ಕುಲಾಲ, ಕುಂಬಾರ, ಮೂಲ್ಯ, ಪ್ರಜಾಪತಿ, ಚೌಡಶೆಟ್ಟಿ ಹೀಗೆ ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವ ಕುಂಬಾರ ಸಮುದಾಯದ ಜನ ರಾಜ್ಯದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಕುಂಬಾರಿಕೆಯೇ ಈ ಸಮುದಾಯದ ಮೂಲ ಕಸುಬಾಗಿರುವುದರಿಂದ ಇವರೆಲ್ಲರೂ ಕುಂಬಾರರೇ. ರಾಜ್ಯದ ಒಟ್ಟು ಕುಂಬಾರರ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಇತರ ಪ್ರಬಲ ಸಮುದಾಯದ ಜನಸಂಖ್ಯೆಯಷ್ಟೇ ಕುಂಬಾರರ ಜನಸಂಖ್ಯೆಯೂ ಇದೆ. ಆದರೆ ಇತರ ಸಮುದಾಯಕ್ಕೆ ಸಿಕ್ಕ ರಾಜಕೀಯ ಪ್ರಾತಿನಿಧ್ಯ ಕುಲಾಲ ಅಥವಾ ಕುಂಬಾರ ಸಮುದಾಯಕ್ಕೆ ಯಾಕೆ ಸಿಕ್ಕಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಕುಂಬಾರರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎನ್ನುವ ಹೋರಾಟ ಇಂದು ನಿನ್ನೆಯದಲ್ಲ. ಆದರೆ ರಾಜಕೀಯ ಪಕ್ಷಗಳು, ಅದರ ಮುಖಂಡರುಗಳು ಎಷ್ಟರ ಮಟ್ಟಿಗೆ ಕುಂಬಾರರ ಈ ಬೇಡಿಕೆಗೆ ಮನ್ನಣೆ ನೀಡಿದ್ದಾರೆ ಎನ್ನುವುದು ಉತ್ತರ ಸಿಗದ ಪ್ರಶ್ನೆ. ಪ್ರತೀ ಬಾರಿ ಚುನಾವಣೆ ಬಂದಾಗಲೂ ಕುಂಬಾರರಿಗೆ ರಾಜಕೀಯ ಪ್ರಾಶಸ್ತ್ಯ ನೀಡುತ್ತೇವೆ ಎನ್ನುತ್ತಲೇ ಎಲ್ಲಾ ರಾಜಕೀಯ ಪಕ್ಷಗಳು ಕುಂಬಾರ ಸಮುದಾಯವನ್ನು ಟಿಶ್ಯು ಪೇಪರ್ಗಳಂತೆ ಉಪಯೋಗಿಸಿಕೊಂಡಿವೆ. ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿ, ಗೆದ್ದ ಬಳಿಕ ನಿಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತೇವೆ ಎಂದು ಭರವಸೆ ನೀಡಿ ಬಳಿಕ ಮುಂದಿನ ಚುನಾವಣೆಯ ವೇಳೆ ಮತ್ತೆ ಅದೇ ಹಳೆಯ ಭರವಸೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿರುವುದು ಇದುವರೆಗೆ ನಡೆದುಕೊಂಡು ಬಂದ ಪದ್ದತಿ. ಮುಂದಿನ ದಿನಗಳಲ್ಲೂ ಇದೇ ಪದ್ದತಿ ಪುನಾರವರ್ತನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕುಂಬಾರ ಸಮುದಾಯಕ್ಕೆ ಅವಕಾಶವನ್ನು ನೀಡಿದರೆ ಎಲ್ಲಿ ರಾಜಕೀಯವಾಗಿ ಪ್ರಬಲ ಶಕ್ತಿಯಾಗುತ್ತರೋ ಎನ್ನುವ ಆತಂಕ ಎಲ್ಲಾ ರಾಜಕೀಯ ಪಕ್ಷ ಮುಖಂಡರಲ್ಲಿದೆ. ಸ್ಥಾನಮಾನ ಕೊಟ್ಟಿದೆ ಎನ್ನುವ ಕಾರಣಕ್ಕಾಗಿ ಗ್ರಾ.ಪಂ, ತಾ.ಪಂ, ಪುರಸಭೆ, ನಗರ ಸಭೆ ಹೆಚ್ಚೆಂದರೆ ಮಹಾನಗರ ಪಾಲಿಕೆಯ ಚುನಾವಣೆಗಳಿಗೆ ಸ್ಪರ್ಧಿಸುವಷ್ಟು ಅವಕಾಶ ಮಾತ್ರ ಈವರೆಗೆ ಸಿಕ್ಕಿದೆ. ಅದೂ ಬೆರಳೆಣಿಕೆಯ ಮಂದಿಗೆ; ಕೆಲವೇ ಕೆಲವು ಪ್ರದೇಶಗಳಲ್ಲಿ. ಇನ್ನೂ ಜಿ.ಪಂ., ವಿಧಾನಸಭೆ, ವಿಧಾನಪರಿಷತ್, ಲೋಕಸಭೆಯಲ್ಲಿ ಸ್ಪರ್ಧಿಸುವ ಅವಕಾಶಗಳು ಕುಂಬಾರ ಸಮುದಾಯಕ್ಕೆ ಗಗನ ಕುಸಮವಾಗಿಯೇ ಉಳಿದಿದೆ. ಹಾಗಂತ ನಾಯಕರ ಕೊರತೆಯೇನೂ ಕುಲಾಲ ಸಮಾಜದಲ್ಲಿಲ್ಲ. ಅವಕಾಶ ಸಿಕ್ಕರೆ ಸಮರ್ಥವಾಗಿ ರಾಜಕೀಯ ಶಕ್ತಿಯಾಗಿ ಬೆಳೆಯಬಲ್ಲ ಅದೆಷ್ಟೋ ಯುವ ನಾಯಕರು ಕುಂಬಾರ ಸಮುದಾಯದಲ್ಲಿದ್ದರೆ ಎನ್ನುವುದು ಉಲ್ಲೇಖಾರ್ಹ. ಆದರೆ ಅಂತಹ ಪ್ರಯತ್ನಕ್ಕೆ ಯಾವುದೇ ರಾಜಕೀಯ ಪಕ್ಷ ಮುಂದಾಗಲಿಲ್ಲ. ಮುಂಗೈಗೆ ಬೆಣ್ಣೆ ಸವರುವ ಕೆಲಸವಷ್ಟೇ ಈವರೆಗೆ ನಡೆದಿರುವುದು.
ಹಾಗಾದರೆ ನಾವು ಎಡವಿದ್ದೆಲ್ಲಿ?
ಕುಂಬಾರ ಸಮುದಾಯಕ್ಕೆ ಇನ್ನೂ ಸೂಕ್ತ ರಾಜಕೀಯ ಪ್ರತಿನಿಧ್ಯ ಸಿಗದೇ ಇದ್ದರೆ ನಾವು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಹೌದು, ರಾಜಕೀಯ ಪ್ರಾತಿನಿಧ್ಯ ನಮಗೂ ಬೇಕು ಎಂದು ನಾವು ಎಚ್ಚೆತ್ತುಕೊಳ್ಳುತ್ತಿದ್ದದ್ದು ಚುನಾವಣೆಯ ಸಂದರ್ಭ ಮಾತ್ರವೇ. ಚುನಾವಣೆಯ ಬಳಿಕ ನಾವೂ ಮೌನವಾಗಿರುತ್ತೇವೆ. ಮಗು ಅತ್ತರೆ ಮಾತ್ರ ತಾಯಿ ಹಾಲೂಡಿಸುತ್ತಾಳೆ ಎನ್ನುವಂತೆ ಕುಂಬಾರರ ಸಾಂಘಿಕ ಹೋರಾಟದ ಕೂಗು ನಿರಂತರವಾಗಿರಬೇಕು. ಹಾಗೂ ನಿಶ್ಚಿತ ಗುರಿ ಮುಟ್ಟುವವರೆಗೆ ನಮ್ಮ ಹೋರಾಟ ಮುಂದುವರೆಯ ಬೇಕು. ರಾಜಕೀಯದ ಏಣಿ ಏರಿ ಕುಳಿತಿರುವ ನಾಯಕರುಗಳಿಗೆ ತಳ ಭಾಗದಲ್ಲಿರುವ ನಮ್ಮ ಜನರ ಕೂಗು ಕೇಳಿಸಬೇಕೆಂದರೆ ನಮ್ಮ ಕೂಗು ಅಷ್ಟೇ ಜೋರಾಗಿರಬೇಕು. ಮಲಗಿರುವ ರಾಜಕೀಯ ನಾಯಕರನ್ನು ಪ್ರತೀ ಬಾರಿ ಚಿವುಟಿ ಎಬ್ಬಿಸುವ ಕೆಚ್ಚೆದೆ ನಮ್ಮಳೊಗೆ ಬರಬೇಕು. ಮೊದಲು ನಾವು ಜಾತಿಯೊಳಗೆ ಬಲಗೊಳ್ಳಬೇಕು. ಸಂಘಟನೆಯನ್ನು ಬಲಿಷ್ಠಗೊಳಿಸ ಬೇಕು. ಬಳಿಕ ರಾಜಕೀಯವಾಗಿ ಪ್ರಬಲರಾಗಬೇಕು. ರಾಜಕೀಯ ಪ್ರಾತಿನಿಧ್ಯಕ್ಕೆ ಹೋರಾಟ ನಮ್ಮ ಜಾತಿಸಂಘಟನೆಗಳ ಪ್ರಮುಖ ಅಜೆಂಡವಾಗಬೇಕು. ಯಾವುದೇ ಪಕ್ಷದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡಿರುವ, ನಮ್ಮ ಸಮಾಜದ ಅಭಿವೃದ್ದಿಗೆ ತುಡಿಯುವ ಮನಸ್ಸಿರುವ ನಮ್ಮ ನಾಯಕರನ್ನು ಪಕ್ಷ ಭೇದ ಮರೆತು ಪ್ರೋತ್ಸಾಹಿಸಬೇಕು. ಕುಂಬಾರ ಸಮುದಾಯದ ಅಭ್ಯರ್ಥಿಯನ್ನು ಒಗ್ಗಟ್ಟಿನಿಂದ ಬೆಂಬಲಿಸ ಬೇಕು. ಗ್ರಾ.ಪಂ.ಚುನವಾಣೆಯೇ ಇರಲಿ, ವಿಧಾನಸಭೆಯ ಚುನಾವಣೆಯೇ ಇರಲಿ ಕುಲಾಲ ಸಮಾಜಕ್ಕೆ ಯಾವ ಪಕ್ಷ ಎಷ್ಟು ಪ್ರಾತಿನಿಧ್ಯ ನೀಡಿದೆ ಎಂದು ತುಲನೆ ಮಾಡುವ ಸಾಮಾಥ್ರ್ಯ ನಮ್ಮಲ್ಲಿರಬೇಕು.
ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಮಾತ್ರ ಈ ಕನಸನ್ನು ನನಸುಗೊಳಿಸ ಬಹುದು. ರಾಜಕೀಯ ಪ್ರಾತಿನಿಧ್ಯ ಸಿಗಬೇಕಾದರೆ ಇತರ ಸಮುದಾಯಗಳಂತೆ ನಾವು ಪ್ರಬಲರಾಗಬೇಕು. ನಮ್ಮ ಹಕ್ಕನ್ನು ಬಾಯ್ಬಿಟ್ಟು ಕೇಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಹಕ್ಕೊತ್ತಾಯಕ್ಕೆ ಈಗಿನಿಂದಲೇ ಸಿದ್ದರಾಗ ಬೇಕು. ಯಾಕೆಂದರೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸಮೀಪದಲ್ಲಿದೆ…


