ತೋಕೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲರು ಹಿಂದಿನಿಂದಲೂ ಪ್ರಾಮಾಣಿಕತೆಗೆ, ಸಭ್ಯತೆಗೆ ಹೆಸರಾದ ಸಮುದಾಯ. ಇಂದು ಶೈಕ್ಷಣಿಕವಾಗಿ-ಸಾಮಾಜಿಕವಾಗಿ-ಆರ್ಥಿಕವಾಗಿಯೂ ಬಲಾಡ್ಯವಾಗುತ್ತಿರುವ ಕುಂಬಾರ ಸಮುದಾಯಕ್ಕೆ ಯಾರ ಕರುಣೆಯೂ ಬೇಕಿಲ್ಲ. ಬದಲಾಗಿ ಎಲ್ಲೆಡೆ ಅವಕಾಶಗಳು ಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಕುಲಾಲರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕಾದ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯೆಕ್ಷೆ ಕಸ್ತೂರಿ ಪಂಜ ಹಕ್ಕೊತ್ತಾಯ ಮಂಡಿಸಿದರು.
ಅವರು ಕುಲಾಲ ಸಮಾಜ ಸೇವಾ ಸಂಘ ತೋಕೂರು ಇದರ ಆಶ್ರಯದಲ್ಲಿ ಕುಲಾಲ ಜವನೆರ್ ತೋಕೂರು ಹಮ್ಮಿಕೊಂಡ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ಸಹಾಯಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕುಲಾಲ ಸಮಾಜ ಸೇವಾ ಸಂಘ ತೋಕೂರು ಇದರ ಮಾಜಿ ಅಧ್ಯಕ್ಷರಾದ ಲೀಲಾ ಬಂಜನ್ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನ್ಯಾಯವಾದಿ ಲಕ್ಷ್ಮಣ್ ಕುಂದರ್ ಮಾತನಾಡಿ ಕುಲಾಲರು ಆಧುನಿಕ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಏದುರಿಸಿ ಶೈಕ್ಷಣಿಕವಾಗಿ- ಸಾಮಾಜಿಕವಾಗಿ ಉಳಿದ ಸಮುದಾಯಗಳಿಗೂ ಸ್ಪರ್ಧಿಸುವ ಹಂತಕ್ಕೆ ಬೆಳೆದಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಕುಲಾಲ ಜವನೆರ್ ತೋಕೂರು ಇದರ ಮುಖ್ಯ ಸಂಘಟಕ ಹೇಮಂತ ಕುಮಾರ್ ಕಿನ್ನಿಗೋಳಿ ತಮ್ಮ ಸೇವಾ ಸಂಸ್ಥೆಯ ಬಗೆಗೆ ಪರಿಚಯಿಸುತ್ತಾ, ಇದೊಂದು ಸಮುದಾಯ ಬೆಳವಣಿಗೆಗೆ ದುಡಿಯುವ ಸೇವಾ ಮನೋಭಾವದ ಯುವಕರು ಕಟ್ಟಿ ಬೆಳೆಸಿದ ಸಂಸ್ಥೆಯಾಗಿದ್ದು ವಿವಿಧ ಸೇವಾ ಕಾರ್ಯಗಳ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಇದನ್ನು ವಿಸ್ತರಿಸುವ ದೃಷ್ಟಿಯಿಂದ ಸದ್ಯದಲ್ಲೆ ಮಹಿಳಾ ಘಟಕವೂ ಆರಂಭಗೊಳ್ಳಲಿದೆ ಎಂದರು.
ಕುಲಾಲ ಜವನೆರ್ ತೋಕೂರು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕುಂಬಾರಿಕೆ ವೃತ್ತಿ ನಿರತ ಭಾಸ್ಕರ ಕುಲಾಲ್, ಪ್ರತಿಭಾವಂತ ಚಿತ್ರ ಕಲಾವಿದೆ ಸ್ವಾತಿ ಪ್ರಕಾಶ್ ಮೂಲ್ಯ, ಅರಳು ಮಲ್ಲಿಗೆ ರಾಜ್ಯಪ್ರಶಸ್ತಿ ಪುರಸ್ಕೃತ ಲತಾ.ಜಿ. ಸಾಲ್ಯಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು. ಎಸ್.ಎಸ್.ಎಲ್. ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ತೋಕೂರು ಸುತ್ತಮುತ್ತಲ ಪರಿಸರದ ಪ್ರತಿಭಾವಂತ ಹನ್ನೆರಡು ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಲಾಯಿತು. ಸುಮಾರು ಹದಿನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಹಾಯಧನವನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಾಲ ಸಂಘ ಕಾರ್ಕಳ ಇದರ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಕುಲಾಲ ಚಾವಡಿ ನಿರ್ವಾಹಕ ಸಂತೋಷ್ ಕುಲಾಲ್ ಕಾರ್ಕಳ, ಕುಲಾಲ ಸಂಘ ಕುಳಾಯಿ ಇದರ ಕಾರ್ಯದರ್ಶಿ ಗಂಗಾದರ ಬಂಜನ್, ಜೆ.ಸಿ.ಐ. ಮುಂಡ್ಕೂರು ಭಾರ್ಗವ ಇದರ ನಿಕಟಪೂರ್ವ ಅಧ್ಯಕ್ಷರಾದ ಜೆ.ಸಿ. ಅರುಣಾ ಕುಲಾಲ್ ನಾನಿಲ್ತಾರ್, ಸ್ವರ್ಣ ಕುಂಭ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ನಾಗೇಶ್ ಕುಲಾಲ್, ಸಾಫ್ಟ್ ವೇರ್ ಇಂಜಿನಿಯರ್ ರಶ್ಮಿ ಕುಲಾಲ್ ಕಾರ್ಕಳ, ಕುಲಾಲ ಸಮಾಜ ಸೇವಾ ಸಂಘ ತೋಕೂರು ಇದರ ಅಧ್ಯಕ್ಷರಾದ ಆನಂದ ಸಾಲ್ಯಾನ್, ಕುಲಾಲ ಜವನೆರ್ ತೋಕೂರು ಇದರ ಹಿರಿಯ ಸದಸ್ಯರಾದ ಎಮ್. ಜಿ. ರಾಮಣ್ಣ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಲಾಲ ಜವನೆರ್ ತೋಕೂರು ಇದರ ಸಕ್ರೀಯ ಸದಸ್ಯ ಉಮೇಶ್ ಬಂಗೇರ ಐಕಳ ಸ್ವಾಗತಿಸಿದರು. ಉದಯ್ ಕುಮಾರ್ ತೋಕೂರು ಪ್ರಸ್ತಾಪಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.