ಕುಂದಾಪುರ : ಕಳೆದ ವರ್ಷದ ಅಕ್ಟೋಬರ್ 21ರಂದು ಬಿದ್ಕಲ್ಕಟ್ಟೆ ಸರಕಾರಿ ಪ್ರೌಢಶಾಲೆ ಎದುರಿನ ನಿರ್ಜನ ಪ್ರದೇಶದಲ್ಲಿ ಹತ್ಯೆಗೀಡಾದ ನಾಲ್ತೂರುಜಡ್ಡು ನಿವಾಸಿ ಸೀತಾ ಕುಲಾಲ್ (65) ಪ್ರಕರಣ ಇನ್ನೂ ನಿಗೂಢವಾಗಿ ಉಳಿದಿದೆ. ವರ್ಷ ಕಳೆದರೂ ಪ್ರಕರಣದ ಸ್ಪಷ್ಟ ಚಿತ್ರಣ ಪಡೆಯಲು ಕೋಟ ಪೊಲೀಸರು ವಿಫ಼ಲರಾಗಿದ್ದಾರೆ . ಮರಣೋತ್ತರ ಪರೀಕ್ಷೆಯ ವರದಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದರೂ ಅದರ ಫ಼ಲಿತಾಂಶ ಏನು ಎಂಬುದೂ ಇದುವರೆಗೆ ಬಯಲಾಗಿಲ್ಲ. ಬಡವರಾಗಿ ಹುಟ್ಟಿ ಅನುಮಾನಾಸ್ಪದ ರೀತಿ ಸತ್ತರೆ ಪ್ರಕರಣ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ.
ಸೀತಾ ಕುಲಾಲ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದರು. ಅಕ್ಟೋಬರ್ 21ರ ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಸಂಘದ ಹಣ ಪಾವತಿಸಲೆಂದು ಬಿದ್ಕಲ್ಕಟ್ಟೆಯ ಹೊಂಬಾಡಿ ಕಾಳಿಕಾಂಬಾ ಗ್ರೂಪಿನ ಸುವಿಧಾ ಸಂಗ್ರಹಣಾ ಕೇಂದ್ರಕ್ಕೆ ಆಟೋ ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿ ಹಣ ಪಾವತಿಸಿ ಬಿದ್ಕಲ್ಕಟ್ಟೆಯ ಅಂಗಡಿಯೊಂದರಲ್ಲಿ ತಂಪು ಪಾನೀಯ ಕುಡಿದು ಹಿಂದಿನ ಬಾಕಿ ಹಣವನ್ನೂ ಪಾವತಿಸಿ ಮನೆ ಕಡೆ ತೆರಳಿದ್ದರು.
ಮಧ್ಯಾಹ್ನವಾದರೂ ವೃದ್ಧೆ ಸೀತಾ ಅವರು ಮನೆಗೆ ಬಾರದ ಕಾರಣ ಮನೆಯವರಲ್ಲಿ ಅನುಮಾನವುಂಟಾಗಿತ್ತು. ಇದೇ ಸಂದರ್ಭ ಬಿದ್ಕಲ್ಕಟ್ಟೆಯ ಜ್ಯೂನಿಯರ್ ಕಾಲೇಜು ಎದುರುಗಡೆ ಇವರ ಮನೆಗೆ ನಡೆದು ಹೋಗುವ ಮಣ್ಣಿ ರಸ್ತೆಯಲ್ಲಿ ಮುಖ್ಯ ರಸ್ತೆಯಿಂದ ಸುಮಾರು 150 ಮೀಟರ್ ದೂರದಲ್ಲಿ ಸುಗೋಡಿ ಎಂಬಲ್ಲಿ ಎಡಬದಿಯಲ್ಲಿರುವ ಗೇರುಹಾಡಿಯಲ್ಲಿ ಸೊಪ್ಪಿಗೆಂದು ಹೋದ ಮಹಿಳೆಯೊಬ್ಬರಿಗೆ ಸೀತಾ ಕುಲಾಲ್ ಅವರ ಮೃತದೇಹ ಗೋಚರಿಸಿತ್ತು.
ಸಾವಿನ ಸುತ್ತ ಅನುಮಾನ : ಸೀತಾ ಕುಲಾಲ್ ಅವರ ಮುಖ ಜಜ್ಜಿದ ಸ್ಥಿತಿಯಲ್ಲಿದ್ದು, ದೇಹದ ಇತರ ಯಾವುದೇ ಭಾಗಕ್ಕೂ ಗಾಯವಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು . ಆದರೆ ಸ್ಥಳೀಯವಾಗಿ ಚಿರತೆ ಹಾವಳಿಯಿದ್ದು, ಚಿರತೆ ಆಕ್ರಮಣಕ್ಕೆ ವೃದ್ಧೆ ತುತ್ತಾದರೇ ಎನ್ನುವ ಪ್ರಶ್ನೆಯೂ ಜನರಲ್ಲಿ ಮೂಡಿತ್ತಾದರೂ, ಚಿರತೆ ದಾಳಿಯಾದರೆ ಮುಖ ಮತ್ತು ತಲೆಗೆ ಮಾತ್ರ ಗಾಯವಾಗಲು ಸಾಧ್ಯವಿಲ್ಲ ಎನ್ನುವ ಅನುಮಾನಗಳಿತ್ತು.
ಸೀತಾ ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಂಡವರಲ್ಲ. ಕಳೆದ ಒಂಭತ್ತು ವರ್ಷಗಳಿಂದ ನವೋದಯ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದ ಅವರು ಕಳೆದ ವರ್ಷವಷ್ಟೇ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದರು. ಇದುವರೆಗೆ ಅವರು ಸಂಘದಿಂದ ಸಾಲ ತೆಗೆದಿಲ್ಲ. ಕಳೆದ ಹತ್ತು ವರ್ಷಗಳಿಂದ ಉಳಿತಾಯವನ್ನೇ ಮಾಡುತ್ತಾ ಬಂದಿದ್ದು, ಉಳಿತಾಯದ ಹಣ ದೋಚುವ ಉದ್ದೇಶವಿರಬಹುದೇ ಎನ್ನುವ ಅನುಮಾನಗಳೂ ಹಲವರಲ್ಲಿ ಮೂಡಿತ್ತು . ಅಲ್ಲದೇ ಸೀತಾ ಕುಲಾಲ್ ಧರಿಸಿದ್ದ ಆಭರಣಗಳೂ ಹಾಗೇ ಇದ್ದು, ಆಭರಣಕ್ಕಾಗಿ ನಡೆದ ಕೊಲೆ ಅಲ್ಲವೆಂಬುದೂ ಸ್ಪಷ್ಟವಾಗಿತ್ತು. ಸಂಬಂಧಿಕರಲ್ಲಿ ಪಾಲು ಪಂಚಾಯಿತಿ ತಕರಾರು ಇತ್ತೆಂದು ಹೇಳಲಾಗುತ್ತಿದ್ದರೂ ಕೊಲೆಯ ಮಟ್ಟಿಗೆ ಹೋಗುವ ದ್ವೇಷವಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಮಣ್ಣು ರಸ್ತೆಯ ಪಕ್ಕದ ಚರಂಡಿಯಿಂದ ಹಾಡಿಯೊಳಗೆ ಹೋಗಲು ಎತ್ತರವಿದ್ದು ವೃದ್ಧೆ ಅಲ್ಲಿ ಹತ್ತಿ ಹೋಗಲು ಕಾರಣವೇನು ಎನ್ನುವುದೂ ಅಸ್ಪಷ್ಟವಾಗಿದೆ.
ವಿಕೃತ ಮನಸ್ಥಿತಿಯವರ ಅತ್ಯಾಚಾರ ಪ್ರಯತ್ನದಿಂದ ಅಥವಾ ಸರಗಳ್ಳರ ದುಷ್ಕೃತ್ಯಕ್ಕೆ ಮಹಿಳೆ ಬಲಿಯಾಗಿರಬಹುದೆಂಬ ಸ್ಥಳೀಯರ ಅನುಮಾನದ ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರೂ ಫಲಿತಾಂಶ ಶೂನ್ಯವಾಗಿದೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ಕೂಡ ರಚಿಸಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ನಿಗೂಢವಾಗಿ ಉಳಿಯದಿರಲಿ: ತಾಲೂಕಿನಲ್ಲಿ 2008ರಿಂದ ಈ ತನಕ ನಡೆದಿರುವ ಹತ್ಯೆ ಪ್ರಕರಣಗಳು ಇನ್ನೂ ನಿಗೂಢವಾಗಿ ಉಳಿದಿದೆ. 2008ರ ಬೆಳ್ವೆ ಉದಯ ಕುಮಾರ ಶೆಟ್ಟಿ, 2009ರ ಸುಬ್ರಾಯ ಹೊನ್ನಾವರ್, 2012ರ ಕುಸುಮ ಮೊಗವೀರ, ಈ ಸಾಲಿಗೆ ಸೀತಾ ಕುಲಾಲ್ತಿ ಪ್ರಕರಣವೂ ಸೇರದಿರಲಿ. ಇನ್ನಾದರೂ ಪೊಲೀಸ್ ಇಲಾಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ಬಡವರ ಪಾಲಿಗೆ ವರವಾಗಬೇಕು ಎಂಬುದು ನಮ್ಮ ಆಗ್ರಹ.