ಮಂಗಳೂರು(ಜೂ.೦೭,ಕುಲಾಲ್ ವರ್ಲ್ಡ್ ಡಾಟ್ ಕಾಮ್): ನಗರದ ಹೊರವಲಯದಲ್ಲಿ ಗಂಜಿಮಠದಲ್ಲಿವ ಹಂಚಿನ ಕಾರ್ಖಾನೆ ಬಳಿಯ ಬಾವಿಯ ಕಾಮಗಾರಿ ವೇಳೆ ಅವಘಡ ಸಂಭವಿಸಿ ಕಾರ್ಮಿಕರೊಬ್ಬರು ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜೂ.6 ರ ಗುರುವಾರ ನಡೆದಿದೆ.ಮೃತ ಕೂಲಿ ಕಾರ್ಮಿಕನನ್ನು ಬಂಟ್ವಾಳದ ಸಿದ್ದಕಟ್ಟೆಯ ಸೇಸು ಮೂಲ್ಯ ಎಂಬವರ ಪುತ್ರ ವೆಂಕಪ್ಪ ಕುಲಾಲ್(38) ಎಂದು ಗುರುತಿಸಲಾಗಿದೆ.
ಘಟನೆಯ ವಿವರ :
ಗಂಜಿಮಠದಲ್ಲಿ ಹೊಸ ಪೆಟ್ರೋಲ್ ಬಂಕ್ ನಿರ್ಮಾಣವಾಗುತ್ತಿದ್ದು, ಇದರ ಸನಿಹದಲ್ಲೇ ಹಳೆಯ ಬಾವಿ ಇದ್ದು ಬೇಸಿಗೆಯಲ್ಲೂ ಸಾಕಷ್ಟು ನೀರೂ ಲಭ್ಯವಿರುವ ಕಾರಣ ಬಾವಿಯನ್ನು ಅಭಿವೃದ್ಧಿಪಡಿಸಿ ಮುಚ್ಚುವ ಬದಲು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಈ ಹಿನ್ನಲೆಯಲ್ಲಿ ರಾಜೇಶ್ ಎಂಬವರಿಗೆ ಗುತ್ತಿಗೆ ವಹಿಸಿಕೊಂಡು ಬಾವಿಯ ಕಾಮಗಾರಿ ನಿರ್ವಹಿಸುತ್ತಿದ್ದರು. ಒಟ್ಟು ಐವರು ಕಾರ್ಮಿಕರು ಬಾವಿಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕುವ ಕೆಲಸದಲ್ಲಿ ತೊಡಗಿದ್ದರು. ಇದರ ತಳಭಾಗದಲ್ಲಿ ವೆಂಕಪ್ಪ ಕೆಲಸ ಮಾಡುತ್ತಿದ್ದರೆ ಇನ್ನು ನಾಲ್ವರು ಮೇಲ್ಭಾಗದಲ್ಲೇ ಕೆಲಸ ಮಾಡುತ್ತಿದ್ದರು. ಆಗ ಸ್ಲ್ಯಾಬ್ ಹಠಾತ್ತನೆ ಕುಸಿದಿದ್ದು ಅದರಡಿ ಸಿಲುಕಿ ವೆಂಕಪ್ಪ ಮೃತಪಟ್ಟದ್ದಾರೆ. ಗಂಭೀರ ಗಾಯಗೊಂಡ ಮತ್ತೋರ್ವ ಕಾರ್ಮಿಕನನ್ನು ಅಶೋಕ್ ಶೇಟ್ ( 40) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.