ಕುಂದಾಪುರ : `ಮಾನಸಿಕ ಸ್ತಿಮಿತವನ್ನು ಕಾಯ್ದುಕೊಳ್ಳಲು ಸಾಹಿತ್ಯ ಮಹತ್ತರ ಪಾತ್ರವನ್ನು ವಹಿಸುತ್ತದೆ. ಬೇರೆ ಭಾಷೆಯ ತಿರುಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಬೇಕು. ಒಟ್ಟಾರೆ ಕನ್ನಡವನ್ನು ಕಟ್ಟುವ ಕಾರ್ಯ ನಡೆಸಬೇಕು’ ಎಂದು ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗು ಕುಲಾಲ್ ವರ್ಲ್ಡ್ ಡಾಟ್ ಕಾಂನ ಪ್ರಧಾನ ಸಂಪಾದಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಅವರು ಇತ್ತೀಚೆಗೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಹಾಗು ಕುಂದಪ್ರಭ ಕುಂದಾಪುರ, ಆಕಾಶವಾಣಿ ಮಂಗಳೂರು ಇವರ ಸಹಯೋಗದಲ್ಲಿ ಕುಂದಾಪುರ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಜರುಗಿದ ಉಡುಪಿ ಜಿಲ್ಲಾ ಯುವ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,`ಸತತ ಅಧ್ಯಯನಶೀಲತೆಯಿಂದ ಉತ್ತಮ ಕವಿತೆ ಮೂಡಿ ಬರಲು ಸಾಧ್ಯ. ಒಳ್ಳೆಯ ಭಾಷೆಯನ್ನು ಬಳಸುವ ಮೂಲಕ ಉತ್ತಮ ಕೃತಿಗಳನ್ನು ಮೂಡಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಕವಿತೆಗಳು ಕಾವ್ಯವಾಗುತ್ತಿಲ್ಲ, ಬದಲಿಗೆ ಗದ್ಯಗಳಾಗುತ್ತಿದೆ’ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ಸರಕಾರಿ ಪ. ಪೂ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು.
ಕವಿಗೋಷ್ಠಿ
ಕಾರ್ಯಕ್ರಮದಲ್ಲಿ ಯುವ ಕವಿ ಸಮ್ಮೇಳನ ಹಾಗೂ ಕವಿಗೋಷ್ಠಿ ನಡೆಯಿತು. ಸರ್ವತಾ ಅಡಿಗ ಮಣೂರು, ಅಲ್ತಾರು ನಾಗರಾಜ್, ಕೀರ್ತನಾ ಶೆಟ್ಟಿ, ಶೇಖರ ದೇವಾಡಿಗ ಮೊಗೇರಿ , ಗೀತಾ ಹೆಗ್ಡೆ, ಆದಿತ್ಯ ಪ್ರಸಾದ್ ಪಾ೦ಡೇಲು, ರಕ್ಷಿತ್, ಡ್ರೀಮಾ ಡಿ’ಸೋಜ, ವಿದ್ಯಾವತಿ ಕೆಂಚನೂರು, ಆನಂದ ಅಜೆಕಾರು, ಅವರು ತಮ್ಮ ಸ್ವರಚಿತ ಕವನ ವಾಚಿಸಿದರು.
ಅಲ್ತಾರು ನಾಗರಾಜಗೆ ಯುವ ಕವಿ ಪ್ರಶಸ್ತಿ
ಯುವ ಕವಿ ಅಲ್ತಾರು ನಾಗರಾಜ ಅವರು ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಆಕಾಶವಾಣಿಯ ಸದಾನಂದ ಹೊಳ್ಳ ವಹಿಸಿದ್ದರು . ಕುಂದಾಪುರ ಶ್ರೀದೇವಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭವಾನಿ ಆರ್ ರಾವ್, ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು.