ಕಾರ್ಕಳ :(ಮೇ. ೨೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೋಳ ಕುಲಾಲ ಸಂಘದ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಗ್ರಾಮದ ಪಂಚಾಯತ್ ಕಚೇರಿ ಆವರಣದ ಭಗತ್ ಸಿಂಗ್ ಸಭಾಭವನದಲ್ಲಿ ಮೇ. ೨೬ರಂದು ನೆರವೇರಿತು.
ಸಂಘ ಅಧ್ಯಕ್ಷರಾದ ಸಂಜೀವ ಮೂಲ್ಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಂಡ್ಕೂರಿನ ಜೆಸಿಐ ಭಾರ್ಗವ ಇದರ ನಿಕಟಪೂರ್ವಾಧ್ಯಕ್ಷೆ ಅರುಣಾ ಕುಲಾಲ್ ಮಾತನಾಡಿ, ಕುಲಾಲ ಸಮಾಜದ ಎಳೆಯ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದಾಗ ನಮ್ಮ ಸಮಾಜ ಗಟ್ಟಿಗೊಳ್ಳುತ್ತಾ ಸಾಗುತ್ತದೆ. ಈ ದಿಸೆಯಲ್ಲಿ ಸಂಘದ ಕಾರ್ಯಕ್ರಮಗಳಲ್ಲಿ ಅವರನ್ನು ಹೆಚ್ಚು ತೊಡಗಿಸಿಕೊಂಡು,ಅವಕಾಶಗಳನ್ನು ನೀಡುವುದು ಉತ್ತಮ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಮಾಜದ ಬಡವರು, ಅಶಕ್ತರ ನೆರವಿಗೆ ಮುಂಚೂಣಿಯಲ್ಲಿ ಧಾವಿಸುವ ಕಾಪು ಕುಲಾಲ ಯುವ ವೇದಿಕೆ ಇದರ ಅಧ್ಯಕ್ಷ,ಉದಯ ಕುಲಾಲ್ ಮಾತನಾಡಿ,ಸಮಾಜದ ಅಶಕ್ತರಿಗೆ ಸಾಧ್ಯವಾದಷ್ಟು ನೆರವಾಗುವಂತೆ ಕಿವಿಮಾತು ಹೇಳಿದರು. ಜೊತೆಗೆ,ಕುಲಾಲ ಸಮಾಜದ ಅಗತ್ಯತೆಗೆ ತ್ವರಿತವಾಗಿ ಸ್ಪಂದಿಸಲು ಯುವವೇದಿಕೆಯನ್ನು ಹುಟ್ಟು ಹಾಕುವಂತೆ ಸಲಹೆಯನ್ನೂ ನೀಡಿದರು.
ಅಧ್ಯಕ್ಷರಾದ ಸಂಜೀವ ಮೂಲ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ, ಬೋಳ ಗ್ರಾಮದಲ್ಲಿ ಸಂಘವನ್ನು ಸ್ಥಾಪಿಸಲು ಶ್ರಮಿಸಿದವರಿಗೂ ಕೃತಜ್ಞತೆಯನ್ನುಸಲ್ಲಿಸಿದರು. ಮಹಾಬಲ ಮೂಲ್ಯ, ವಸಂತ ಮೂಲ್ಯ, ಪ್ರಭಾಕರ ಮೂಲ್ಯ, ಸುರೇಶ್ ಮೂಲ್ಯ, ಯಶವಂತ ಮೂಲ್ಯ, ಗಣೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಸುರಕ್ಷಾ ಹಾಗೂ ಸೂರಜ್ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಪವನ್ ಕುಮಾರ್ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ದೀಪ ಪ್ರಜ್ವಲನೆಯೊಂದಿಗೆ ಚಾಲನೆಗೊಂಡ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಯಶವಂತ ಮೂಲ್ಯರು ವರದಿ ವಾಚನಗೈದರು. ಇದೇ ಸಂದರ್ಭದಲ್ಲಿ ವಾರ್ಷಿಕ ಲೆಕ್ಕಪರಿಶೋಧನೆಯನ್ನೂ ಮಂಡಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ ಕುಲಾಲ್ ವಂದಿಸಿದರು. ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಮಾಜದ ಚಿಗುರು ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.