ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : `ತುಳುನಾಡಿನ ನಡೆದಾಡುವ ಕೃಷಿ ಯೂನಿವರ್ಸಿಟಿ’ ಎಂಬ ಹೆಸರು ಗಳಿಸಿದ್ದ ಹಿರಿಯ ಕೃಷಿಕ ರುಕ್ಕಯ್ಯ ಮೂಲ್ಯ ಪಾವಂಜೆ ಅವರು ಹೃದಯಾಘಾತದಿಂದ ಮೇ 19, ರವಿವಾರದಂದು ನಿಧನರಾಗಿದ್ದಾರೆ.
ಸುಮಾರು 90 ವರ್ಷ ಪ್ರಾಯದವರಾದ ರುಕ್ಕಯ್ಯ ಮೂಲ್ಯ ಅವರು ಮಧ್ಯಾಹ್ನದ ವೇಳೆ ಪಾವಂಜೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಅತೀವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿತ್ತು. ಇದರಿಂದ ಗಾಯಗೊಂಡ ಅವರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ಅವರು ಬಳಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಪಾವಂಜೆಯ ದಿ। ಬೊಗ್ಗು ಮೂಲ್ಯ ಮತ್ತು ದಿ। ದುಗ್ಗಮ್ಮ ಮೂಲ್ಯರವರ ಪುತ್ರರಾದ ರುಕ್ಕಯ್ಯ ಅವರು, ಕಡುಬಡತನವಿದ್ದುದರಿಂದ ಶಾಲೆಯ ಮೆಟ್ಟಿಲುನ್ನು ಏರದೆ, ಕೃಷಿಯನ್ನೇ ತನ್ನ ಸರ್ವಸ್ವ ಎಂದು ತಿಳಿದು ಕಾರ್ಯ ಪ್ರವೃತ್ತರಾಗಿದ್ದರು. ತನ್ನ ಹತ್ತನೇ ವಯಸ್ಸಲ್ಲೇ ನೇಗಿಲು ಹಿಡಿದು ಕೃಷಿ ಭೂಮಿಗೆ ಇಳಿದ ರುಕ್ಕಯ್ಯ ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಸುಮಾರು 85 ವರ್ಷಗಳಿಂದ ನಿರಂತರ ಕೃಷಿ ಕಾಯಕ ನಡೆಸಿಕೊಂಡು ನಿಜವಾದ ಮಣ್ಣಿನ ಮಗ ಎನಿಸಿಕೊಂಡಿದ್ದರು. ಸುಮಾರು 15 ಎಕ್ರೆ ಕೃಷಿ ಭೂಮಿಯಲ್ಲಿ ಏನೆಲ್ – ಸುಗ್ಗಿ – ಕೊಳಕೆ – ಇಡೆ ಕೊಳಕೆ ಕೃಷಿ ಮಾಡಿ ತಾಲೂಕಿನಲ್ಲಿಯೇ ಹೆಚ್ಚು ಇಳುವರಿ ತೆಗೆದ ಕೀರ್ತಿ ರುಕ್ಕಯ್ಯ ಮೂಲ್ಯ ಅವರದ್ದಾಗಿತ್ತು. ಕಳೆದ 85 ವರ್ಷಗಳಿಂದ ಈ ಜೀವಕ್ಕೆ ಕೃಷಿಯೇ ಆಧಾರವಾಗಿದ್ದು, ವರ್ಷವಿಡೀ ಕೃಷಿ ಭೂಮಿಯಲ್ಲಿ ಬೇರೆ ಬೇರೆ ಬೆಳೆ ಬೆಳೆದು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಇವರ ಕುಟುಂಬಕ್ಕೆ ಈ ಅಜ್ಜನ ಕೃಷಿ ಭೂಮಿಯೇ ಆಧಾರವಾಗಿದೆ. ಇವರ ಕೃಷಿ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ -ಪುರಸ್ಕಾರ ನೀಡಿ ಸನ್ಮಾನಿಸಿತ್ತು. ರುಕ್ಕಯ್ಯ ಮೂಲ್ಯ ಅವರು ಏಳು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತಿಮಕ್ರಿಯೆ ಮೇ 20ರಂದು ಸ್ವಗೃಹದಲ್ಲಿ ನಡೆಯಲಿದೆ.
ಚಿತ್ರ ಕೃಪೆ : ಅನೂಪ್ ಸೂರಿಂಜೆ