ಇದು ಹಾಲಾಡಿಯ ಆಶಾ ಕುಲಾಲ್ ಸಾಹಸ ಯಶೋಗಾಥೆ
ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತಿಹಾಸವನ್ನು ಕೆದಕುತ್ತಾ ಹೊರಟರೆ ತಾಯಿ ತನ್ನ ಮಕ್ಕಳಿಗಾಗಿ ಮಾಡಿದ ತ್ಯಾಗದ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಮಕ್ಕಳ ಯೋಗಕ್ಷೇಮ ಅವರ ಭವಿಷ್ಯಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆಯುವವಳೇ ಅಮ್ಮ.. ಹಾಗೆಯೇ ವಿಶೇಷ ಚೇತನ ಮಗನೊಬ್ಬನಿಗೆ ಶಿಕ್ಷಣ ಕೊಡಿಸುವ ಜೊತೆ ಊರಿನ ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ಇಲ್ಲೊಬ್ಬಳು ತಾಯಿ ದೊಡ್ಡ ಸಾಧನೆಯನ್ನೇ ಮಾಡಿದ್ದಾಳೆ. ಹೌದು.. ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ತನ್ನ ವಿಶೇಷಚೇತನ ಮಗನಿಗಾಗಿ ಆಶಾ ರಾಜೀವ ಕುಲಾಲ್ ಎಂಬ ತಾಯಿಯೊಬ್ಬಳು `ಬ್ರೈಟ್ ಪರ್ಲ್ ‘ ಎಂಬ ನರ್ಸರಿ ಶಾಲೆ ಆರಂಭಿಸಿದ್ದಾರೆ.
ಆಶಾ ರಾಜು ಕುಲಾಲ್ ಅವರಿಗೆ ಇಬ್ಬರು ಗಂಡು ಮಕ್ಕಳು. ಮೊದಲ ಮಗು autism ಪೀಡಿತನಾಗಿದ್ದು,(ಆಟಿಸಂ ಎನ್ನುವುದು ನರವ್ಯೂಹದ ಬೆಳವಣಿಗೆಯ ಸಮಸ್ಯೆ) ಈತನನ್ನು ಶಾಲೆಗೆ ಸೇರಿಸುವ ಪ್ರಯತ್ನಕ್ಕೆ ಯಾವ ಶಾಲೆಯಲ್ಲೂ ಸ್ಪಂದನೆ ಸಿಕ್ಕಿಲ್ಲ. ಆ ಮಗು ಮಕ್ಕಳೊಂದಿಗೆ ಬೆರೆತರೆ ಬದಲಾವಣೆ ತರಲು ಸಾಧ್ಯ ಎಂಬ ವೈದ್ಯರ ಸಲಹೆಯನ್ನು ಪರಿಗಣಿಸಿದ ತಾಯಿ, ತಾನೇ `ಬ್ರೈಟ್ ಪರ್ಲ್’ ಎಂಬ ನರ್ಸರಿ ಶಾಲೆಯನ್ನು ಆರಂಭಿಸುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಯಶಸ್ಸನ್ನೂ ಕಂಡುಕೊಳ್ಳುತ್ತಾರೆ.
2016ರಲ್ಲಿ ಆರಂಭವಾದ ಈ ನರ್ಸರಿಗೆ ಮೊದಲು ಆಶಾ ಅವರ ಇಬ್ಬರು ಮಕ್ಕಳು ಸೇರಿ ಆರು ಮಕ್ಕಳಿದ್ದರು. ಆದರೆ ಈಗ ಮಕ್ಕಳ ಸಂಖ್ಯೆ ಮೂವತ್ತು ಮೀರಿದೆ. ಶಿಕ್ಷಣ ಇಂದು ಉದ್ಯಮವಾಗುತ್ತಿರುವ ಕಾಲಘಟ್ಟದಲ್ಲಿ ಅದನ್ನು ಮೀರಿನಿಂತು ‘ಸಂಸ್ಕಾರಯುಕ್ತ ಶಿಕ್ಷಣವೇ ನಿಜವಾದ ಶಿಕ್ಷಣ’ ಎಂಬ ಧ್ಯೇಯವಾಕ್ಯದೊಂದಿಗೆ ಬಾಲ ಮನಸ್ಸುಗಳಲ್ಲಿ ಗುರು-ಹಿರಿಯರಿಗೆ ಗೌರವ, ಸನಾತನ ಸಂಸ್ಕೃತಿ ಪರಂಪರೆಗಳ ಬಗೆಗೆ ಪ್ರೀತಿ, ಸ್ನೇಹಸೌಹಾರ್ದ –ಸಹೋದರಿಕೆಯ ಭಾವವನ್ನು ಬೆಳೆಸುವ ನಿರಂತರ ಚಟುವಟಿಕೆಗಳ ಆಗರವಾಗಿರುವ ಈ ಬ್ರೈಟ್ ಪರ್ಲ್ ಸಂಸ್ಥೆ ನಿಜವಾದ ಅರ್ಥದಲ್ಲಿ ಹೊಳೆಯುವ ಮುತ್ತೇ ಹೌದು.
ಹಾಲಾಡಿಯ ಮುಗ್ಧ ಕಂದಮ್ಮಗಳ ಕನಸ್ಸುಗಳನ್ನು ಅರಳಿಸುವ ದೀವಿಗೆ. ಬೆಳಗುವ ಪ್ರಾಗ್ಜೋತಿ.. ಮುಗ್ಧ ಮನಸ್ಸುಗಳಲ್ಲಿ ಬಾಲ್ಯದ ಸಿಹಿಯನ್ನು, ಸವಿಯನ್ನು ಉಣಿಸಿ ಬಾಲ್ಯದ ಆಟ-ಪಾಟಗಳನ್ನು ಚಂದದಲ್ಲಿ ಕಲಿಸುವ ಶ್ರೇಷ್ಠ ಸಂಸ್ಥೆ. ಬಾಲ್ಯದ ಶಿಕ್ಷಣ ಮಕ್ಕಳಿಗೆ ಪ್ರೀತಿಯ ಸವಿಮೆದ್ದಾಗಬೇಕು ಎಂಬ ಗಟ್ಟಿತಳಹದಿಯೊಂದಿಗೆ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಕ್ರೀಯಾಶೀಲವಾಗಿ ರೂಪಿಸುವ ಗ್ರಾಮೀಣ ಪರಿಸರದ ಹೆಮ್ಮೆಯ ನರ್ಸರಿಯೇ ಈ ಬ್ರೈಟ್ ಪರ್ಲ್.
ಶಿಕ್ಷಣ ಮಕ್ಕಳಿಗೆ ಹೊರೆ ಆಗಬಾರದು. ಅವರು ಆಟದ ಜೊತೆ ಜೊತೆಯಲ್ಲಿ ಶಿಕ್ಷಣದ ಅಕ್ಷರಮಾಲೆಯನ್ನು ಪ್ರೀತಿಯಿಂದ ಅನುಭವಿಸಿ ಕಲಿಯಬೇಕು. ಆಗ ಮಾತ್ರ ಆಶಿಕ್ಷಣಕ್ಕೆ ನಿಜವಾದ ಅರ್ಥ ಬಂದೀತು ಎಂಬ ಶಿಕ್ಷಣ ತಜ್ಞರ ಮಾತುಗಳ ನಿಜವಾದ ಸಾಕಾರ ಆಶಾ ರಾಜೀವ ಕುಲಾಲ್ ನಿರ್ದೇಶಕತ್ವದ ಬ್ರೈಟ್ ಪರ್ಲ್ ಸಂಸ್ಥೆ ಮಾಡಿ ತೋರಿಸುತ್ತಿದೆ.
ಪುಟ್ಟ ಮಕ್ಕಳಲ್ಲಿ ಬಾಲ್ಯದ ಸವಿಯನ್ನು ಸವಿದು ಉಣ್ಣಲು ಸಕಲ ವ್ಯವಸ್ಥೆಯನ್ನು ನಾಜೂಕಾಗಿ ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂತಹ ನಾಡಿನ ಹಬ್ಬಗಳಂದು ಬ್ರೈಟ್ ಪರ್ಲ್ ಸಂಸ್ಥೆಯಲ್ಲಿ ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂದೀಜಿ, ಭಗತ್ ಸಿಂಗರಂತಹ ದೇಶಪ್ರೇಮಿ ನಾಯಕರ ವೇಷ ತೊಟ್ಟ ಮಕ್ಕಳು ಕುಣಿದು ಸಂಭ್ರಮಿಸುತ್ತಾರೆ.
ಬಾಲ್ಯದಲ್ಲಿಯೇ ಭರತ ನಾಡಿನ ಬಗೆಗೆ ತಮ್ಮೊಳಗೆ ಗೌರವ ಪ್ರೀತಿಯನ್ನು ತುಂಬಿಕೊಳ್ಳುತ್ತಾರೆ. ನಾಡು-ನುಡಿ-ನೆಲ-ಜಲದ ಬಗೆಗೆ ಪ್ರೇಮವನ್ನು ಮೂಡಿಸುವ ನೂರಾರು ವಿದ್ಯಮಾನಗಳನ್ನು ಇಲ್ಲಿ ಕ್ರೀಯಾಶೀಲವಾಗಿ ಮಾಡಿಕೊಂಡು ಬರಲಾಗುತ್ತಿದೆ.
ರೈತರ ಹೊಲ ಗೆದ್ದೆಗಳಿಗೆ ಮಕ್ಕಳು ಹೋಗಿ ಕೃಷಿ ಬದುಕಿನ ನೋವು ನಲಿವುಗಳನ್ನು ಹತ್ತಿರದಿಂದ ಕಂಡು ಕೆಸರು ಗೆದ್ದೆಯಲ್ಲಿ ಕುಣಿದು ಖುಷಿ ಪಡುತ್ತಾರೆ. ಅಂಬುಲೆನ್ಸ್ ಮಹತ್ವ, ಪೋಲೀಸ್ ಕೆಲಸ ನಿರ್ವಹಣೆಯಂತಹ ಹಲವು ಪ್ರಚಲಿತ ವಿದ್ಯಮಾನಗಳ ಬಗೆಗೆ ಮಕ್ಕಳಿಗೆ ಬಾಲ್ಯದಲ್ಲೆ ಕಲಿಸುವ ಪ್ರಯತ್ನದಲ್ಲಿ ಬ್ರೈಟ್ ಪರ್ಲ್ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ.
ಇಂತಹ ಬ್ರೈಟ್ ಪರ್ಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸಿಕೊಂಡು ಹೋಗುತ್ತಿರುವ ಆಶಾ ರಾಜೀವ ಕುಲಾಲ್ ಹಾಲಾಡಿ ಮಗನಿಗಾಗಿ ನರ್ಸರಿ ಟೀಚರ್ ಟ್ರೈನಿಂಗ್ ಪಡೆದಿದ್ದಾರೆ. ಅಷ್ಟೇ ಅಲ್ಲ.., ಟ್ರೈನಿಂಗ್ ನಲ್ಲಿ ಉತ್ತಮ ಸಾಧನೆ ಮೆರೆದು ರಾಜ್ಯಮಟ್ಟದ ಪುರಸ್ಕಾರವನ್ನೂ ಮುಡಿಗೇರಿಸಿಕೊಂಡಿದ್ದಾರೆ. ಪಾದರಸದಂತೆ ಚುರುಕಾಗಿ ಸದಾ ಹೊಸತನದ ಹುರುಪಿನೊಂದಿಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಬಾಲ್ಯದ ಹರುಷ ಹರ್ಷವನ್ನು ಮಕ್ಕಳಲ್ಲಿ ಪ್ರಾಮಾಣಿಕವಾಗಿ ತುಂಬುವ ಕೆಲಸವನ್ನು ಅವರು ಜವಾಬ್ದಾರಿಯುತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ಮಾತ್ರವಲ್ಲದೆ ಆಶಾ ವಿಶ್ವನಾಥ್, ಶೋಭಾ, ವಿಜಯಲಕ್ಷ್ಮೀ ಟೀಚರ್ ಈ ಸೇವೆಯಲ್ಲಿ ಭಾಗಿಯಾಗಿದ್ದಾರೆ.
ಬ್ರೈಟ್ ಪರ್ಲ್ ಹಾಲಾಡಿಯ ಹೆಮ್ಮೆ- ಅಭಿಮಾನ. ಹಾಲಾಡಿಯಂತಹ ತೀರಾ ಗ್ರಾಮೀಣ ಪರಿಸರದಲ್ಲಿ ಇಂತಹ ನರ್ಸರಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವುದು ಶಿಕ್ಷಣ ಆಸಕ್ತರು ಗಮನಿಸಬೇಕಾದ ವಿದ್ಯಮಾನ. ತಮ್ಮ ಪ್ರೀತಿಯ ಕುವರ-ಕುವರಿಯರಲ್ಲಿ ಸಂಸ್ಕಾರಯುಕ್ತ ಶಿಕ್ಷಣವನ್ನು ಬೆಳೆಸುವುದಕ್ಕಾಗಿ,, ಬಾಲ್ಯದ ಸವಿಯನ್ನು ಖುಷಿಯಿಂದ ಸವಿಯಲು, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬ್ರೈಟ್ ಆಗಿ ಮಕ್ಕಳನ್ನು ಬೆಳೆಸುವಲ್ಲಿ ಬ್ರೈಟ್ ಪರ್ಲ್ ಸಂಸ್ಥೆ ದಾರಿ ದೀವಿಗೆ ಆದಿತು.
(ಮೂಲ: ಮುಕ್ತ ನ್ಯೂಸ್ ಮತ್ತು ಮಂಜುನಾಥ ಹಿಲಿಯಾಣ)