ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪಾಣಾಜೆಯಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ನೀರಿನ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ ದುಃಖ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ವಿದ್ಯುತ್ ಆಘಾತವಾಗಿ ದಂಪತಿ ದುರ್ಮರಣಕ್ಕೀಡಾಗಿದ್ದಾರೆ.
ಕೊಕ್ರಾಡಿಯ ಸರೋಜಿನಿ ಮೂಲ್ಯ (50) ಹಾ ಗೂ ಅವರ ಪತಿ ಸಂಜೀವ ಮೂಲ್ಯ (55) ಮೃತಪಟ್ಟ ದುರ್ದೈವಿಗಳು. ಸರೋಜಿನಿ ಅವರು ತಮ್ಮ ಮನೆಯ ಸ್ವಿಚ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ, ವಿದ್ಯುತ್ ಸರಬರಾಜು ನಿಲ್ಲಿಸಲು ಫ್ಯೂಸ್ ತೆಗೆಯಲು ಹೋಗಿದ್ದರು. ಈ ಸಂದರ್ಭ ಅವರ ದೇಹಕ್ಕೆ ವಿದ್ಯುತ್ ಪ್ರವಾಹವಾಗಿ ಬೊಬ್ಬೆ ಹಾಕಲಾರಂಭಿಸಿದ್ದರು. ಪತ್ನಿಯ ಚೀರಾಟ ಕೇಳಿ ಸಹಾಯಕ್ಕೆ ಧಾವಿಸಿದ ಪತಿ ಸಂಜೀವ ಮೂಲ್ಯ ಅವರೂ ಕೂಡಾ ವಿದ್ಯುತ್ ಅಘಾತಕ್ಕೊಳಗಾಗಿದ್ದು, ಗಂಭೀರ ಗಾಯಗೊಂಡ ಪತಿ ಹಾಗೂ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದಂಪತಿಗಳಿಗೆ ಪದವಿ ವ್ಯಾಸಂಗ ಮಾಡುತ್ತಿರುವ ಒಬ್ಬಳು ಮಗಳಿದ್ದು ಘಟನೆ ಸಂದರ್ಭ ಆಕೆ ಮತ್ತು ಸಂಬಂಧಿಯೊಬ್ಬರು ಮನೆಯಲ್ಲಿದ್ದರು.
ತಾಂತ್ರಿಕ ದೋಷವೇ ಈ ಅನಾಹುತಕ್ಕೆ ಕಾರಣವೆಂದು ಮೇಲ್ನೊಟಕ್ಕೆ ಕಂಡಿದ್ದು, ಅಕ್ಕಪಕ್ಕದ 5-6 ಮನೆಗಳ ವಯರ್ ಹಾಗೂ ವಿದ್ಯುತ್ ಸರಬರಾಜಿಗೆ ಸಂಬಂಧಿತ ಬಿಡಿ ಭಾಗಗಳು ಸುಟ್ಟು ಕರಕಲಾಗಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್, ತಾಲೂಕು ತಹಶೀಲ್ದಾರರು, ವೇಣೂರು ಕಂದಾಯ ಇಲಾಖೆಯ ಪವಾಡಪ್ಪ, ಅರವಿಂದ ಶೆಟ್ಟಿ, ಮಾಜಿ ಪಂಚಾಯತ್ ಅಧ್ಯಕ್ಷ ಸೂರ್ಯ, ಬೆಳ್ತಂಗಡಿ ಉಪವಿಭಾಗ ವಿದ್ಯುತ್ಚಕ್ತಿ ಇಂಜಿನಿಯರ್, ವೇಣೂರು ಮೆಸ್ಕಾಂ ಕಿರಿಯ ಇಂಜಿನಿಯರ್ ಬೂಬ ಶೆಟ್ಟಿ ಭೇಟಿ ನೀಡಿದ್ದರು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.