ಅಸಹಾಯಕ ಒಂಟಿ ಮಹಿಳೆಯ ಕೂಗಿಗೆ ಸ್ಪಂದಿಸಿದ ಹ್ಯೂಮಾನಿಟಿ ಟ್ರಸ್ಟ್
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿದ್ಯುತ್ ಸಂಪರ್ಕವಿಲ್ಲದೆ ಗುಡಿಸಲಿನಂತಿರುವ ಮನೆಯಲ್ಲಿ ಕಳೆದ ಐದು ವರ್ಷದಿಂದ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಬಡಗ ಬೆಳ್ಳೂರು ಗ್ರಾಮದ ನೆಲ್ಲಿಮಾರ್ ನಿವಾಸಿ ಭವಾನಿ ಕುಲಾಲ್ ಅವರ ಹೊಸ ಸೂರು ಹೊಂದುವ ಕನಸು ನನಸಾಗಿದೆ. ಹ್ಯೂಮಾನಿಟಿ ಟ್ರಸ್ಟ್ ಬೆಳ್ಮಣ್ ಇದರ ಬಂಟ್ವಾಳ ಘಟಕ ಪ್ರಶಾಂತ್ ಫ್ರಾಂಕ್ ಅವರ ನೇತೃತ್ವದಲ್ಲಿ ಭವಾನಿ ಅವರಿಗೆ ಹೊಸ ಮನೆ ನಿರ್ಮಿಸಿಕೊಟ್ಟಿದೆ.
ಪತಿಯ ನಿಧನದ ಬಳಿಕ ಮುರುಕಲು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಭವಾನಿ ಅವರ ಬದುಕಿನ ದಯಾನೀಯ ಸ್ಥಿತಿಯ ಬಗ್ಗೆ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸಹಿತ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿಯನ್ನು ಆಧರಿಸಿ ಹ್ಯೂಮಾನಿಟಿ ಬಂಟ್ವಾಳದ ಸಂಘಟಕ ಪ್ರಶಾಂತ್ ಫ್ರಾಂಕ್ ಅವರು ಭವಾನಿ ಅವರಿಗೆ ಮನೆ ನಿರ್ಮಿಸಿ ಕೊಡಬೇಕೆಂದು ನಿರ್ಧರಿಸಿದ್ದರು. ಮನೆ ನಿರ್ಮಿಸಲು ಸ್ಥಳೀಯರ ನೆರವು ಪಡೆದು ತಾನೇ ಆರ್ಥಿಕ ನೆರವು ಒದಗಿಸಿದರು. ಕೇವಲ ಒಂದು ತಿಂಗಳ ಕಾಲಾವಕಾಶದಲ್ಲಿ ಸುಂದರ ಮನೆ ನಿರ್ಮಾಣಗೊಂಡಿದೆ. ಹಲವು ವರ್ಷದಿಂದ ಸರಿಯಾದ ಸೂರಿಲ್ಲದೆ ಆತಂಕದಲ್ಲಿ ಬದುಕುತ್ತಿದ್ದ ಭವಾನಿ ಅವರ ಬದುಕಲ್ಲಿ ನೆಮ್ಮದಿ ಮೂಡಿದೆ.
ಇಂದು ಉದ್ಘಾಟನೆ:
ಹ್ಯೂಮಾನಿಟಿ ಟ್ರಸ್ಟ್ ಮೂಲಕ ನಿರ್ಮಾಣಗೊಂಡ ಭವಾನಿಯವರ ನವೀಕೃತ ಮನೆಯ ಉದ್ಘಾಟನಾ ಸಮಾರಂಭ ಜೂ.6 ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಿತು. ಬಂಟ್ವಾಳ ತಹಶೀಲ್ದಾರ್ ನೂತನ ಮನೆಯನ್ನು ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಹ್ಯೂಮಾನಿಟಿ ಟ್ರಸ್ಟ್ ಬೆಳ್ಮಣ್ ನ ಸ್ಥಾಪಕ ರೋಶನ್ ಡಿಸೋಜಾ ಭಾಗವಹಿಸಿದ್ದರು.
ಅವರ ಮನೆಗೆ ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಸೋಲಾರ್ ಬೆಳಕನ್ನು ಕೊಡುಗೆಯಾಗಿ ನೀಡಿದೆ. ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಪ್ರಾಯೋಜಕತ್ವದಲ್ಲಿ ಸೆಲ್ಕೋ ಸಂಸ್ಥೆ ಸೋಲಾರ್ ಸಿಸ್ಟಮನ್ನು ಭವಾನಿಯವರ ಮನೆಗೆ ಅಳವಡಿಸಿದೆ. ಮಂಗಳವಾರ ಸಂಜೆ ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅವರು ಸೋಲಾರ್ ವಿದ್ಯುತ್ ಉದ್ಘಾಟಿಸಿದರು. ಕಳೆದ 5 ವರ್ಷದಿಂದ ಚಿಮಿಣಿ ಬೆಳಕಿನಲ್ಲೇ ರಾತ್ರಿ ಕಳೆಯುತ್ತಿದ್ದ ಭವಾನಿ ಕುಲಾಲ್ ಅವರಿಗೆ ರೋಟರಿ ಸಂಸ್ಥೆಯ ಈ ಕೊಡುಗೆ ನೆಮ್ಮದಿ ಮೂಡಿಸಿದೆ.