ಮೂಲಸಮಸ್ಯೆಗಳ ಸುಳಿಯಲ್ಲಿ ತತ್ತರಿಸಿರುವ ಅಂಗವಿಕಲ ಕುಲಾಲ ಕುಟುಂಬ
ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು ಎಂಬಲ್ಲಿ ೫ ಸೆಂಟ್ಸ್ ಸ್ಥಳದಲ್ಲಿ ವಾಸವಾಗಿರುವ ವೃದ್ಧೆ ಸೇಸಮ್ಮ ಮೂಲ್ಯ ಅವರದ್ದು ತೀರಾ ಬಡಕುಟುಂಬ. ಅವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಎರಡನೆಯವಳು ಪುಷ್ಪಾವತಿ ಮೂಲ್ಯ. ಈಕೆಯ ವಯಸ್ಸು ಈಗ 28. ಆದರೆ ಎದ್ದು ನಿಲ್ಲಲಾಗದ, ಕುಳಿತುಕೊಳ್ಳಲು ಸಾಧ್ಯವಾಗದ , ಮಾತಾಡಲಾಗದ ಸ್ಥಿತಿ ಅವಳದ್ದು , ಈ ನಡುವೆ ಪದೇ ಪದೇ ಜ್ವರ ಬಾಧಿಸಿತ್ತಿರುವುದು ಮತ್ತೊಂದು ಗಂಭೀರ ಸಮಸ್ಯೆ. ಮಲಗಿದಲ್ಲೇ ದಿನ ದೂಡುತ್ತಿರುವ ಆಕೆಯ ಎಲ್ಲಾ ದೈನಂದಿನ ಚಟುವಟಿಕೆ ಗಳಿಗೂ ಮನೆ ಮಂದಿಯ ಸಹಾಯ ಬೇಕೇ ಬೇಕು. ಹುಟ್ಟಿನಲ್ಲಿ ಎಲ್ಲಾ ಮಕ್ಕಳಂತಿದ್ದ ಪುಷ್ಪಾವತಿ ಎರಡು ವರ್ಷ ತನಕ ಸರಿಯಾಗಿಯೇ ಇದ್ದಳು. ಆ ಬಳಿಕ ಅಂಗವಿಕಲತೆಗೆ ತುತ್ತಾದ ಆಕೆ ಸಂಪೂರ್ಣ ಶಕ್ತಿ-ಚೈತನ್ಯ ಕಳಕೊಂಡಿದ್ದು , ಇದೀಗ ನಿಷ್ಕ್ರೀಯ ಅವಸ್ಥೆ ಅವಳದ್ದಾಗಿದೆ.
ಕುಟುಂಬದ ಆಧಾರಸ್ತಂಭವಾಗಿದ್ದ ಶೇಸಮ್ಮ ಅವರ ಪತಿ ಕೃಷ್ಣಪ್ಪ ಮೂಲ್ಯ ಅವರು ತೀರಿ ಕೊಂಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಶೇಸಮ್ಮ ಅವರ ಪ್ರಥಮ ಪುತ್ರಿ ಚಂದ್ರಾವತಿ ಅವರು ಅನಿವಾರ್ಯವಾಗಿ ತನ್ನ ಪತಿ ರಾಜೇಂದ್ರ ಅವರೊಂದಿಗೆ ಈಗ ಈ ಮನೆಯಲ್ಲೇ ನೆಲೆಸಿದ್ದು, ಅಳಿಯನೇ ಈಗ ಈ ಅತಂತ್ರ ಕುಟುಂಬದ ಜವಾಬ್ದಾರಿ ವಹಿಸಿದ್ದಾರೆ. ರಾಜೇಂದ್ರ ಅವರು ಮಂಗಳೂರಿನಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಾ, ಚಂದ್ರಾವತಿ ಅವರು ಬೀಡಿ ಸುತ್ತುತ್ತಾ ಈ ಸಂಸಾರದ ಬಂಡಿ ದೂಡುತ್ತಿದ್ದಾರೆ.
ಸೇಸಮ್ಮರ ಪತಿ ಕೃಷ್ಣಪ್ಪ ಮೂಲ್ಯ ರಿಗೆ ೧೯೮೬-೮೭ರಲ್ಲಿ ೫ ಸೆಂಟ್ಸ್ ಜನತಾ ಮನೆ ನಿವೇಶನ ಮಂಜೂರು ಆಗಿತ್ತು. ಆ ಸ್ಥಳದಲ್ಲಿ ಅವರು ಆದರೆ ಪಹಣಿ ಪತ್ರದಲ್ಲಿ ಕೃಷ್ಣಪ್ಪ ಮೂಲ್ಯರ ಹೆಸರು ಕುಕ್ಕಪ್ಪ ಮೂಲ್ಯ ಎಂದು ತಪ್ಪಾಗಿ ನೋಂದಣಿಯಾಗಿತ್ತು . ಕೃಷ್ಣಪ್ಪ ಮೂಲ್ಯ ಅವರು ಹೆಸರು ಸರಿಪಡಿಸಲು ೨೦೦೫ರಲ್ಲೇ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆ ಬಳಿಕವೂ ಹಲವು ಬಾರಿ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆದಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹಿಂದೆ ಅವರ ಮನೆಯ ಅಂಗಳ ತನಕವೂ ರಸ್ತೆ ವ್ಯವಸ್ಥೆ ಇತ್ತು, ಕುಡಿಯುವ ನೀರಿನ ವ್ಯವಸ್ಥೆಯೂ ಇತ್ತು. ಆದರೆ ಕೆಲ ವರ್ಷದ ಹಿಂದೆ ಸ್ಥಳೀಯ ಜಮೀನ್ದಾರರೊಬ್ಬರು ರಸ್ತೆಯೂ ಸೇರಿದಂತೆ ಅವರ ಮನೆ ಸುತ್ತಲೂ ರಬ್ಬರ್ ಗಿಡಗಳನ್ನು ನೆಟ್ಟಿದ್ದಾರೆ. ಇದರಿಂದ ಮೂಲಭೂತ ಸೌಕರ್ಯಕ್ಕೆ ಇನ್ನಷ್ಟು ಕೊರತೆ ಉಂಟಾಗಿದೆ. ಇದೀಗ ಪುಷ್ಪಾವತಿಗೆ ಕಳೆದ ಮೂರು ವರ್ಷಗಳಿಂದ ರೂ.೪೦೦ ಅಂಗವಿಕಲ ವೇತನ ಬರುತ್ತಿದೆ. ಅಂಗವಿಕಲ ವೇತನ ಸಾವಿರಕ್ಕೆ ಏರಿದ್ದರೂ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಆಕೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಇರುವ ಸೌಲಭ್ಯವನ್ನೂ ನಮಗೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಕೆಗೆ ಅನಾರೋಗ್ಯ ಕಾಣಿಸಿಕೊಂಡಾಗಲೂ ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂಬುವುದು ಅವರ ಕೊರಗು. ಇನ್ನಾದರೂ ಸಂಬಂಧಪಟ್ಟವರು ಇವರ ಸಂಕಷ್ಟಗಳಿಗೆ ಸ್ಪಂದಿಸುವರೇ ಎಂಬುವುದನ್ನು ಕಾದು ನೋಡಬೇಕಿದೆ.
ಇದು ಎಂಡೋ ಸಲ್ಫಾನ್ ಪರಿಣಾಮವೇ ?
ಚಿಲ್ಮೆತ್ತಾರು ಪರಿಸರದಲ್ಲಿ ತೋಟ ಗದ್ದೆಗಳೇ ಜಾಸ್ತಿ. ಗದ್ದೆಗಳಿಗೆ ಎಂಡೋ ಸಲ್ಫಾನ್ ಸಿಂಪರಣೆ ಮಾಡುವ ಪದ್ಧತಿ ಈ ಹಿಂದೆ ಇತ್ತು. ಕೃಷ್ಣಪ್ಪ ಮೂಲ್ಯ -ಸೇಸಮ್ಮ ದಂಪತಿ ಕೂಲಿ ಕಾರ್ಮಿಕರಾಗಿ ಈ ಹಿಂದೆ ತೋಟ ಗದ್ದೆಯಲ್ಲಿ ದುಡಿ ಯುತ್ತಿದ್ದರು. ಇದರ ಪರಿಣಾಮವಾಗಿಯೇ ಈ ದಂಪತಿಯ ಪುತ್ರಿ ಅಂಗವಿ ಕಲತೆಗೊಳಗಾಗಿರಬಹುದು ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕೃಪೆ : ಜಯಕಿರಣ