ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬಡತನದ ಬೇಗೆಯ ನಡುವೆ ಅನಾರೋಗ್ಯಪೀಡಿತ ಹೆತ್ತವರು ಮತ್ತು ಅಪಘಾತಕ್ಕೀಡಾದ ತಮ್ಮನ ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದ ಯುವತಿಯ ಕುಟುಂಬಕ್ಕೆ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗದ ವತಿಯಿಂದ 48,000 ರೂ. ತುರ್ತು ಧನಸಹಾಯ ನೀಡಿ ಸಹಕರಿಸಲಾಯಿತು.
ಸುರತ್ಕಲ್ ಹೊಸಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಾಮಚಂದ್ರ ಮೂಲ್ಯ ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಇವರ ಪತ್ನಿ ಸಂಪಾ ಅವರು ಹಲವು ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಈ ನಡುವೆ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ಅವರ ಮಗ ಗಂಗಾಧರ್ ಬೈಕ್ ಅಪಘಾತದಲ್ಲಿ ಗಂಭೀರ ಏಟು ತಗುಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಯೋಗಕ್ಷೇಮದ ಜೊತೆಗೆ ಮನೆ ಖರ್ಚನ್ನು ಫಿಜ್ಜಾ ಕಂಪೆನಿಯಲ್ಲಿ ಅಲ್ಪ ಸಂಬಳಕ್ಕೆ ದುಡಿಯುತ್ತಿರುವ ಅವರ ಮಗಳು ನಿಶಾ ಮೂಲ್ಯ ನೋಡಿಕೊಳ್ಳುತ್ತಿದ್ದರು. ಇವರ ಕಷ್ಟದ ಬದುಕಿನ ಕುರಿತು `ಕುಲಾಲ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ದಾನಿಗಳಲ್ಲಿ ಧನಸಹಾಯ ನೀಡುವಂತೆ ಮನವಿ ಮಾಡಿತ್ತು. ಅಲ್ಲದೆ ಈ ಕುಟುಂಬಕ್ಕೆ ತುರ್ತು ನೆರವು ನೀಡಲು ಯೋಜಿಸಿ , ತಮ್ಮ ವಾಟ್ಸಾಪ್ ಗುಂಪಿನ ಸದಸ್ಯರಿಂದ ಧನ ಸಂಗ್ರಹಿಸಿ ನೀಡಲು ಮುಂದೆ ಬಂದಿತ್ತು. ಈ ಮನವಿಗೆ ಸ್ಪಂದಿಸಿರುವ ಗ್ರೂಪ್ ಸದಸ್ಯರು ಕೇವಲ ಒಂದೇ ವಾರದಲ್ಲಿ 48 ಸಾವಿರ ರೂ. ಹಣ ಸಹಾಯ ನೀಡಿ ಸಹಕರಿಸಿದ್ದರು. ಈ ಹಣವನ್ನು ಇಂದು (ಜೂನ್ 10) ಮಂಗಳೂರು ಮಂಗಳೂರು ಕೊಡಿಯಾಲ್ ಬೈಲ್ ಎಂಪೈರ್ ಮಾಲ್ ನಲ್ಲಿ ನಿಶಾ ಅವರ ಕುಟುಂಬಕ್ಕೆ ಚೆಕ್ ಮೂಲಕ ಹಸ್ತಾಂತರ ಮಾಡಲಾಯಿತು. ರಾಮಚಂದ್ರ ಮೂಲ್ಯ ಅವರು ಚೆಕ್ ಸ್ವೀಕರಿಸಿದರು.
ಹಣ ನೀಡುವ ಸಂದರ್ಭ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗದ ನಿರ್ವಾಹಕರಾದ ರಂಜಿತ್ ಕುಮಾರ್ ಮೂಡಬಿದ್ರೆ ಸದಸ್ಯರಾದ ರಮೇಶ್ ಕುಲಾಲ್ ವಗ್ಗ ಅವರು ಉಪಸ್ಥಿತರಿದ್ದು ಸಹಕರಿಸಿದರು.
ಮಿಡಿದ ಹೃದಯಗಳು : ಲಕ್ಷ ರೂ. ಸಂಗ್ರಹ
`ಹಾರ್ಟ್ ಪೇಶೆಂಟ್ ಅಪ್ಪ – ಮಾನಸಿಕ ಅಸ್ವಸ್ಥ ಅಮ್ಮ : ತಮ್ಮನ ಜೀವ ಉಳಿಸಲು ನೆರವು ನೀಡಿ : ಅಕ್ಕನ ಮೊರೆ‘ ಎಂಬ ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವೆಬ್ಸೈಟ್ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸುದ್ದಿಯನ್ನು ತಿಳಿದ ಹಲವು ಸಹೃದಯ ದಾನಿಗಳು ನಿಶಾ ಅವರ ಬ್ಯಾಂಕ್ ಖಾತೆಗೆ ಹಣ ಕಳಿಸುವ ಮೂಲಕ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ವರದಿ ಪ್ರಕಟವಾದ ಒಂದು ವಾರದಲ್ಲಿ ನೂರಾರು ದಾನಿಗಳು ತಮ್ಮ ಕೈಲಾದ ಮೊತ್ತವನ್ನು ಕಳಿಸಿಕೊಟ್ಟ ಫಲವಾಗಿ ಒಂದೂವರೆ ಲಕ್ಷಕ್ಕೂ ಅಧಿಕ ಹಣ ಸಂಗ್ರಹಗೊಂಡಿದೆ. ಗಂಗಾಧರ್ ಅವರ ಶಸ್ತ್ರಚಿಕಿತ್ಸೆ ನಡೆದಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಒಂದೆರಡು ದಿನದಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ. ತಮ್ಮ ಸಂಕಷ್ಟವನ್ನು ಅರಿತು ಸಹಾಯ ನೀಡಿದ ಎಲ್ಲರಿಗೂ ನಿಶಾ ಕುಟುಂಬಿಕರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ್ದು, ಎಲ್ಲರಿಗೂ ಭಗವಂತನ ಅನುಗ್ರಹ ಇರಲಿ ಎಂದು ಮನತುಂಬಿ ಹಾರೈಸಿದ್ದಾರೆ.