ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಖ್ಯಾತ ಲೇಖಕಿ ಡಾ.ಗಾಯತ್ರಿ ನಾವಡ ಅವರು ಕಮಲಮ್ಮ ಅನಂತಕೃಷ್ಣ ದತ್ತಿಯಿಂದ ಕುಂದಪ್ರಭ ಸಂಸ್ಥೆ ಸಹಯೋಗದೊಂದಿಗೆ ನೀಡುವ ‘ಅಮ್ಮ’ ಕುಂದಗನ್ನಡ ಕಥಾ ಪ್ರಶಸ್ತಿಗೆ ಕುಲಾಲ ಸಮುದಾಯದ ತರುಣ ಲೇಖಕ ಮಂಜುನಾಥ ಹಿಲಿಯಾಣ ಆಯ್ಕೆಯಾಗಿದ್ದಾರೆ.
ಮಂಜುನಾಥ ಹಿಲಿಯಾಣ ಅವರ ‘ಹೆತ್ತಬ್ಬಿ ಕಲ್ಸಿದ ಪಾಠ’ ಕುಂದಕನ್ನಡದ ಕಥೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹಲವು ಬರಹಗಾರರರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಜ್ಯೋತಿ ಎಸ್. ಕಾರಂತ್ ಕೋಡಿ- ಕನ್ಯಾನ ಬರೆದ ‘ಕೆಸ್ರ ಹಿಡ್ದ್ ಊರ್’ ಹಾಗೂ ವಿನಯಾ ಪ್ರಸಾದ್ ಕಾಮತ್ ಕುಂಭಾಸಿ ಬರೆದ ‘ಅಮ್ಮ’ ಕುಂದ ಕಥೆಗಳು ಗಮನಾರ್ಹ ಕಥೆಗಳು ಎಂದು ವಿಮರ್ಶಕರಿಂದ ಪರಿಗಣಿಸಲ್ಪಟ್ಟಿವೆ. ವಿಶಾಲಾಕ್ಷಿ ಬಿ.ಜಪ್ತಿ ಬರೆದ ‘ಮುದುಡಿ ಅರ್ಳದ್ ಹೂಗ್’ ಮತ್ತು ಆಶಾ ನೇರಳಕಟ್ಟೆ ಬರೆದ ‘ಹೋಟ್ಲ್ ಮಾಣಿ’, ಕೆ.ಪ್ರತಾಪ್ ಕೊಡಂಚ ಫಿಲಿಡೆಲ್ಫಿಯಾ(ಯುಎಸ್ಎ) ಬರೆದ ‘ಜೀವನ್ಮುಖಿ’ ಕಥೆಗಳು ವಿಮರ್ಶಕರ ಮೆಚ್ಚುಗೆ ಪಡೆದಿವೆ.
ಉಡುಪಿಯ ಹಿರಿಯ ಲೇಖಕಿ ಶಾರದಾ ಭಟ್ ನೇತೃತ್ವದಲ್ಲಿ ಸ್ಪರ್ಧೆಗೆ ಆಗಮಿಸಿದ ಉತ್ತಮ ಕಥೆಗಳನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡದ ಬಗ್ಗೆ ಗಂಭೀರವಾದ ವಿಚಾರ ವಿಮರ್ಶೆ ನಡೆಸುವ ಚಿಂತನೆ ನಡೆಸಲಾಗಿದ್ದು, ಗಣ್ಯರು, ಲೇಖಕರು ಪಾಲ್ಗೊಳ್ಳುವಂತೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರೊ.ಎ.ವಿ.ನಾವಡ ತಿಳಿಸಿದರು. ನಲ್ವತ್ತು ವರ್ಷ ಮೀರದ ಯುವ ಕಥೆಗಾರರಗಾಗಿ ಈ ಸ್ಪರ್ಧೆ ನಡೆಸಲಾಗಿದ್ದು, ಅತ್ಯುತ್ತಮ ಕಥೆಗೆ ಪ್ರಶಸ್ತಿ ಸಹಿತ 5 ಸಾವಿರ ರೂ. ನೀಡಲಾಗುತ್ತದೆ ಎಂದು ಯು.ಎಸ್.ಶೆಣೈ ತಿಳಿಸಿದ್ದಾರೆ.