ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಭರತನಾಟ್ಯ ಕಲಾವಿದೆ ಹಾಗೂ ಶಿಕ್ಷಕಿ, ಬೆಂಗಳೂರಿನ ನೃತ್ಯಶ್ರೀ ಅಕಾಡೆಮಿಯ ಸಂಸ್ಥಾಪಕಿ ಸಂಧ್ಯಾ ಬಂಗೇರ ಅವರು ಕಲಾ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಉಡುಪಿ ಕೃಷ್ಣನ ಸನ್ನಿಧಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ನೃತ್ಯ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮೂಲತಃ ಕಾರ್ಕಳ ಬೆಳ್ಮಣ್ಣಿನವರಾದ ಸಂಧ್ಯಾ ಅವರು ಮೈಕ್ರೋ ಬಯೋಲಜಿ ಪದವೀಧರರಾಗಿದ್ದು, ಭರತನಾಟ್ಯ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ವಿವಿಧ ರೀತಿಯ ಸಾಧನೆಗಳನ್ನು ಮಾಡುತ್ತಲೇ ಉನ್ನತ ವ್ಯಕ್ತಿತ್ವ ಮತ್ತು ಸ್ಥಾನವನ್ನು ಅಲಂಕರಿಸಿರುವ ಇವರು, ನೃತ್ಯ ತನ್ನ ಜೀವನದ ಒಂದು ಭಾಗ ಎಂದುಕೊಂಡವರು. ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಬೇರೆ ಬೇರೆ ರೀತಿಯ ನೃತ್ಯ ಕಾರ್ಯಕ್ರಮವನ್ನು ನೀಡಿ ಜನಪ್ರಿಯತೆ ಗಳಿಸಿರುವ ಇವರು, ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಕೂಡ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅನೇಕ ಸಂಘ ಸಂಸ್ಥೆಗಳಿಂದ ನೃತ್ಯ ಮಯೂರಿ, ನೃತ್ಯ ರತ್ನ, ನೃತ್ಯ ಶಿರೋಮಣಿ, ನಾಟ್ಯ ಸಿರಿ ಮುಂತಾದ ಗೌರವ ಸ್ವೀಕರಿಸಿದ್ದಾರೆ. ಸಂಧ್ಯಾ ಅವರು ನೃತ್ಯ ಕಲಾವಿದೆ ಮಾತ್ರವಲ್ಲ, ನುರಿತ ನೃತ್ಯ ಸಂಯೋಜಕಿಯೂ ಹೌದು. ಇವರು ನೂರಾರು ಮಕ್ಕಳಿಗೆ ಭರತನಾಟ್ಯವನ್ನು ಹೇಳಿಕೊಡುತ್ತಿದ್ದಾರೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿರುವುದರ ಜೊತೆಗೆ ಮಕ್ಕಳ ಮೇಲೆ ಇವರಿಗೆ ಇರುವ ಅತಿಯಾದ ಪ್ರೀತಿ, ವಿಶ್ವಾಸ ಇವರ ಈ ಎಲ್ಲಾ ಸಾಧನೆಗೆ ಶಕ್ತಿಯಾಗಿದೆ ಎಂದು ಹೇಳಬಹುದು. ಇವರ ವಿದ್ಯಾರ್ಥಿಗಳಲ್ಲಿ ಅನೇಕರು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಇವರ ಈ ಎಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಅವರ ಪತಿ ಅಶೋಕ್ ಮೂಲ್ಯ. ಇವರು ನೃತ್ಯಶ್ರೀ ಅಕಾಡೆಮಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.