ಬಂಟ್ವಾಳ(ಜು.೮, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಈ ಹಿರಿಯ ಜೀವದ್ದು ಅಸಹಾಯಕ ಬದುಕು. ಅಜ್ಜಿಯ ದುಸ್ಥಿಯ ನೋಡಿದ್ರೆ ಎಂಥವರ ಕರಳು ಚುರ್ ಎನ್ನದಿರದು. ಅಜ್ಜಿ ಕಳೆದ ಐದು ವರ್ಷಗಳಿಂದ ಮುರುಕು ಗುಡಿಸಲಿನಲ್ಲಿ ಒಂಟಿಯಾಗಿ ಬದುಕುತ್ತಿದ್ದಾಳೆ. ಉಳ್ಳವರಿಗೆ ಸರ್ಕಾರಿ ಮನೆ ನೀಡುವ ಶಾಸಕರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳಿಗೆ ಈ ಹಿರಿಯ ಜೀವದ ಗೋಳು ಕಾಣಿಸುತ್ತಿಲ್ಲ. ಸಂಘಟಿತರಾಗುತ್ತೇವೆ.. ಬಡವರನ್ನು ಉದ್ಧಾರ ಮಾಡುತ್ತೇವೆ ಎನ್ನುತ್ತಲೇ ಹುಟ್ಟಿಕೊಂಡ ಜಾತಿ ಸಂಘಗಳಿಗೆ ಇಂಥವರು ಕಣ್ಣಿಗೆ ಬೀಳುವುದೇ ಇಲ್ಲ..!
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ನೆಲ್ಲಿಮಾರು ಎಂಬಲ್ಲಿ ವಾಸವಿರುವ ಈ ಅಜ್ಜಿ ಹೆಸರು ಭವಾನಿ. ವಯಸ್ಸು ಸುಮಾರು ಅರುವತ್ತು ದಾಟಿದೆ. ಪತಿ ರಾಮ ಕುಲಾಲ್ ಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿ ಐದು ವರ್ಷ ಕಳೆದಿದೆ. ಅಂದಿನಿಂದ ಈ ಅಜ್ಜಿಯದ್ದು ಒಂಟಿ ಬದುಕು. ಕೃಷಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ ಈ ದಂಪತಿಗಳಿಗೆ ಮಕ್ಕಳಿಲ್ಲ. ಇದ್ದ ಒಬ್ಬ ತಮ್ಮನೂ ತೀರಿಹೋದ ಬಳಿಕ ಅಜ್ಜಿಯ ಕಷ್ಟ-ಸುಖ ಕೇಳುವವರಿಲ್ಲ ಎಂಬಂತಾಗಿದೆ. ಅವರಿವರ ಕೈ ಕಾಲು ಹಿಡಿದು ಸರಕಾರದ ಕಿಂಚಿತ್ ವಿಧವಾವೇತನ ಪಡೆದುಕೊಳ್ಳಲು ಸಫಲರಾಗಿರುವ ಭವಾನಿ ಅಜ್ಜಿ ಪುಟ್ಟದೊಂದು ಜಾಗದಲ್ಲಿ ದನಗಳ ಕೊಟ್ಟಿಗೆಗಿಂತ ಹೀನಾಯವಾದ ಶೆಡ್ ನಲ್ಲಿ ಅನಾಥ ಬದುಕು ಬದುಕುತ್ತಿದ್ದಾರೆ.
ಅನಾರೋಗ್ಯದಿಂದ ದೈಹಿಕ ಶ್ರಮದ ಕೆಲಸ ಮಾಡಲು ಅಶಕ್ತರಾದ ಅಜ್ಜಿ ವಿಧವಾವೇತನ ಜೊತೆ ಬೀಡಿ ಸುತ್ತಿ ಬರುವ ಅಲ್ಪ ಆದಾಯದಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೆಚ್ಚಿನ ಹಣವನ್ನು ಔಷಧಿಗೆ ಮೀಸಲಿಡುವ ಈಕೆ, ಆಗಲೋ ಈಗಲೋ ಕುಸಿದು ಬೀಳುವ ಸ್ಥಿತಿಯಲ್ಲಿರುವ ಮುರುಕಲು ಗುಡಿಸಲಿಗೆ ಟರ್ಪಾಲು-ತಗಡುಗಳನ್ನು ಜೋಡಿಸಿ ಅದನ್ನೇ ಅರಮನೆ ಎಂದು ಅವಡುಗಜ್ಜಿ ಬದುಕುತ್ತಿದ್ದಾಳೆ. ವಿದ್ಯುತ್ ಸಂಪರ್ಕ ಇಲ್ಲದೇ ಇತ್ತೀಚೆಗಿನವರೆಗೂ ಚಿಮಿಣಿ ದೀಪದ ಬೆಳಕೇ ಈಕೆಗೆ ಆಶ್ರಯವಾಗಿತ್ತು. ರಾತ್ರಿ ಮಳೆಯೇನಾದ್ರೂ ಬಂದರೆ ಅಂಗೈಯಲ್ಲಿ ಜೀವ ಹಿಡಿದು ರಾತ್ರಿ ಕಳೆಯಬೇಕಾದ ಸ್ಥಿತಿ. ಇನ್ನು ಸ್ನಾನ ಮತ್ತು ಶೌಚಕ್ಕೆ ಬಯಲೇ ಗತಿಯಾಗಿದೆ. ಹಲವು ವರ್ಷಗಳಿಂದ ಕೈಯಲ್ಲಿ ಬಿಡಿಗಾಸು ಇಲ್ಲದೇ ಇಂಥ ನಿಕೃಷ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರೂ ಯಾರೊಬ್ಬರೂ ಈ ಹಿರಿಯ ಜೀವಕ್ಕೆ ಆಶ್ರಯ ಕಲ್ಪಿಸುವ ಕೆಲಸ ಮಾಡಿಲ್ಲ.
ಬೀಡಿಯ ಸೂಪು, ಕತ್ತರಿ, ನೂಲನ್ನೇ ಜೋಪಡಿಯಲ್ಲಿ ಜೋಪಾನವಾಗಿಟ್ಟು ಬದುಕಿಗೆ ಆಧಾರ ಮಾಡಿಕೊಂಡಿರುವ ಭವಾನಿ ಅಜ್ಜಿಯ ಬಳಿ ` ಬಡವರರಿಗಾಗಿ ಎಷ್ಟೊಂದು ಆಶ್ರಯ ಮನೆಗಳು ಮಂಜೂರಾಗಿದ್ರೂ ನಿಮಗ್ಯಾಕಜ್ಜಿ ಮನೆ ಕೊಟ್ಟಿಲ್ಲ’ ಎಂದು ಕೇಳಿದರೆ ಪಾಪ ಅಜ್ಜಿ ಕಣ್ಣಂಚಲ್ಲಿ ಹನಿಗೂಡಿದ ನೀರನ್ನ ಒರೆಸಿಕೊಂಡು ಮೌನಕ್ಕೆ ಶರಣಾಗ್ತಾರೆ. ಬಹುಶಃ ಕೇಳಿದ ಪ್ರಶ್ನೆಗೆ ಅವರಲ್ಲಿಯೂ ಉತ್ತರವಿಲ್ಲವೋ ಅಥವಾ ಆ ನಿರ್ಧಯಿಯಾದ ವಿಧಿ ತನಗೆ ಈ ಪರಿ ಪರೀಕ್ಷೆ ಒಡ್ಡುತ್ತಿದ್ದಾನೆ ಅನ್ನೋ ಗೊಂದಲ ಅಜ್ಜಿಯದ್ದು.
ಅನಾಥರ ದೀನದಲಿತರ ಉದ್ದಾರ ತಮ್ಮ ಧ್ಯೇಯವೆಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನಾದರೂ ಕಣ್ತೆರೆದು ಈ ರೀತಿ ನರಕಸದೃಶ ಜೀವನ ನಡೆಸುವವರ ಸಂಕಷ್ಟಕ್ಕೆ ನೆರವಾಗಬ ಕಾಗಿದೆ. ಆಧುನಿಕ ಜಾಲತಾಣಗಳ ಒಕ್ಕೂಟಗಳು ಈ ಬಗ್ಗೆ ಗಮನ ಹರಿಸಿ ಈ ಅಜ್ಜಿಗೆ ಕೊನೆಗಾಲದಲ್ಲಿ ನೆಮ್ಮದಿಯಾಗಿ ಕಣ್ಮುಚ್ಚೋಕಾದ್ರೂ ಅವಕಾಶ ಕಲ್ಪಿಸಿಕೊಡಲಿ ಎನ್ನೋದು ನಮ್ಮ ಆಶಯ.
ಬಲ ಕಳೆದುಕೊಳ್ಳುತ್ತಿರುವ ಕಾಲು
ಭವಾನಿಯವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ ನಂಜಿನ ಮುಳ್ಳು ತಾಕಿ ಕಾಲಿನ ಎರಡು ಬೆರಳುಗಳನ್ನು ಕತ್ತರಿಸಿ ತೆಗೆಯ ಬೇಕಾಯಿತು. ಕಾಲಿನ ನೋವು ವಿಪರೀತವಾಗಿದ್ದು ಹೆಚ್ಚೊತ್ತು ನಿಲ್ಲಲು ಆಗುತ್ತಿಲ್ಲ. ಒಂದೆಡೆ ದೈಹಿಕ ನೋವು, ಇನ್ನೊಂದೆಡೆ ಕಾಡುತ್ತಿರುವ ಬಡತನ… ಈ ಜಂಜಾಟದ ನಡುವೆ ಸರಕಾರ, ಸಂಘ ಸಂಸ್ಥೆಗಳು ಆಸರೆ ಒದಗಿಸುವರೇ ಎಂದು ಕಾಯುತ್ತಿದ್ದಾರೆ ಈ ವೃದ್ದೆ.
ಬೆಳಕು ನೀಡಿ ಪುಣ್ಯಕಟ್ಟಿಕೊಂಡ ಸಂಸ್ಥೆ
ಭವಾನಿ ಅಜ್ಜಿಯ ಶೋಚನೀಯ ಬದುಕನ್ನು ಗಮನಿಸಿದ ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಸಂಸ್ಥೆಯು ಇವರ ಗುಡಿಸಲಿಗೆ ಸೋಲಾರ್ ಬೆಳಕನ್ನು ಒದಗಿಸಿದೆ. ಆ ಮೂಲಕ ಅಜ್ಜಿಯ ದಶಕಗಳ ಕತ್ತಲೆ ಬದುಕಿಗೆ ಸೌರ ಬೆಳಕಿನ ದೀವಿಗೆಯನ್ನು ಬೆಳಗಿ ಪುಣ್ಯ ಕಟ್ಟಿಕೊಳ್ಳುವ ಕಾರ್ಯ ಮಾಡುವ ಮೂಲಕ ಈಕೆಯ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಚಿತ್ರ-ಮಾಹಿತಿ ಕೃಪೆ : ಸಂದೀಪ್ ಸಾಲ್ಯಾನ್