ಉಡುಪಿ(ಮೇ.೨೧, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಅಕಾಡೆಮಿ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಮುಂಬಯಿಯ ಲತಾ ಜಿ ಸಾಲ್ಯಾನ್ ಅವರಿಗೆ ಈ ಬಾರಿಯ ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಯಕ್ಷಗಾನ ಕ್ಷೇತ್ರದಲ್ಲಿ ಲತಾ ಜಿ ಸಾಲ್ಯಾನ್ ಅವರ ಸಾಧನೆಯನ್ನು ಪರಿಗಣಿಸಿ ಪ್ರೋತ್ಸಾಹಾರ್ಥವಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೇ.೧೮ರಂದು ಉಡುಪಿಯ ಕೃಷ್ಣಮಠದ ರಾಜಾಂಗಣ ಸಭಾಮಂಟಪದಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು ಈಸ್ಟ್ ವೆಸ್ಟ್ ತಾಂತ್ರಿಕ ಕಾಲೇಜಿನ ಮುಖ್ಯ ಉಪನ್ಯಾಸಕ ಡಾ. ಎಸ್.ಜೆ. ಹೀರೆಮಠ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಡಿಪು ಸೂರಜ್ ಶಿಕ್ಷಣ ಸಂಸ್ಥೆ ಡಾ. ಮಂಜುನಾಥ್ ಎಸ್. ರೇವಣಕರ್, ಬೆಂಗಳೂರು ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಎನ್.ಎಸ್. ರಾಕೇಶ್, ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ , ಬೆಂಗಳೂರು ಆರ್ಎನ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುಧೀರ್ ಪೈ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮೂಲತಃ ತೋಕೂರು ಸಮೀಪದ ಬೆಳ್ಳಾಯರು ಗ್ರಾಮದವರಾಗಿದ್ದು, ಪ್ರಸ್ತುತ ಮುಂಬಯಿಯ ನಲಾಸೋಪರದಲ್ಲಿ ನೆಲೆಸಿರುವ ಗೋಪಾಲ್ ವಿ ಸಾಲ್ಯಾನ್ ಹಾಗೂ ಮೋಹಿನಿ ದಂಪತಿಯ ಪುತ್ರಿಯಾಗಿರುವ ಲತಾ ಜಿ ಸಾಲ್ಯಾನ್ ಅವರು ಹೋಟೆಲ್ ಮ್ಯಾನೇಜ್ ಮೆಂಟ್ ಪದವೀಧರೆಯಾಗಿದ್ದು, ಯಕ್ಷಗಾನ, ಸಾಂಸ್ಕೃತಿಕ, ಚಿತ್ರಕಲೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪ್ರತಿಭೆ. ಇವರ ಸಾಧನೆ ಗುರುತಿಸಿ ಮುಂಬಯಿ ಕುಲಾಲ ಸಂಘ ಸಹಿತ ಹಲವು ಸಂಘ ಸಂಸ್ಥೆಗಳು ಗೌರವಿಸಿದೆ.