ಮಂಗಳೂರು : ಕುಲಾಲ ಸಮುದಾಯದ ಪ್ರಸಿದ್ಧ ಛಾಯಾಗ್ರಾಹಕ ಕೇಶವ ವಿಟ್ಲ ಅವರಿಗೆ ಈ ಸಾಲಿನ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ೨೧ ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದ್ದು, ಅವರಲ್ಲಿ ಕೇಶವ ವಿಟ್ಲ ಒಬ್ಬರಾಗಿದ್ದಾರೆ. ನೆಹರೂ ಮೈದಾನದಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕೇಶವ ವಿಟ್ಲ ಎನ್ನುವ ಅಪ್ಪಟ ದೇಸೀ ಪ್ರತಿಭೆ ಫೋಟೋ ಜರ್ನಲಿಸ್ಟ್ :
ನಾಡಿನ ಪ್ರಸಿದ್ಧ ಫೋಟೋ ಜರ್ನಲಿಸ್ಟ್ ಗಳ ಸಾಲಿಗೆ ಸೇರಬಲ್ಲ ಅಲ್ಲಾ ಅರ್ಹತೆಯಿರುವ ಅಪ್ಪಟ ದೇಸೀ ಪ್ರತಿಭೆ ಕೇಶವ ವಿಟ್ಲ ಈ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ ತುಂಬಾ ತಡವಾಗಿ ಅವರನ್ನು ಗುರುತಿಸಲಾಯಿತು ಎನ್ನುವ ವೈಯಕ್ತಿಕ ನೋವಿದೆ.
ಕೇಶವ ವಿಟ್ಲ ನನ್ನ ಸಹೋದ್ಯೋಗಿಯಾಗಿ ಮುಂಗಾರು ಪತ್ರಿಕೆಯಲ್ಲಿ , ನಂತರ ಕನ್ನಡಪ್ರಭದಲ್ಲಿ ದುಡಿದವರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಯಾಕೆ ತಡವಾಗಿ ಅವರನ್ನು ಗುರುತಿಸಲಾಯಿತೆಂದರೆ ಅವರು ಪ್ರಶಸ್ತಿಗಾಗಿ ಅರ್ಜಿ ಹಾಕಿ ಪ್ರಭಾವ ಬೀರುವ ಜಾಯಮಾನದವರಲ್ಲ ಎನ್ನುವುದನ್ನು ಅವರನ್ನು ಹತ್ತಿರದಿಂದ ಬಲ್ಲ ನನಗೆ ಗೊತ್ತು.
1984ರ ಕಾಲ. ಕರಾವಳಿಯಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಮುಂಗಾರು ಪತ್ರಿಕೆ ಆರಂಭಿಸಿ ಜನಶಕ್ತಿ ಬೆಳೆ ತೆಗೆಯುವ ಧ್ಯೇಯದೊಂದಿಗೆ ಮುನ್ನಡೆಯುತ್ತಿದ್ದ ಕಾಲಘಟ್ಟ. ಕೇಶವ ವಿಟ್ಲ 1985ರಲ್ಲಿ ಹೆಗಲಿಗೆ ಕ್ಯಾಮರಾ ಹಾಕಿಕೊಂಡು ಮುಂಗಾರು ಪತ್ರಿಕಾಲಯಕ್ಕೆ ಕಾಲಿಟ್ಟಾಗ ಮುಖದಲ್ಲಿ ನಗು ತುಂಬಿಕೊಂಡೇ ಬಂದರು. ನಿರಂತರ ನಗು ಕೇಶವ ವಿಟ್ಲ ಅವರ ಹೆಗ್ಗುರುತು.
ನಿಜ ಹೇಳಬೇಕೆಂದರೆ ಕೇಶವ ವಿಟ್ಲ ವಡ್ಡರ್ಸೆ ಗರಡಿಯಲ್ಲಿ ಪಳಗಿದ ಪ್ರತಿಭಾವಂತ. ಮುಂಗಾರು ಪತ್ರಿಕೆಗೆ ಫೋಟೋಗಳ ಮೂಲಕ ಜೀವ ತುಂಬಿದವರು ಎನ್ನುವುದನ್ನು ಹೇಳಿಕೊಳ್ಳುವ ವೇದಿಕೆ ನನಗೆ ಸಿಕ್ಕಿರಲಿಲ್ಲ ಆದ್ದರಿಂದ ಈಗ ಮುಕ್ತವಾಗಿ ಹೇಳುತ್ತಿದ್ದೇನೆ.
ಕಲಾತ್ಮಕವಾಗಿ ಮತ್ತು ವಿಭಿನ್ನ ನ್ಯೂಸ್ ವರ್ದಿ ಫೋಟೊ ತೆಗೆಯುವುದರಲ್ಲಿ ಅವರು ನಿಷ್ಣಾತರು. ಅತ್ಯಂತ ತಾಳ್ಮೆಯಿಂದ ಒಂದು ಪ್ರೇಮ್ ಫೋಟೋಗಾಗಿ ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುತ್ತಿದ್ದರು. ಸುದ್ದಿ-ಲೇಖನಕ್ಕೆ ಮೌಲ್ಯ ಬರುವಂಥ ಫೋಟೊಗಳನ್ನು ಅವರು ವೃತ್ತಿ ಜೀವನದಲ್ಲಿ ತೆಗೆದಿದ್ದಾರೆ. ಅವರದ್ದೇ ಆದ ಆಸಕ್ತಿ ಅವರ ವೃತ್ತಿಯಲ್ಲಿತ್ತು. ಅವರು ಇತ್ತೀಚೆಗೆ ಹೊರತಂದಿರುವ Facets of Karnataka ಎನ್ನುವ ಕರ್ನಾಟಕ ಪ್ರವಾಸೋದ್ಯಮದ ಮೇಲೆ ಬೆಳಕು ಚೆಲ್ಲುವ ಕೃತಿ ಅವರ ಕಸಬುಗಾರಿಕೆಗೆ ಹಿಡಿದ ಕನ್ನಡಿ.
ಸಂಘಜೀವಿ ಮತ್ತು ಒಳ್ಳೆಯ ಸ್ನೇಹ ಜೀವಿ ಕೇಶವ ವಿಟ್ಲ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಪ್ರತಿಭೆ ಎಂದು ನಾನು ಗ್ರಹಿಸಿದ್ದೇನೆ. ಈ ಪ್ರತಿಭೆ ಕೂಡಾ ಕುಲಾಲ ಸಮುದಾಯದ ಎಲೆಮರೆಯ ಕಾಯಿ ಎನ್ನಲು ಖುಷಿಪಡುತ್ತೇನೆ. (ಕೇಶವ ವಿಟ್ಲ ಬಗ್ಗೆ Talent ವಿಭಾಗದಲ್ಲಿ ಮತ್ತೊಂದು ಲೇಖನ ಇದೆ ಓದಿರಿ)
-ಚಿದಂಬರ ಬೈಕಂಪಾಡಿ