ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೂ ಬಣ್ಣ ನೀಡಿ, ಗಮನಸೆಳೆಯುವ ಚಿತ್ರವಾಗಿಸಲು ಕಲಾವಿದನಿಗೆ ಮಾತ್ರ ಸಾಧ್ಯ. ಇಂತಹ ಕಲೆಯನ್ನುಸ್ವಯಂ ಸಿದ್ಧಿಸಿಕೊಳ್ಳುವುದು ಸುಲಭ ಸಾಧ್ಯವಿಲ್ಲ. ಇದಕ್ಕೆ ನಿರಂತರ ಪರಿಶ್ರಮ, ಶ್ರದ್ಧೆ ಮುಖ್ಯವಾಗಿರುತ್ತದೆ. ಹೀಗೆ ಇತರರ ಕಲೆ, ಕಲೆಗಾರರನ್ನು ನೋಡಿ ಅನುಕರಣೆ ಮಾಡಿಕೊಂಡು ಇಂಥ ಆಸಕ್ತಿ ಬೆಳೆಸಿಕೊಂಡವಳು ಕಾರ್ಕಳದ ಅಕ್ಷತಾ ಕುಲಾಲ್.

ಎಳವೆಯಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅಕ್ಷತಾ, ಇದಕ್ಕಾಗಿ ಯಾರಿಂದಲೂ ಹೆಚ್ಚಿನ ಮಾರ್ಗದರ್ಶನ, ತರಬೇತಿ ಪಡೆಯದೇ ಸ್ವಯಂ ಕಲಿಕೆಯಲ್ಲಿ ತೊಡಗಿ ಇದೀಗ ತನ್ನದೇ ಪ್ರೋಟ್ರೈಟ್ ಬಿಡಿಸಬಲ್ಲಷ್ಟು ಪರಿಣಿತರಾಗಿದ್ದಾರೆ.
ಕಾರ್ಕಳ ಪೆರ್ವಾಜೆ ಪತ್ತೊಂಜಿಕಟ್ಟೆ ಈಶ್ವರ ಕುಲಾಲ್ ಹಾಗೂ ಸುಜಾತಾ ದಂಪತಿಯ ಮಗಳಾಗಿರುವ ಅಕ್ಷತಾ, ಭುವನೇಂದ್ರ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ. ಶಾಲಾ ದಿನಗಳಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸುತ್ತಿದ್ದ ಅಕ್ಷತಾ ಆ ಬಳಿಕ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು.
ಆಗಸದಲ್ಲಿ ಓಡುವ ಮೋಡಗಳು ಮರ, ಬೆಟ್ಟ ಗುಡ್ಡ, ಪ್ರಾಣಿ, ಪಕ್ಷಿಗಳ ಆಕೃತಿಯಾಗಿ ಕಂಡಾಗ ಅದನ್ನು ಪೆನ್ಸಿಲ್ ಹಿಡಿದು ಹಾಳೆಯ ಮೇಲೆ ಮೂಡಿಸಲು ಯತ್ನಿಸುತ್ತಿರುವ ಅಕ್ಷತಾ ರಂಗೋಲಿ ಕಲೆಯಲ್ಲೂ ಆಸಕ್ತಿ ಹೊಂದಿದ್ದು, ಲಾಕ್ ಡೌನ್ ಸಂದರ್ಭ ನಡೆದ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಚಿತ್ರಕಲೆಯಲ್ಲಿ ಸ್ವತಃ ಆಸಕ್ತಿ ಬೆಳೆಸಿಕೊಂಡಿರುವ ಅಕ್ಷತಾ ಈ ಕ್ಷೇತ್ರದಲ್ಲಿ ನೈಪುಣ್ಯತೆ ಬೆಳೆಸಿಕೊಂಡು ತಮ್ಮ ಕುಂಚಕ್ಕೆ, ಬದುಕಿಗೆ ಇನ್ನಷ್ಟು ಬಣ್ಣಗಳು ತುಂಬಲಿ ಎಂಬುದು ನಮ್ಮ ಹಾರೈಕೆ.





