ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಿಂಚು, ಸಿಡಿಲ ಅಬ್ಬರಕ್ಕೆ ಅಧಿಕ ಪ್ರಮಾಣದ ವಿದ್ಯುತ್ ಹರಿದು ಅರ್ಥ್ ವಯರ್ ವಿದ್ಯುತ್ ಶಾಕ್ನಿಂದ ಹೆತ್ತವರನ್ನು ಕಳೆದುಕೊಂಡ ಏಕೈಕ ಮಗಳು ಅಶ್ವಿತಾ ಮೂಲ್ಯ ಅನಾಥೆಯಾಗಿದ್ದಾಳೆ.
ಕೊಕ್ರಾಡಿ ಗ್ರಾಮದ ಪಾಡಿ ಬನತ್ಯರಡ್ಡ ಮನೆ ಸಂಜೀವ ಮೂಲ್ಯ (61) ಹಾಗೂ ಅವರ ಪತ್ನಿ ಸರೋಜಿನಿ (44) ಅವರು ಗುರುವಾರ ರಾತ್ರಿ ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಬರುತ್ತಿದ್ದಾಗ ಅಧಿಕ ಪ್ರಮಾಣದ ವಿದ್ಯುತ್ ಹರಿದು ಅರ್ಥ್ ವಯರಿನ ವಿದ್ಯುತ್ ಶಾಕ್ನಿಂದ ದಾರುಣವಾಗಿ ಮೃತಪಟ್ಟಿದ್ದರು. ಅಂದು ಮನೆಯಲ್ಲಿದ್ದ ಪುತ್ರಿ ಅಶ್ವಿತಾ ಅಪಾಯದಿಂದ ಪಾರಾಗಿದ್ದು, ಇದೀಗ ಅಪ್ಪ ಅಮ್ಮನ ಮಮತೆ ಕಳೆದುಕೊಂಡು ತಬ್ಬಲಿಯಾಗಿದ್ದಾಳೆ.
ಅಶ್ವಿತಾ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಳೆ. ಮನೆ ಖರ್ಚು ವೆಚ್ಚಗಳನ್ನು ಪೂರೈಸುತ್ತಿದ್ದ ದಂಪತಿ ಏಕೈಕ ಪುತ್ರಿಗೆ ಶಿಕ್ಷಣ ನೀಡುತ್ತಿದ್ದರು. ಕೃಷಿಕರಾಗಿದ್ದ ಸಂಜೀವ ಮೂಲ್ಯ ಅವರು ಹಲವು ಕಡೆ ಪ್ರಶಸ್ತಿ ಪಡೆದುಕೊಂಡಿದ್ದರು. ಸರೋಜಿನಿ ಬೀಡಿ ಕಟ್ಟಿ ಮನೆ ಖರ್ಚು ನೋಡಿಕೊಳ್ಳುತ್ತಿದ್ದರು. ಇಬ್ಬರೂ ಕಾಣದ ಲೋಕದಲ್ಲಿ ಕಣ್ಮರೆಯಾಗಿದ್ದು, ಮಗಳ ಭವಿಷ್ಯ ಕತ್ತಲೆಯಲ್ಲಿ ಸಿಲುಕಿದಂತಾಗಿದೆ.
ಪರಿಹಾರ ಘೋಷಿಸಲು ಆಗ್ರಹ
ಮೃತಪಟ್ಟ ದಂಪತಿಯ ಕುಟುಂಬಕ್ಕೆ ಪರಿಹಾರ ಘೋಷಿಸುವಂತೆ ಗ್ರಾಮಸ್ಥರು, ಕುಲಾಲ ಸಂಘಟನೆಗಳು ಆಗ್ರಹಿಸಿವೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂದಿದ್ದರೂ ಪರಿಹಾರ ಘೋಷಿಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಸಿಐ ಸಂದೇಶ್ ಪಿ.ಜಿ., ಶಾಸಕ ಹರೀಶ್ ಪೂಂಜ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಎಎಸ್ಪಿ ಸಾಹಿದುಲ್ಲಾ ಅದಾವತ್ ಮನೆಗೆ ಭೇಟಿ ನೀಡಿದ್ದಾರೆ.