ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕವೇ ನೊಂದವರ ಧ್ವನಿಯಾಗಿ ಅವರ ಆಶಾಕಿರಣವಾಗಿರುವ `ಕುಲಾಲ್ ವರ್ಲ್ಡ್’ ತಂಡದಿಂದ ಮೂರು ಅಶಕ್ತ ಕುಟುಂಬಕ್ಕೆ 85,000 ರೂ. ಧನಸಹಾಯ ನೀಡಲಾಯಿತು.
`ಕುಲಾಲ್ ವರ್ಲ್ಡ್’ ಗ್ರೂಪ್ ವತಿಯಿಂದ ದಿ. ಹಾರ್ದಿಕ್ ಕುಲಾಲ್ ಸ್ಮರಣಾರ್ಥ 27,500 ರೂಪಾಯಿಯನ್ನು ಮಾರಕ ಲಿವರ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪಚ್ಚನಾಡಿ ಗ್ರಾಮದ ಸಂತೋಷ್ ನಗರ ನಿವಾಸಿ ದಿ. ದೇಜಪ್ಪ ಅವರ ಪತ್ನಿ ಗೋಪಿಕೃಷ್ಣ ಹಾಗೂ 27,500 ರೂಪಾಯಿಯನ್ನು ಉದರ ಸಂಬಂಧಿ ಕ್ಯಾನ್ಸರ್ ನಿಂದ ಬಳಲುತ್ತಿರುವ ವಕ್ವಾಡಿಯ ಸಂತೋಷ್ ಕುಲಾಲ್ ಅವರಿಗೆ ಚೆಕ್ ಮೂಲಕ ನೀಡಲಾಯಿತು.
ಈ ಹಿಂದೆ ಲಾಕ್ ಡೌನ್ ಸಂದರ್ಭ ಅಪಘಾತದಿಂದ ತಲೆಗೆ ಏಟು ತಗುಲಿ ನೆನೆಪಿನ ಶಕ್ತಿ ಕುಂಠಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಮಜಿಬೈಲುಮನೆ ನಿವಾಸಿ ಲತೀಶ್ ಯಾನೆ ಲಕ್ಷ್ಮಣ ಮೂಲ್ಯ ಅವರಿಗೆ 30,000 ರೂಪಾಯಿಯನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.
ಗೋಪಿಕೃಷ್ಣ ಹಾಗೂ ಸಂತೋಷ್ ಕುಲಾಲ್ ಅವರಿಗೆ ಹಸ್ತಾಂತರಿಸಲಾದ 55,000 ರೂಪಾಯಿಯನ್ನು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಮಂಜೇಶ್ವರ ತಾಲೂಕಿನ ಪೈವಳಿಕೆ ಕನಿಯಾಲ ನಿವಾಸಿಗಳಾದ ಹರೀಶ್ ಕುಲಾಲ್ ಮತ್ತು ರಂಜಿತಾ ದಂಪತಿಗಳ ಪುತ್ರ ಹಾರ್ದಿಕ್ ಕುಲಾಲ್ ಅವರಿಗಾಗಿ ಸಂಗ್ರಹಿಸಲಾಗಿತ್ತು. ಈ ಮಧ್ಯೆ ದುರದೃಷ್ಟವಶಾತ್ ಹಾರ್ದಿಕ್ ಕುಲಾಲ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಅಲ್ಲದೆ ಆ ಹಣವನ್ನು ಅವರ ಸ್ಮರಣಾರ್ಥ ಬೇರೆ ಕುಟುಂಬಕ್ಕೆ ನೀಡುವಂತೆ ಅವರ ಪೋಷಕರು ವಿನಂತಿಸಿದ್ದರು. ಅದರಂತೆ ಜೂನ್ 7ರಂದು ಮಂಗಳೂರು ಉರ್ವಾ ಬಳಿಯ ಕೊರಗಜ್ಜನ ಸನ್ನಿಧಿಯಲ್ಲಿ ಗೋಪಿಕೃಷ್ಣ ಹಾಗೂ ಸಂತೋಷ್ ಕುಲಾಲ್ ಕುಟುಂಬಕ್ಕೆ ಚೆಕ್ ನೀಡುವ ಮೂಲಕ ಧನಸಹಾಯ ನೀಡಲಾಯಿತು. ಗೋಪಿಕೃಷ್ಣ ಅವರ ಮಗಳು ಚಂಚಲಾಕ್ಷಿ ಹಾಗೂ ಸಂತೋಷ್ ಕುಲಾಲ್ ಅವರ ಭಾವ ರಾಘವೇಂದ್ರ ಕುಲಾಲ್ ಅವರು ಚೆಕ್ ಸ್ವೀಕರಿಸಿದರು.
ಈ ಸಂದರ್ಭ ಹಣ ಸಂಗ್ರಹದ ಜವಾಬ್ದಾರಿ ಹೊತ್ತುಕೊಂಡು ಶ್ರಮಿಸಿದ ಕುಲಾಲ್ ವರ್ಲ್ಡ್ ವಾಟ್ಸಾಪ್ ಗ್ರೂಪ್ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ ಹಾಗೂ ಸದಸ್ಯರಾದ ಸೂರಜ್ ಕುಲಾಲ್ ಮಂಗಳೂರು, ಸಂತೋಷ್ ಕುಲಾಲ್ ತಲಪಾಡಿ, ಪ್ರದೀಪ್ ಕುಂದಾಪುರ ಅವರು ಉಪಸ್ಥಿತರಿದ್ದರು.