ಉಡುಪಿ : ಇಲ್ಲಿನ ಎಂಜಿಎಂ ಕ್ರೀಡಾಂಗಣದಲ್ಲಿ ಇಂದು 60ನೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಈ ಸಂದರ್ಭ ಸಾವಯವ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿರುವ ಆವರ್ಸೆ ಗ್ರಾಮದ ಕೃಷ್ಣ ಕುಲಾಲ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ 21 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದ್ದು, ಇವರಲ್ಲಿ ಕೃಷ್ಣ ಕುಲಾಲ್ ಒಬ್ಬರಾಗಿದ್ದಾರೆ.
ಬೇಸಾಯ ಮಾಡಿ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹತಾಶರಾಗಿದ್ದ ಉಡುಪಿ ಜಿಲ್ಲೆಯ ಆವರ್ಸೆ ಗ್ರಾಮದ ಕೃಷ್ಣ ಕುಲಾಲ್ ಅವರು 2005ರಲ್ಲಿ ಬೆಂಗಳೂರಿಗೆ ಬಳಿಕ ಮುಂಬಯಿಗೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೂ ಬೇಸತ್ತು ಮತ್ತೆ ಊರಿಗೆ ಬಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿಕೊಂಡು ಸಾವಯವ ಬೇಸಾಯದ ತರಬೇತಿ ಪಡೆದು ಬೇಸಾಯ ಮಾಡುತ್ತ ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕುಲಾಲರು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ.
2008ರಲ್ಲಿ ಕೃಷಿ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಆವರ್ಸೆಯಲ್ಲಿ ‘ಸಾವಯವ ಗ್ರಾಮ ಯೋಜನೆ’ ಕಾರ್ಯಕ್ರಮ ಹಮ್ಮಿಕೊಂಡಿತು. ಈ ಕಾರ್ಯಕ್ರಮದ ಫಲಾನುಭವಿ ರೈತರಿಗೆ ಸಾವಯವ ಬೇಸಾಯದ ತರಬೇತಿ, ಅಧ್ಯಯನ ಪ್ರವಾಸ, ಪ್ರಾತ್ಯಕ್ಷಿಕೆ ಇತ್ಯಾದಿಗಳನ್ನು ಸಂಘಟಿಸಿತು. ಇದರಲ್ಲಿ ಕುಲಾಲ್ ಭಾಗವಹಿಸಿ ತಮ್ಮ ಅನುಭವ ಹೆಚ್ಚಿಸಿಕೊಂಡರು. ನಂತರ ಕುಲಾಲ್ ತಮ್ಮ ಮನೆಗೆ ಗೋಬರ್ ಗ್ಯಾಸ್ ಘಟಕ ನಿರ್ಮಿಸಿಕೊಂಡರು. ಎರೆ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ಘಟಕ ಸ್ಥಾಪಿಸಿದರು. ತಯಾರಿಸಿದ ಗೊಬ್ಬರವನ್ನು ತಮ್ಮ ಹೊಲಕ್ಕೆ ಬಳಸುತ್ತ ಬಂದರು. ಅವರು ಬಯೋ ಡೈಜೆಸ್ಟರ್ ಘಟಕವನ್ನೂ ಹೊಂದಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಸಾವಯವ ಕೀಟನಾಶಕಗಳನ್ನು ತಯಾರಿಸಿ ಬಳಸುತ್ತಾರೆ.
ಕೃಷ್ಣ ಕುಲಾಲರಿಗೆ 4.5 ಎಕರೆ ಜಮೀನಿದೆ. ಅದರಲ್ಲಿ 250 ಅಡಿಕೆ ಮರಗಳು, 60 ತೆಂಗಿನ ಮರಗಳು, 100 ಕಾಳು ಮೆಣಸಿನ ಬಳ್ಳಿಗಳು, 100 ವೀಳ್ಯದೆಲೆ ಬಳ್ಳಿಗಳು, 90 ಕೋಕೊ ಗಿಡಗಳು, 1000 ನೋನಿ ಗಿಡಗಳು, 200 ಗೇರು ಮರಗಳನ್ನು ಬೆಳೆಸಿದ್ದಾರೆ. ಅವು ಫಲ ಕೊಡುತ್ತಿವೆ. ಜತೆಗೆ ಸ್ವಲ್ಪ ಭೂಮಿಯಲ್ಲಿ ಶ್ರೀಪದ್ಧತಿಯಲ್ಲಿ ಭತ್ತ ಬೆಳೆದುಕೊಳ್ಳುತ್ತಾರೆ. ಸ್ವಲ್ಪ ಜಾಗದಲ್ಲಿ ಮೇವಿನ ಹುಲ್ಲು ಬೆಳೆಯುತ್ತಾರೆ. ಅಲಸಂಡೆ, ಬೆಂಡೆ, ಮೆಣಸಿನಕಾಯಿ, ಚೀನಿಕಾಯಿ, ಕುಂಬಳಕಾಯಿ, ಸೌತೆ ಇತ್ಯಾದಿ ತರಕಾರಿಗಳನ್ನೂ ಬೆಳೆಯುತ್ತಾರೆ.
ಮನೆಯಲ್ಲಿ ಏಳು ಹಸುಗಳನ್ನು ಸಾಕಿದ್ದಾರೆ. ಹಸುಗಳಿಗಾಗಿ ಅಜೋಲ ಬೆಳೆಯುತ್ತಾರೆ. ತೋಟದಲ್ಲಿ ಜೇನು ಸಾಕಿದ್ದಾರೆ. ಗಿರಿರಾಜ ಕೋಳಿಗಳನ್ನು ಸಾಕಿದ್ದಾರೆ. ಸ್ವಲ್ಪ ಜಾಗದಲ್ಲಿ ನರ್ಸರಿಯನ್ನೂ ಮಾಡಿದ್ದಾರೆ. ಇರುವ ಸ್ವಲ್ಪ ಭೂಮಿಯಲ್ಲೇ ಹಲವು ಬೆಳೆಗಳನ್ನು ಬೆಳೆಯಲು ಸಾಧ್ಯ ಎನ್ನುವುದಕ್ಕೆ ಕೃಷ್ಣ ಕುಲಾಲರ ತೋಟ ಅತ್ಯುತ್ತಮ ಉದಾಹರಣೆ.
ಇವರ ಬೇಸಾಯ ವಿಧಾನಗಳನ್ನು ನೋಡಲು ಅನೇಕ ಊರುಗಳಿಂದ ರೈತರು ಬರುತ್ತಾರೆ. ಅವರ ನಾಲ್ಕೂವರೆ ಎಕರೆ ತೋಟ ‘ರೈತ ಪಾಠಶಾಲೆ’ಯಾಗಿ ರೂಪುಗೊಂಡಿದೆ. ಕುಲಾಲರು ರಾಜ್ಯದ ಹಲವು ಕಡೆಗಳಲ್ಲಿ ನಡೆಯುವ ಕೃಷಿ ಮೇಳ, ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿ ಅಲ್ಲಿ ತಾವೇ ಬೆಳೆದ ತರಕಾರಿ ಬೀಜಗಳನ್ನು ಮಾರಾಟ ಮಾಡುತ್ತಾರೆ. ತರಕಾರಿ ಮತ್ತಿತರ ಬೆಳೆಗಳನ್ನು ಬೆಳೆಯುವ ವಿಧಾನ ಕುರಿತು ರೈತರಿಗೆ ವಿವರಿಸುತ್ತಾರೆ. ( ಇವರ ಸಾಧನೆ ಬಗ್ಗೆ TALENTS ವಿಭಾಗದಲ್ಲಿ ವಿಸ್ತೃತ ವರದಿ ನೋಡಿ)