ರಾಯಚೂರು: ದೀಪಾವಳಿ ಹಬ್ಬದ ಒಂದು ತಿಂಗಳೂ ಮುಂಚಿತವಾಗಿಯೇ ಹಣತೆಗಳು ನಗರದ ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಹಬ್ಬದ ಆಚರಣೆಗೆ ಕೇವಲ ಎರಡೂ ದಿನ ಮಾತ್ರ ಉಳಿದಿದ್ದು, ಪ್ರಣತಿಗಳ ಮಾರಾಟ ಭರಾಟೆ ಹೆಚ್ಚಾಗಿದೆ.
ನಗರದಲ್ಲಿ ಕುಂಬಾರರ ಮನೆ ಹಾಗೂ ಅಂಗಡಿ, ಪಕ್ಕದ ಜಿಲ್ಲೆ ಯಾದಗಿರಿ ಕುಂಬಾರರು ತಯಾರಿಸಿದ ‘ಪ್ರಣತಿ’ಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಸಾಂಪ್ರದಾಯಿಕ ಪದ್ಧತಿಯಡಿ ಈ ಪ್ರಣತಿಗಳನ್ನು ಕುಂಬಾರರು ತಯಾರಿಸಿದ್ದಾರೆ. ನಗರದಲ್ಲಿ ಮಾರಾಟ ಮಾಡಲಾಗುತ್ತಿರುವ ಪ್ರಣತಿಗಳು ರಾಯಚೂರು ನಗರದಲ್ಲಿ ತಯಾರಿಸಿದ್ದಲ್ಲ. ತಾಲ್ಲೂಕಿನ ತುಂಟಾಪುರ ಗ್ರಾಮ, ಯಾದಗಿರಿ ಜಿಲ್ಲೆಯ ಕನ್ನಿಕೇರಿ ಗ್ರಾಮದಲ್ಲಿ ಕುಂಬಾರರು ತಯಾರಿಸಿದ ಪ್ರಣತಿಗಳನ್ನು ಖರೀದಿಸಿ ತಂದು ಮಾರಾಟ ಮಾಡಲಾಗುತ್ತಿದೆ.
ನಗರದ ಕುಂಬಾರ ಓಣಿಯಲ್ಲಿನ ನಾಲ್ಕೈದು ಮನೆಗಳು ಮಾತ್ರ ಕುಂಬಾರಿಕೆ ಉಳಿಸಿಕೊಂಡು, ಕುಲಕಸುಬು ಬಿಡಬಾರದು ಎಂಬ ಕಳಕಳಿಯಿಂದ ಪ್ರಣತಿ, ಮಡಕೆ, ಕುಡಿಕೆ, ಮುಚ್ಚಳ, ಗಡಿಗೆ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಈ ಊರಲ್ಲಿ ಕುಂಬಾರರು ಇದ್ದರೂ ಬೇರೆ ಊರಿನಲ್ಲಿ ತಯಾರಾದ ಪ್ರಣತಿಗಳೇ ಇಲ್ಲಿ ಮಾರಾಟವಾಗುತ್ತಿವೆ.
`ನಮ್ಮದೇ ಸಾಂಪ್ರದಾಯಿಕ, ಗ್ರಾಮೀಣ ಸೊಗಡಿನಲ್ಲಿ ತಯಾರಾಗುವ ಹಣತೆಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ಒಂದು ಡಜನ್ಗೆ ರೂ 35ರಿಂದ 40, ಎರಡು ಪಣತಿಗೆ ರೂ 10 ಹೀಗೆ ದರ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ. ಒಂದೆರಡೂ ರೀತಿಯದಾದ ಹಣತೆಗಳು ಮಾತ್ರ ಸಿಗುತ್ತವೆ. ನಮ್ಮದೇ ಮಣ್ಣಿನ ಸೊಗಡಿನ ಈ ಪ್ರಣತಿ ನಗರದ ಜನತೆ ಹುಡುಕಿಕೊಂಡು ಬಂದು ಖರೀದಿ ಮಾಡುತ್ತಾರೆ’ ಎಂದು ಕುಂಬಾರ ಓಣಿಯ ಕುಂಬಾರರು ತಿಳಿಸಿದರು. ನಗರದ ರೈಲ್ವೆ ಸ್ಟೇಷನ್ ರಸ್ತೆ, ಬಸವೇಶ್ವರ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ರಾಜಸ್ತಾನ್ ಮೂಲದ ವ್ಯಾಪಾರಸ್ಥರು ಹತ್ತಾರು ಬಗೆ ಪ್ರಣತಿ, ತೂಗು ದೀಪ, ದೊಡ್ಡ ದೀಪ, ಐದು ದೀಪದ ತಟ್ಟೆ, ದೀಪಸ್ಥಂಭ ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದಾರೆ. ದಸರೆಗೂ ಮುನ್ನವೇ ಈ ವ್ಯಾಪಾರಸ್ಥರು ನಗರಕ್ಕೆ ಬಂದಿದ್ದಾರೆ.
ಗ್ರಾಹಕರ ಅಪೇಕ್ಷೆ, ಆಶಯಕ್ಕೆ ತಕ್ಕಂತೆ ಹಲವಾರು ಬಗೆಯಲ್ಲಿ ಇಲ್ಲಿ ಹಣತೆಗಳು ದೊರಕುತ್ತವೆ. ಅಲ್ಲದೇ ವಿಭಿನ್ನ ಬಣ್ಣವನ್ನು ಹಚ್ಚಿದ ಹಣತೆಗಳು ಗ್ರಾಹಕರನ್ನು ಆಕರ್ಷಣೆ ಮಾಡುತ್ತಿವೆ. ಚಿಕ್ಕ ಹಣತೆ ಒಂದು ಡಜನ್ಗೆ ರೂ 70, ಸ್ವಲ್ಪ ದೊಡ್ಡದಕ್ಕೆ ರೂ 80–90ಕ್ಕೆ ಬೆಲೆ ಇವೆ. ಬಣ್ಣದ ಹಣತೆಗೆ ರೂ 70, ತೂಗು ದೀಪಗಳಿಗೆ ರೂ 90ರಿಂದ 250ರವರೆಗೆ ಬೆಲೆ ಇರುವ ಹಣತೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.
ನಾವು ರಾಜಸ್ತಾನ ಮೂಲದಿಂದ ಬಂದಿದ್ದು, ಪ್ರತಿ ವರ್ಷ ಇಲ್ಲಿ ದೀಪಗಳನ್ನು ಮಾರಾಟ ಮಾಡುತ್ತೇವೆ. ಖರೀದಿ, ಸಾಗಾಟ ವೆಚ್ಚ ಸೇರಿ ವರ್ಷದಿಂದ ವರ್ಷಕ್ಕೆ ಬೆಲೆ ಹೆಚ್ಚಳ ಅನಿವಾರ್ಯ. ಗ್ರಾಹಕರು ತಮಗೆ ಇಷ್ಟವಾಗುವ ಹಣತೆಗೆಳನ್ನು ಖರೀದಿ ಮಾಡುತ್ತಾರೆ ಎಂದು ರಾಜಸ್ತಾನ ಮೂಲದ ವ್ಯಾಪಾರಿ ಬ್ರಿಜೇಶ್ ಹೇಳಿದರು.
‘ತಯಾರಿಕೆ ಕಷ್ಟದ ಕೆಲಸ’
ಇದು ನಗರ ಪ್ರದೇಶ. ಇಲ್ಲಿ ಹಣತೆ, ಮಡಕೆ ತಯಾರಿಸಿ ಅವುಗಳನ್ನು ಸುಡುವುದು ಕಷ್ಟ. ಕಟ್ಟಿಗೆ ಸಮಸ್ಯೆಯೂ ಇದೆ. ಹೀಗಾಗಿ ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತೇವೆ. ಗ್ರಾಹಕರು ಹುಡುಕಿಕೊಂಡು ಬಂದು ಈ ಹಣತೆ ಖರೀದಿ ಮಾಡುತ್ತಾರೆ. ದೀಪಾವಳಿಯಷ್ಟೇ ಕಾರ್ತಿಕ ಮಾಸದಲ್ಲಿ ಹಣತೆಗಳಿಗೆ ಬೇಡಿಕೆ ಇರುತ್ತದೆ.
– ಭೀಮರಾಯ ಕುಂಬಾರ, ವ್ಯಾಪಾರಿ