ವಿವಾಹದಲ್ಲಿ ಹೋಮ-ಹವನ ಕುಲಾಲರ ಸಂಪ್ರದಾಯವಲ್ಲ : ಗೋಪಾಲಕೃಷ್ಣ ವಾಂತಿಚ್ಚಾಲು
ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): `ಇಂದಿನ ದಿನಗಳಲ್ಲಿ ಕುಲಾಲರೂ ಸೇರಿದಂತೆ ಇತರ ತುಳು ಸಮುದಾಯದ ಅಳಿಯಕಟ್ಟು ಪರಂಪರೆಯ ಧಾರ್ಮಿಕ ನಡಾವಳಿಯನ್ನು ಬುಡಮೇಲು ಮಾಡುತ್ತಿರುವ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ನಾವು ಜಾಗರೂಕರಾಗಿ ನಮ್ಮ ಸಂಸ್ಕೃತಿ ಮತ್ತು ಆಚಾರ-ಸಂಪ್ರದಾಯಗಳನ್ನು ಅರಿತು ನಡೆಯಬೇಕಾದ ಅಗತ್ಯವಿದೆ’ ಎಂದು ಜಾನಪದ ಚಿಂತಕ, ಕಾಸರಗೋಡು ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿ ವಾಂತಿಚ್ಚಾಲು ಇದರ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ಹೇಳಿದರು.
ಮೂಡಬಿದ್ರೆ ಸಮಾಜ ಮಂದಿರದಲ್ಲಿ ಜೂ.೩೦ರಂದು ನಡೆದ ಮೂಡಬಿದ್ರೆ ಕುಲಾಲ ಸಂಘದ ವಾರ್ಷಿಕ ಮಹಾಸಭೆ, ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಇಂದು ಕುಲಾಲ ಸಮುದಾಯದ ವಿವಾಹ ಸಮಾರಂಭಗಳಿಗೆ ವೈದಿಕರನ್ನು ಕರೆಸಿ, ಲಾಜ ಹೋಮ, ಹವನಗಳನ್ನು ಇಟ್ಟು ಧಾರೆ ಎರೆಯುವ ಪದ್ಧತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದು ನಮ್ಮ ಅಳಿಯಕಟ್ಟು ಪರಂಪರೆಗೆ ವಿರುದ್ಧವಾಗಿದ್ದು, ನಮ್ಮ ಪ್ರಾಚೀನ ಪದ್ಧತಿಯಲ್ಲಿ ಈ ಸಂಪ್ರದಾಯವಿರಲಿಲ್ಲ. ಹೋಮ ಹವನ ನಡೆಸಿ ಮನೆಮಗಳನ್ನು ಧಾರೆ ಎರೆದು ಕೊಟ್ಟಲ್ಲಿ ಆಕೆ ತನ್ನ ತಾಯಿ ಮನೆಯ ಸಂಬಂಧ ಕಡಿದುಕೊಂಡಂತೆ. ಅಳಿಯಕಟ್ಟು ಪರಂಪರೆಯಲ್ಲಿ ಹೆಣ್ಣಿಗೆ ಪ್ರಧಾನ ಸ್ಥಾನಮಾನವಿದ್ದು, ಮದುವೆಯಾದರೂ ಹೆಣ್ಣು ತವರುಮನೆಯ ಸಂಬಂಧ ಕಡಿದುಕೊಳ್ಳುವುದಿಲ್ಲ. ಕುಲಾಲ ಸಮುದಾಯದವರಿಗೆ ಎಲ್ಲಾ ದೈವಸ್ಥಾನ, ಭೂತಾರಾಧನೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ವಿಶೇಷ ಗೌರವವಿದೆ. ಹೀಗಿರುವಾಗ ಇನ್ನಾದರೂ ನಾವು ನಮ್ಮತನವನ್ನು ಉಳಿಸಿಕೊಂಡು, ಇತರರನ್ನು ಅನುಸರಿಸದೇ ವಿವಾಹ ಸಮಾರಂಭದಲ್ಲಿ ಹೋಮ ಹವನ ನಡೆಸುವಂಥ ಪದ್ಧತಿ ನಿಲ್ಲಿಸಬೇಕಿದೆ” ಎಂದು ಅಭಿಪ್ರಾಯಪಟ್ಟರು.
ವಂಶಿ ಗ್ಲಾಸ್ ಕುಳಾಯಿ ಇದರ ಮಾಲಕ ಶ್ರೀನಾಥ್ ಕುಲಾಲ್, ಕುಳಾಯಿ ಕುಲಾಲ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸುಬ್ಬಯ್ಯ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಸಂಘಟಕ, ಸಮಾಜ ಸೇವಕ ಹೇಮಂತ್ ಕುಮಾರ್ ಕಿನ್ನಿಗೋಳಿ, ಚಿತ್ರಗಾರ್ತಿ ಸ್ವಾತಿ ಕುಲಾಲ್ ಕಲ್ಲಮುಂಡ್ಕೂರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತೀಕ್ಷಾ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ರಕ್ಷಿತಾ, ಆಕಾಶ್ ಕುಲಾಲ್ ಮೊದಲಾದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಘದ ವ್ಯಾಪ್ತಿಯ ಬಡ ಕುಟುಂಬದ 32 ಮಂದಿ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದೇ ಸಂದರ್ಭ ಮೂಡಬಿದ್ರೆ ಕುಲಾಲ ಸಂಘಕ್ಕೆ ನೂತನ ಅಧ್ಯಕ್ಷರನ್ನಾಗಿ ಸುಬ್ಬಯ್ಯ ಬಂಗೇರ ಅವರನ್ನು ಮರು ಆಯ್ಕೆ ಮಾಡಲಾಯಿತು. ವಿಕಾಸ್ ಕುಲಾಲ್ ಗೊಲ್ಲಾರಬೆಟ್ಟು ಸ್ವಾಗತಿಸಿ, ಧೂಮ ಮೂಲ್ಯ ಧನ್ಯವಾದಗೈದರು.