ಸ್ವಚ್ಛಾಸ್ತ್ರದ ಮೂಲಕ ಯುವ ಜನಾಂಗಕ್ಕೆ ಸ್ಫೂರ್ತಿ ಸೆಲೆಯಾದ ಯುವ ಉದ್ಯಮಿ
ಈಗಿನ ಪರಿಸ್ಥಿತಿಗೆ ಅನುಗುಣವಾಗುವಂತೆ ತಾಂತ್ರಿಕ ವಿಧಾನದಿಂದ ಮಳೆಯ ನೀರು ಸಂರಕ್ಷಣೆ ಮತ್ತು ಘನತ್ಯಾಜ್ಯ ವಿಲೇವಾರಿ ಈ ಎರಡು ಕ್ಷೇತ್ರದಲ್ಲೂ ತಮ್ಮ ಜ್ಞಾನ ಮತ್ತು ಕೌಶಲದಿಂದ ಅಮೂಲ್ಯ ಕೊಡುಗೆ ನೀಡುತ್ತಿರುವ ಭರತ್ ರಾಜ್, ನಿರುದ್ಯೋಗಿ ಯುವಕ-ಯುವತಿಯರಿಗೆ, ಕಲಿಕೆಯ ಜೊತೆ ಗಳಿಕೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕುರಿತು ತರಬೇತಿಯ ಜೊತೆ ಉದ್ಯೋಗ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಪರೋಪಕಾರದ ಜೊತೆಗೆ ಬದುಕಿಗಾಗಿ ಸ್ವಂತ ಉದ್ಯಮ ಕಟ್ಟಿ, ಜನರಲ್ಲಿ ಮಳೆ ನೀರು ಕೊಯ್ಲು (Rainwater harvesting) ಬಗ್ಗೆ ಜಾಗೃತಿ ಮೂಡಿಸುತ್ತಾ, ಹಲವಾರು ಕಾರ್ಯಾಗಾರ ನಡೆಸಿರುವ, ಮಾಧ್ಯಮಗಳಲ್ಲಿ ಮಹತ್ವದ ಬಗ್ಗೆ ತಿಳಿಸುತ್ತಾ ಬಂದಿರುವ ಯುವಕ ಮಂಗಳೂರಿನ ಭರತ್ ರಾಜ್ ಮುಂಡೋಳಿ ಯುವಕ-ಯುವತಿಯರಿಗೆ ಸ್ಫೂರ್ತಿ-ಆದರ್ಶ.
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): `ಮಳೆ ನೀರು ಕೊಯ್ಲು’ ಅಂದರೆ ಇದೇನು ತೀರಾ ಕಷ್ಟಕರ ತಂತ್ರವೇನವಲ್ಲ, ಭಾರಿ ವೆಚ್ಚದ ಯೋಜನೆಯೂ ಅಲ್ಲ, ಅತ್ಯಂತ ಸರಳ ವಿಧಾನ. ನೀರಿನ ಕೊರತೆ ನೀಗಿಸಲು ಸುಲಭ ಸಾಧನ. ಮಳೆ ನೀರು ಸಂಗ್ರಹ , `ಮಳೆ ನೀರು ಕೊಯ್ಲು ಅಥವಾ ನೀರು ಸುಗ್ಗಿ… ಹೀಗೆ ಏನೇ ಕರೆಯಿರಿ, ಒಟ್ಟಾರೆ ಆಗಸದಿಂದ ಧೋಗುಡತ್ತ ಮಳೆ ಸುರಿಯಲಾರಂಭಿಸಿತೆಂದರೆ ಅದನ್ನು ನಾವು ಹಿಡಿದುಕೊಳ್ಳಲು ಮುಂದಾಗಬೇಕಷ್ಟೆ. ಅದೇ ಮಳೆ ನೀರು ಕೊಯ್ಲು. ಅರೆ, ಇಷ್ಟೇನಾ…? ಅಂದರೆ ಹೌದು ಇಷ್ಟೆ. ಅದು ಹೇಗಾದರೂ ಮಾಡಿ, ಒಟ್ಟಿನಲ್ಲಿ ಬಿದ್ದ ಒಂದು ಹನಿಯೂ ಬೇರೆಲ್ಲೂ ಹರಿದುಹೋಗಿ ವೇಸ್ಟಾಗಬಾರದು. ಅದರ ಕೈಕಾಲು ಕಟ್ಟಿಯಾದರೂ ಸರಿ ತಂದು ತೊಟ್ಟಿಯಲ್ಲಿಟ್ಟು ಬಿಟ್ಟಿಹೋಗದಂತೆ ನೋಡಿಕೊಂಡರಾಯಿತು. ಇದು ನಮ್ಮ ಒಬ್ಬೊಬ್ಬರ ಸ್ವಾರ್ಥಕ್ಕಾಗಿ ಮಾಡುವ ಕೆಲಸ ಅಲ್ಲ.. ಮಳೆಗಾಲದ ನಾಲ್ಕು ತಿಂಗಳು ಈ ಕೆಲಸ ಮಾಡಿದರೆ ಇದರಿಂದ ನಾಡಿನ ಎಲ್ಲರಿಗೂ ಉಪಕಾರವಿದೆ. ಹೀಗೆ ಪರೋಪಕಾರದ ಜೊತೆಗೆ ಬದುಕಿಗಾಗಿ ಸ್ವಂತ ಉದ್ಯಮ ಕಟ್ಟಿ, ಜನರಲ್ಲಿ ಮಳೆ ನೀರು ಕೊಯ್ಲು (Rainwater harvesting) ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿರುವ ಯುವಕ ಮಂಗಳೂರಿನ ಭರತ್ ರಾಜ್ ಮುಂಡೋಳಿ.
ನೀರ ಬರ ನೀಗಿಸಲು ಮಳೆ ನೀರು ಸಂಗ್ರಹಣೆ ಸುಲಭ ಪರಿಹಾರ ಎಂಬುದನ್ನು ಮನಗಂಡಿರುವ ಭರತ್ ರಾಜ್ ತಜ್ಞರ ಸಹಕಾರದೊಂದಿಗೆ ಈ ಬಗ್ಗೆ ಸಾಕಷ್ಟು ಅಧ್ಯಯನ, ಪ್ರಯೋಗ ಮತ್ತು ಸಂಶೋಧನೆಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಮಳೆ ನೀರು ಕೊಯ್ಲು ತಯಾರಿಕಾ ಘಟಕಕ್ಕೆ ಬೇಕಾಗುವ ಹೆಚ್ಚುಕಡಿಮೆ ಎಲ್ಲಾ ಯಂತ್ರಗಳನ್ನು ಇವರೇ ಸಿದ್ಧಪಡಿಸುತ್ತಾರೆ. ಇದಕ್ಕಾಗಿ `ಭರತ್ ಕಾರ್ಪೊರೇಷನ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಕಳೆದ ಒಂಬತ್ತು ವರ್ಷಗಳಿಂದ ಈ ಸಂಸ್ಥೆ ಮಂಗಳೂರು ಮತ್ತು ಪುತ್ತೂರು ಆಸುಪಾಸಿನಲ್ಲಿ ಪ್ರಸಿದ್ಧವಾಗಿದೆ.
”ಉದ್ಯಮಿಯಾಗಬೇಕಾದವನಿಗೆ ಆತ್ಮವಿಶ್ವಾಸದೊಂದಿಗೆ ಸೃಜನಶೀಲತೆ ಇರಬೇಕು. ಇತರರಿಗೂ ಮುನ್ನವೇ ಅವಕಾಶವನ್ನು ಗುರುತಿಸುವವನೇ ನಿಜವಾದ ಉದ್ಯಮಿ. ಹಣಕ್ಕಾಗಿ ಆತ ಅವಕಾಶ ಕಳೆದುಕೊಳ್ಳುವುದಿಲ್ಲ. ತನ್ನ ದೃಷ್ಟಿಕೋನವನ್ನು ಹಂಚಿಕೊಳ್ಳಬಲ್ಲ ಅದ್ಭುತ ತಂಡವನ್ನು ಕಟ್ಟುತ್ತಾನೆ. ಅದನ್ನು ಕಾರ್ಯರೂಪಕ್ಕೆ ತರುತ್ತಾನೆ” ಎಂಬ ಮಾತಿನಂತೆ ಮುಂದೆ ಒದಗಿಬರಲಿರುವ ಭೀಕರ ಬರಗಾಲವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಲಾಭವೋ, ನಷ್ಟವೋ ಎಂಬ ಗೊಂದಲಗಳ ಲೆಕ್ಕಾಚಾರದಲ್ಲಿ ಮುಳುಗದೇ ಎಣಿಸಿದ್ದನ್ನು ಸಾಧಿಸಬೇಕೆಂಬ ಹಠದಿಂದ ಮುನ್ನುಗ್ಗಿರುವ ಭರತ್ ಅವರ ಉದ್ಯಮ ಇಂದು ಯಶಸ್ವಿ ಹಂತಕ್ಕೆ ತಲುಪಿದೆ.
ಚಾವಣಿ ನೀರು ಸಂಗ್ರಹ ಅಥವಾ ತಕ್ಷಣದ ಬಳಕೆ, ಬೋರ್ವೆಲ್, ಬಾವಿಗಳ ಪುನಶ್ಚೇತನ, ಶಾಶ್ವತ ಕ್ರಮವಾಗಿ ಅಂತರ್ಜಲ ವೃದ್ಧಿಗೆ ನೀರಿಂಗಿಸುವುದು. ಹೀಗೇ ಮೂರು ಪ್ರಮುಖ ಕ್ರಮಗಳು ಬಳಕೆಯಲ್ಲಿದ್ದು, ಈ ಅಂತರ್ಜಲ ಮರುಪೂರಣದ ಅಂದರೆ ಮಳೆ ನೀರನ್ನು ವೈಜ್ಞಾನಿಕ, ಸಾಂಪ್ರದಾಯಿಕ ರೀತಿಯಲ್ಲಿ ಸಂಗ್ರಹಿಸುವ, ಸಂಗ್ರಹಿಸಿ ಬಳಸುವ, ಇಂಗಿಸುವ ಎಲ್ಲ ಕ್ರಮಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ಭರತ್ ರಾಜ್ ಹೊಂದಿದ್ದು, ಈ ಬಗ್ಗೆ ಸಾರ್ವಜನಿಕರಿಗೆ, ಅರಿವು, ಮಾರ್ಗದರ್ಶನ ನೀಡುತ್ತಾರೆ.
ಘನತ್ಯಾಜ್ಯ ವಿಲೇವಾರಿಯ ಪರಿಸರಸ್ನೇಹಿ ಯೋಜನೆ ಸ್ವಚ್ಛಾಸ್ತ್ರ ಯಂತ್ರ ಪೂರೈಕೆ :
ಕೇವಲ ಮಳೆ ನೀರು ಕೊಯ್ಲು ಘಟಕ ಮಾತ್ರವಲ್ಲದೆ ಇಂದು ಎಲ್ಲೆಡೆ ದೊಡ್ಡ ತಲೆನೋವಾಗಿ ಕಾಡುತ್ತಿರುವ ಘನತ್ಯಾಜ್ಯ ವಿಲೇವಾರಿಗೆ ಮುಕ್ತಿ ನೀಡಬಲ್ಲ , ಸಮಗ್ರ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯಡಿ ವೈಜ್ಞಾನಿಕವಾಗಿ ವಿಲೇವಾರಿಯ ಸ್ವಚ್ಛಾಸ್ತ್ರ ಯಂತ್ರಗಳ ಪೂರೈಕೆದಾರರಾಗಿಯೂ ಭರತ್ ರಾಜ್ ಗುರುತಿಸಿಕೊಂಡಿದ್ದಾರೆ.
ತಮ್ಮ ಅಗ್ನಿಶುದ್ಧಿ ಕನ್ಸಲ್ಟೆನ್ಸಿ ಮೂಲಕ ಯಂತ್ರಗಳ ಪೂರೈಕೆ ಮಾಡುತ್ತಿರುವ ಭರತ್, “ಜನವಸತಿ ಪ್ರದೇಶದಲ್ಲಿ ಕಸದ ರಾಶಿಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಲು ನೂತನ ತಂತ್ರಜ್ಞಾನ ಸುಲಭ ಮಾರ್ಗ. ಇದು ಪರಿಸರಸ್ನೇಹಿ ಯೋಜನೆಯಾಗಿದ್ದು, ಶಕ್ತಿಯ ಮರುಬಳಕೆ ಸಾಧ್ಯ. ಗಲೀಜು ನಾರುವ ಹಾಗೂ ಹೊಗೆಯಿಂದ ತೊಂದರೆಯಾಗುವ ಸಂದರ್ಭ ಇಲ್ಲಿಲ್ಲ. ಹೆಚ್ಚು ಕಸ ಉತ್ಪಾದಿಸುವ ವಾಣಿಜ್ಯ ಕಟ್ಟಡಗಳು ಈ ಯಂತ್ರ ಅಳವಡಿಸಿಕೊಂಡರೆ ಕಸದ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಸಾಧ್ಯ” ಎನ್ನುವ ಭರತ್ ರಾಜ್, ಜಿಲ್ಲಾ ಪಂಚಾಯತ್ ಮೂಲಕ ಈ ತಂತ್ರಜ್ಞಾನವನ್ನು ಮೊದಲಿಗೆ ಸುಬ್ರಹ್ಮಣ್ಯದಲ್ಲಿ ಸ್ಥಾಪಿಸಲು ಅನುಮತಿ ಸಿಕ್ಕಿದೆ ಎನ್ನುತ್ತಾರೆ.
ಒಟ್ಟು ಹತ್ತು ಸೆಂಟ್ಸ್ ಜಾಗದಲ್ಲಿ ಸ್ಥಾಪಿಸಬಹುದಾದ ಈ ಯಂತ್ರಕ್ಕೆ ಇಂಧನ ಅಥವಾ ವಿದ್ಯುತ್ ನ ಅಗತ್ಯ ಇಲ್ಲ . ಈ ತಂತಜ್ಞಾನದಲ್ಲಿ ಬೆಂಕಿ ಇದ್ದರೆ ಕಬ್ಬಿಣ ಮತ್ತು ಗ್ಲಾಸು ಹೊರತುಪಡಿಸಿ ಉಳಿದೆಲ್ಲಾ ಘನವಸ್ತುಗಳು ಸುಟ್ಟು ಬೂದಿಯಾಗುತ್ತದೆ. ಇದರಲ್ಲಿ ವಾಯುಮಾಲಿನ್ಯ ಚಿಂತೆ ಇಲ್ಲ. ಕಾರ್ಬನ್ ಡೈ ಆಕ್ಸೈಡ್ ಗಳಿಗೆ ಸೇರದಂತೆ ಪ್ರತ್ಯೇಕಿಸುವ ತಂತ್ರಜ್ಞಾನ ಈ ಯಂತ್ರದಲ್ಲಿದೆ. ಇದರಲ್ಲಿ ಕಸ ನಿರ್ವಹಣೆ ಜೊತೆಗೆ ವಿದ್ಯುತ್ ಉತ್ಪಾದನೆ ಕೂಡ ಮಾಡಬಹುದಾಗಿದೆ.
ಮೊದಲ ಹಂತದಲ್ಲಿ ಇದು ತುಸು ಖರ್ಚಿನ ಬಾಬತ್ತಾಗಿ ಕಂಡರೂ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಆಡಳಿತಗಳು, ಖಾಸಗಿ ಸಂಸ್ಥೆಗಳು ಅನುಷ್ಠಾನಗೊಳಿಸಲು ಮುಂದಾದರೆ ಈ ಪ್ರಯೋಗ ಯಶಸ್ವಿಯಾಗುವುದರಲ್ಲಿ ಸಂಶಯ ಇಲ್ಲ.
ಒಟ್ಟಾರೆ ಈಗಿನ ಪರಿಸ್ಥಿತಿಗೆ ಅನುಗುಣವಾಗುವಂತೆ ತಾಂತ್ರಿಕ ವಿಧಾನದಿಂದ ಮಳೆಯ ನೀರು ಸಂರಕ್ಷಣೆ ಮತ್ತು ಘನತ್ಯಾಜ್ಯ ವಿಲೇವಾರಿ ಈ ಎರಡು ಕ್ಷೇತ್ರದಲ್ಲೂ ತಮ್ಮ ಜ್ಞಾನ ಮತ್ತು ಕೌಶಲದಿಂದ ಅಮೂಲ್ಯ ಕೊಡುಗೆ ನೀಡುತ್ತಿರುವ ಭರತ್ ರಾಜ್, ನಿರುದ್ಯೋಗಿ ಯುವಕ-ಯುವತಿಯರಿಗೆ, ಕಲಿಕೆಯ ಜೊತೆ ಗಳಿಕೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕುರಿತು ತರಬೇತಿಯ ಜೊತೆ ಉದ್ಯೋಗ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಈ ಬಗ್ಗೆ ಆಸಕ್ತಿ ಇರುವವರು https://bharathcorporation.com/ ಅಥವಾ +91 89513 31605 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.