ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ 2019-20ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರೌಢ ಶಾಲಾ ವಿಭಾಗದಲ್ಲಿ ಬಂಟ್ವಾಳ ವಲಯದ ಮಂಚಿ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಆಯ್ಕೆಯಾಗಿದ್ದಾರೆ.
ತಾರಾನಾಥ ಅವರು ವರ್ಲಿ ಆರ್ಟ್ ನಲ್ಲಿ ಪಳಗಿದವರಾಗಿದ್ದು, ಇವರ ನಿರ್ದೇಶನದಲ್ಲಿ ಜಿಲ್ಲೆಯ ಹಲವಾರು ಸರಕಾರಿ ಶಾಲೆ ಹಾಗೂ ಕಚೇರಿ ಗೋಡೆಗಳು ವರ್ಲಿ ಕಲೆಯ ಅಲಂಕಾರದ ಸೊಬಗನ್ನು ಕಂಡಿದೆ. ವರ್ಲಿ ಆರ್ಟ್ ಮೂಲತಃ ಮಹಾರಾಷ್ಟ್ರದ ಆದಿವಾಸಿ ಕಲೆಯಾಗಿದ್ದು, ಗೋಡೆಗೆ ಸುಣ್ಣ ಬಳಿದು ಚೆನ್ನಾಗಿ ಒಣಗಿದ ಬಳಿಕ ಕಾವಿ ಕಲಸಿ ಪೇಂಟ್ ಮಾಡಿ ಅದರ ಮೇಲೆ ಕಬ್ಬಿಣದ ಮೊಳೆಯಿಂದ ಗೆರೆಗಳನ್ನು ಎಳೆಯುತ್ತ ಹೋದಂತೆ ಬಿಳಿಯ ಚಿತ್ತಾರ ಮೂಡುವುದೇ ವರ್ಲಿ ಅಥವಾ ವಾರ್ಲಿ ಆರ್ಟ್ ಎಂದೆನ್ನಲಾಗುತ್ತಿದೆ. ಆದರೆ ಈಗ ಬಿಳಿಯ ಗೋಡೆಯ ಮೇಲೆ ಕಾವಿ ಚಿತ್ತಾರ ಮೂಡಿಸುವ ಅಥವಾ ಸ್ಥಾಯಿಯಾಗಿರುವ ಒಂದು ಬಣ್ಣದ ಮೇಲೆ ಬಿಳಿ ಅಥವಾ ಇತರ ಬಣ್ಣದ ಗೆರೆಗಳನ್ನು ಬರೆದು ಅವಶ್ಯವಿರುವಲ್ಲಿ ಬಣ್ಣ ತುಂಬುವ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಕಲೆಯಲ್ಲಿ ತಾರಾನಾಥ್ ಸಾಕಷ್ಟು ಸಾಧನೆ ಮಾಡಿ ಹೆಸರು ಗಳಿಸಿದ್ದಾರೆ.