ವೇಣೂರು : ನಾವು ಕೇವಲ ಚಿಂತನೆ ಮಾಡಿಕೊಂಡರೆ ಸಾಲದು, ಸಾಧಿಸಬೇಕು ಎಂದು ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಬದುಕಿದರೆ ಜೀವನದಲ್ಲಿ ಯಶಸ್ವಿ. ತನ್ನ ಜೀವಿತೋಪಾಯದ ಕೃಷಿವಿದ್ಯೆಯಲ್ಲಿ ಉತ್ತಮ ಸಾಧನೆ ಮಾಡಿ ಯಶಸ್ವಿಯಾದ ಕೃಷಿಕ ದಂಪತಿಗಳ ಕಥೆಯಿದು. ಕೃಷಿಯಲ್ಲೂ ವಿಭಿನ್ನ ಸಾಧನೆ ಮಾಡಿ ಯಶ ಕಂಡವರು ವೇಣೂರು ಮುದ್ದಾಡಿ ಬಳಿಯ ಸಾಂತ್ರೊಟ್ಟು ಧರ್ಣಪ್ಪ ಮೂಲ್ಯ-ಲಲಿತಾ ದಂಪತಿಗಳು.
ವೇಣೂರು ಪರಿಸರದಲ್ಲಿ ಅಡಿಕೆ, ರಬ್ಬರು ಬಿಟ್ಟು ಬೇರೇನೂ ಕೃಷಿ ಒಲ್ಲದ ಮಧ್ಯೆ ತರಕಾರಿ ಕೃಷಿ ಎಂದರೆ ಹುಬ್ಬೇರಿಸುವಂತಹ ಸ್ಥಿತಿಯಲ್ಲಿ ಅದೇ ಕೃಷಿಯಲ್ಲಿ ಸಾಧನೆ ಮಾಡಿ ಇದೂ ಒಂದು ಲಾಭದಾಯಕ ಕಾಯಕ ಎಂದು ತೋರಿಸಿಕೊಟ್ಟವರು ಈ ದಂಪತಿಗಳು.
ಹಲವಾರು ವರ್ಷಗಳ ಹಿಂದೆ ಯಾವ ಕೃಷಿಕನ ಮನೆಗೆ ಹೋದರೂ ಸಮೃದ್ಧ ಭತ್ತ ಜೊತೆಯಲ್ಲೇ ಸಾಕಷ್ಟು ತರಕಾರಿ ಬೆಳೆಯುವ ಪದ್ಧತಿಯಿತ್ತು ಬರಬರುತ್ತಾ ಭತ್ತ ಕಾಣೆಯಾಯಿತು. ತರಕಾರಿಗಳು ಘಟ್ಟದಿಂದ ಬಂದಿಳಿಯಲು ಆರಂಭವಾಯಿತು. ಮೊದಮೊದಲು ಅಂಗಡಿಯಿಂದ ತರಕಾರಿ ತರುವುದೇ ಸುಖ ಎಂದು ಭಾವಿಸಲಾಗಿತ್ತಾದರೂ ಅತಿಬೇಡಿಕೆ ಪರಿಣಾಮ ತರಕಾರಿಗಳು ಗುಣಮಟ್ಟವನ್ನು ಕಳೆದುಕೊಂಡವು . ಅದಕ್ಕಿಂತಲೂ ಭಯಾನಕ ವಿಷಯವೆಂದರೆ ತರಕಾರಿ ಸಮೃದ್ಧವಾಗಿ ಬೆಳೆಸುವಲ್ಲಿ ಹೇರಳ ಕೀಟನಾಶಕ ಉಪಯೋಗಿಸುತ್ತಿರುವುದರಿಂದ ಆ ವಿಷಭರಿತ ತರಕಾರಿ ನಾವು ಅನಿವಾರ್ಯವಾಗಿ ಖರೀದಿಸುತಿದ್ದೇವೆ ಎಂಬ ಅಂಶವೇ ನಮ್ಮ ಗಮನಕ್ಕೆ ಬಂದಿಲ್ಲದಿರುವುದು.
ಈ ಎಲ್ಲಾ ಚಿಂತೆಗಳ ಮಧ್ಯೆ ನಮ್ಮ ತರಕಾರಿ ನಾವೇ ಉತ್ಪಾದಿಸುವದು ಉತ್ತಮ ಎಂದು ಈ ಕೃಷಿಕರ ಅನಿಸಿಕೆ. ತರಕಾರಿ ಕೃಷಿಯಲ್ಲಿ ಸಾಂಪ್ರದಾಯಿಕ ಪದ್ಧತಿಯೊಂದಿಗೆ ಆಧುನಿಕ ಕ್ರಮಗಳನ್ನು ಅನುಸರಿಸುವುದರಿಂದ ಲಾಭ ನಿಶ್ಚಿತ ಎಂದು ಈ ರೈತರ ಖಚಿತ ನುಡಿ. ತಮಗಿರುವ 1 ಎಕ್ರೆ ಭೂಮಿಯಲ್ಲಿ ಎರಡು ಬೆಳೆ ತೆಗೆಯುತಿದ್ದ ಇವರು ತರಕಾರಿ ಕೃಷಿಯಲ್ಲಿ ತನಗಿರುವ ವಿಶೇಷ ಆಸಕ್ತಿಯಂದಾಗಿ ವ್ಯಾವಹಾರಿಕವಾಗಿ ತರಕಾರಿ ಬೆಳೆದು ನೋಡೋಣ ಎಂಬ ಪ್ರಾಯೋಗಿಕ ಹೆಜ್ಜೆ ಯಶಸ್ವಿಯಾಗಿ ಬಳಿಕ ತರಕಾರಿ ಕೃಷಿಯನ್ನೇ ಪ್ರಧಾನವಾಗಿ ಮಾಡಿಕೊಂಡರು.
ಕೃಷಿ ಕ್ಷೇತ್ರದಲ್ಲಿ ಹಿರೇಕಾಯಿ, ತೊಂಡೆಕಾಯಿ ದೊಡ್ಡ ಚಪ್ಪರ ಹಾಕಿ ಬೆಳೆಸಿದರೆ ನಡುನಡುವೆ ಸಾಲುಗಳಲ್ಲಿ ಬದನೆ, ಸೌತೆ ಆರೋಗ್ಯವಾಗಿ ಬೆಳೆದಿವೆ. ವಾರಕ್ಕೊಮ್ಮೆ ವೇಣೂರು ತರಕಾರಿ ಅಂಗಡಿಗಳಿಗೆ ಮಾರಾಟ ಮಾಡಿದರೆ, ರಖಂ ಮಾರಾಟ ಮೂಡಬಿದ್ರಿ, ಬೆಳ್ತಂಗಡಿ ಸಂತೆ ಮಾರ್ಕೆಟುಗಳಲ್ಲಿ ಮಾರುತ್ತಾರೆ. ಊರಿನ ಬೆಳೆಯಾದ್ದರಿಂದ ನನ್ನ ಸರಕಿಗೆ ಮೊದಲ ಪ್ರಾಶಸ್ತ್ಯ ಎನ್ನುವ ಧರ್ಣಪ್ಪರು ಸಲಹೆ ಕೇಳಿದವರಿಗೆ ಹೇಳುವ ಕಿವಿ ಮಾತು ಇಷ್ಟೇ. ತರಕಾರಿ ಸ್ವoತ ಬೆಳೆಸಿ. ಮನೆಯಂಗಳದಲ್ಲೂ ಬೆಳೆಸಬಹುದು ಮನಸ್ಸಿದ್ದರೆ ತಾರಸಿ ಮೇಲೂ ಮಣ್ಣಿನ ಗೋಣಿಗಳನ್ನು ಕುಂಡಗಳಂತೆ ಬಳಸಿ ಬೆಳೆಸಬಹುದು. ವ್ಯಾಪಾರ ಉದ್ದೇಶದಿಂದ ಅಲ್ಲವಾದರೂ ಉತ್ತಮ, ತಾಜಾ ತರಕಾರಿ ನಮ್ಮ ಅಂಗಳದಲ್ಲೇ ನಮಗೆ ದೊರೆತರೆ ಅದು ಖುಷಿಯಲ್ಲವೇ..?
ಉತ್ತಮ ಹೈನುಗಾರ ಪ್ರಶಸ್ತಿ
ಬಜಿರೆ ಹೊಸಪಟ್ನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅತೀ ಹೆಚ್ಚು ಹಾಲು ಪೂರೈಸುತ್ತಿರುವವರೂ ಇದೇ ದಂಪತಿಗಳು. ಇದಕ್ಕಾಗಿ ಇವರು 2013-14ನೇ ಸಾಲಿನ ಸಾಮಾನ್ಯ ವರ್ಗದ ಹಸಿರು ಮೇವು ಅಭಿವೃದ್ಧಿ ಪಡಿಸಿದ ಉತ್ತಮ ಹೈನುಗಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಉತ್ತಮ ತಳಿಯ 18 ಹಸುಗಳನ್ನು ಸಾಕಿ ಹೈನುಗಾರಿಕೆಯಲ್ಲಿ ತಂತ್ರಜ್ಞಾನಗಳನ್ನು ಬಳಸಿ ದಿನವೊಂದಕ್ಕೆ 75ರಿಂದ 80 ಲೀಟರ್ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. `ಈ ಸಾಧನೆಗೆ ಪತ್ನಿ ಲಲಿತಾ ಹಾಗೂ ಪುತ್ರ ಮದುಸೂಧನ ಅವರ ತುಂಬು ಪ್ರೋತ್ಸಾಹ, ಬೆಂಬಲ ಸಹಕಾರಿಯಾಗಿದೆ’ ಎಂದು ಧರ್ಣಪ್ಪ ಮೂಲ್ಯ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.