ಬೆನ್ನುಮೂಳೆ ಮುರಿದು ನಾಲ್ಕು ವರ್ಷಗಳಿಂದ ಗಾಲಿ ಖುರ್ಚಿಯಲ್ಲಿ ಶೋಚನೀಯ ಬದುಕು
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿಧಿಯಾಟ ಎಷ್ಟು ಘೋರ ಅಲ್ಲವೇ? ತಾನೊಂದು ಬಗೆದರೆ ದೈವವೊಂದು ಬಗೆಯಿತು ಅಂತಾರಲ್ಲ. ಬಹುಶಃ ಇದೂ ಹಾಗೆಯೇ ಅನ್ನಿಸುತ್ತದೆ. ಛಲದಿಂದ ಬದುಕುಕೊಟ್ಟಿಕೊಳ್ಳಬೇಕು ಎಂಬ ಕನಸುಕಂಗಳಲ್ಲಿದ್ದ ಈ ಯುವಕ ಹಾಸಿಗೆಯಿಂದೇಳಲಾಗದೇ ಪರಿತಪಿಸುವ ಸ್ಥಿತಿ ಮನಕಲುಕುವಂಥದ್ದು. ವಾಹನ ಅಪಘಾತದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದ ಈ ಯುವಕ ಕಳೆದ ನಾಲ್ಕು ವರ್ಷಗಳಿಂದ ಗಾಲಿ ಖುರ್ಚಿಯಲ್ಲಿ ದಿನ ಸಾಗಿಸುತ್ತಿದ್ದಾನೆ. ಬದುಕಿನಲ್ಲಿ ಎದುರಾದ ಆಕಸ್ಮಿಕ ದುರ್ಘಟನೆಯಿಂದ ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡು ನಿತ್ಯದ ಪ್ರತಿ ಕೆಲಸಗಳಿಗೂ ಮನೆಮಂದಿಯನ್ನೇ ಆಶ್ರಯಿಸುವ ದಯನೀಯ ಸ್ಥಿತಿ ಆತನಿಗೆ ಒದಗಿದೆ.
ಪೊಳಲಿ ಅಡ್ಡೂರು ಕಾಂಜಿಲಕೋಡಿ ಕೂಸಪ್ಪ ಮೂಲ್ಯ ಮತ್ತು ಮೋಹಿನಿ ಎಂಬವರ ಮಗನಾದ ಜಗದೀಶ ಕುಲಾಲ್ (36 ವರ್ಷ) ಆ ನತದೃಷ್ಠ ಯುವಕ. ಈ ದಂಪತಿಗಳ ಮೂವರು ಮಕ್ಕಳ ಪೈಕಿ ಹಿರಿಯವನಾಗಿ ಮನೆಗೆ ಆಧಾರವಾಗಬೇಕಿದ್ದ ಜಗದೀಶ್ ಗೆ ಈಗ ವಯಸ್ಸಾದ ತಾಯಿಯೇ ಆಧಾರ. ಮನೆಯೇ ಪ್ರಪಂಚ. ತಮ್ಮ ಮತ್ತು ತಂಗಿಯೇ ಬಂಧು-ಬಳಗ, ಸ್ನೇಹಿತರು. ಎಲ್ಲರೊಡನೆ ಕೂಡಿ, ಬೆರೆತು ಬದುಕುವ ಕಾಲದಲ್ಲಿ ವಿಧಿಯ ಕ್ರೂರತೆಗೆ ಬಲಿಯಾಗಿ ಎಲ್ಲವನ್ನೂ ಕಳಕೊಂಡವನಂತೆ ಜೀವಿಸುವ ಅಸಹಾಯಕ ಪರಿಸ್ಥಿತಿ ಅವರದ್ದು.
ಜಗದೀಶ ಅವರು ಪಿಕಪ್ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುಟುಂಬದ ಜೀವನ ನಿರ್ವಹಣೆಯು ತಕ್ಕಮಟ್ಟಿಗೆ ನಡೆಯುತ್ತಿತ್ತು. ಆದರೆ ಅದೊಂದು ಕರಾಳ ದಿನ ನಡೆದ ಅಪಘಾತವೊಂದು ಜಗದೀಶ್ ಅವರು ಜೀವನವನದ ದಿಕ್ಕನ್ನೇ ಬದಲಿಸಿತು. ಬಾಡಿಗೆಗೆಂದು ತಮ್ಮ ಪಿಕಪ್ ನಲ್ಲಿ ಸಾಮಾನು ಸರಂಜಾಮು ತುಂಬಿಕೊಂಡು ಗುರುಪುರದಲ್ಲಿ ಹೊಸದಾಗಿ ನಿರ್ಮಿಸಿದ ರಸ್ತೆಯ ಇಳಿಜಾರಿನಲ್ಲಿ ಸಾಗುತ್ತಿದ್ದ ವೇಳೆ ಮುಂದಿನ ಟಯರ್ ಜಾಮ್ ಆಗಿ ಪಲ್ಟಿ ಹೊಡೆದು ಉರುಳಿ ಬಿದ್ದಿದ್ದು, ಪರಿಣಾಮ ವಾಹನದಡಿಗೆ ಸಿಲುಕಿಕೊಂಡ ಇವರು ಬೆನ್ನುಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡರು. ತಕ್ಷಣ ಆಸ್ಪತ್ರೆಗೆ ಮಂಗಳೂರಿನ ಎಸ್ ಸಿಎಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಸರ್ಜರಿ ನಡೆಸಲಾಯಿತು. ಆದರೆ ಸೊಂಟದ ಕೆಳಭಾಗದಿಂದ ಚೈತನ್ಯವನ್ನೇ ಕಳೆದುಕೊಂಡ ಪರಿಣಾಮ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ತಾನು ಮೊದಲಿನಂತಾಗಬೇಕೆನ್ನುವ ಶತ ಪ್ರಯತ್ನವನ್ನು ನಡೆಸುತ್ತಿರುವ ಜಗದೀಶ್ ಸದ್ಯ ಗುರುಪುರದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸ , ಆರ್ಥಿಕ ಮುಗ್ಗಟ್ಟು :
ಸ್ವಂತ ಸೂರೂ ಇಲ್ಲದೇ ಗುರುಪುರದ ಮಠದ ಗುಡ್ಡ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಜಗದೀಶ್ ಕುಟುಂಬಕ್ಕೆ ವೆದ್ಯಕೀಯ ವೆಚ್ಚ ಭರಿಸಲು ಶಕ್ತಿಯಿಲ್ಲ, ಈಗಾಗಲೇ ಚಿಕಿತ್ಸೆಗಾಗಿ ಮಾಡಿದ ಸಾಲ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದೆ. ಈಗ ಆ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದ್ದು ಆರೋಗ್ಯ ಚೇತರಿಕೆಗಾಗಿ ದಾನಿಗಳ ನೆರವಿನ ಅಪೇಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ಕುಳಿತಲ್ಲಿಂದ ಏಳಲಾಗದೇ ತನ್ನೆಲ್ಲಾ ಬೇಕು-ಬೇಡಗಳಿಗೆ ಮತ್ತೊಬ್ಬರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಜಗದೀಶ್ ಅವರದ್ದಾಗಿದೆ. ಕಣ್ಣು ಕಾಣದ ವಯೋವೃದ್ಧ ತಾಯಿ, ವಿವಾಹವಾಗದ ತಂಗಿಗೆ ರಿಕ್ಷಾ ಚಾಲಕನಾಗಿರುವ ಒಬ್ಬ ತಮ್ಮನೇ ಸದ್ಯ ಆಸರೆಯಾಗಿದ್ದಾನೆ. ತಮ್ಮನ ದುಡಿಮೆ ಅವಲಂಬಿಸಿ ಬದುಕುತ್ತಿರುವ ಮನೆಯ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಚಿಕಿತ್ಸೆ, ಮದ್ದಿಗಾಗಿ ತಿಂಗಳಿಗೆ 5 ಸಾವಿರ ರೂ ಖರ್ಚಾಗುತ್ತಿದೆ. ಈಗಾಗಲೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೈ ಬರಿದು ಮಾಡಿಕೊಂಡಿರುವ ಜಗದೀಶ್ ಸಹೃದಯಿ ದಾನಿಗಳ ನೆರವು ನೀಡುವ ಆಶಾಭಾವನೆಯಲ್ಲಿದ್ದಾರೆ. ನೆರವು ನೀಡಬಯಸುವ ದಾನಿಗಳು ಜಗದೀಶ್ ತಾಯಿಯ ಹೆಸರಲ್ಲಿರುವ ಕೆಳಗಿನ ಖಾತೆಗೆ ಜಮಾ ಮಾಡಬಹುದು.