿರುವ ಪ್ರತಿಭೆ ಪೆರ್ಡೂರಿನ ದೀಕ್ಷಾ ಡಿ. ಮೂಲ್ಯ ಕಲಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾಳೆ.
ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ ಒಟ್ಟು 26 ಮಕ್ಕಳನ್ನು ರಾಷ್ಟ್ರಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಗಿದ್ದು, ಅವರೆಲ್ಲರನ್ನೂ ಮಕ್ಕಳ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತದೆ.
ಪೆರ್ಡೂರಿನ ದಿನೇಶ್ ಮೂಲ್ಯ ಮತ್ತು ಶಶಿಕಲಾ ಮೂಲ್ಯ ದಂಪತಿಯ ಪುತ್ರಿ ದೀಕ್ಷಾ ಹೆಬ್ರಿಯ ಅಮೃತಾ ಭಾರತಿ ವಿದ್ಯಾಕೇಂದ್ರ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಈಕೆ 2014ರಲ್ಲಿ ಲಲಿತಕಲಾ ಸೆಂಟರ್ ವತಿಯಿಂದ ಆಯೋಜಿಸಲ್ಪಟ್ಟ 9ನೇ ರಾಷ್ಟ್ರಮಟ್ಟದ ವಿದ್ಯಾರ್ಥಿ ಮತ್ತು ಶಿಕ್ಷಕರ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಂಗಾರದ ಪದಕ, 2013-14 ರಲ್ಲಿ ದೆಹಲಿಯಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ರವಿವರ್ಮ ಅಕಾಡಮಿ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮಂಡ್ಯದಲ್ಲಿ ಕರ್ನಾಟಕ ಪ್ರಗತಿಪರ ಸೇವಾ ಸಮಿತಿಯ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಲ್ಪಟ್ಟ ವರ್ಣ ಚಿತ್ರಕಲಾ ಸ್ಪರ್ಧೆಯಲ್ಲಿ 13ನೇ ಸ್ಥಾನ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಉಡುಪಿ ಕೃಷ್ಣ ಮಠದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ, ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2009 ರಲ್ಲಿ ಉದಯವಾಣಿಯ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹೀಗೆ ಅರುವತ್ತಕ್ಕೂ ಮಿಕ್ಕಿ ತಾಲೂಕು, ರಾಜ್ಯ, ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾಳೆ
.
ಚಿತ್ರಕಲೆಯೊಂದಿಗೆ ನೃತ್ಯ, ಸಂಗೀತ, ಪ್ರಬಂಧ, ಕ್ರೀಡಾ ಕ್ಷೇತ್ರಗಳಲ್ಲಿಯೂ ಭಾಗವಹಿಸುತ್ತಾ, ಶಾಲೆಯಲ್ಲಿ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿ ತೇರ್ಗಡೆಗೊಳ್ಳುತ್ತಿರುವ ಈಕೆ ಸಕಲ ಕಲಾವಲ್ಲಭೆ. ಹಲವಾರು ಸಂಘ ಸಂಸ್ಥೆಗಳು ಆಯೋಜಿಸಿದ ಚಿತ್ರಕಲಾ ಮತ್ತು ವರ್ಣ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಪ್ರಶಸ್ತಿಗಳನ್ನು ಪಡೆದು ಪ್ರಶಂಸೆಗೆ ಪಾತ್ರಳಾಗಿದ್ದು, ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.