ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪಾಣಾಜೆ ಸಮೀಪದ ಉಡ್ಡಂಗಳ ಎಂಬಲ್ಲಿ ಆಟ ಆಡಲೆಂದು ನೀರಿನ ಟ್ಯಾಂಕ್ಗೆ ಇಳಿದ ಒಂದೇ ಕುಟುಂಬಕ್ಕೆ ಸೇರಿದ ಮೂವರು ಮಕ್ಕಳು ಸಾವಿಗೀಡಾದ ಘಟನೆಯು ಸ್ಥಳೀಯರಲ್ಲಿ ತೀವ್ರ ದಿಗ್ಭ್ರಮೆ ಹುಟ್ಟಿಸಿದ್ದು, ಎಳೆ ಕಂದಮ್ಮಗಳನ್ನು ಕಳೆದುಕೊಂಡ ಪೋಷಕರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕೂಲಿನಾಲಿ ಮಾಡಿ ಬದುಕು ಸವೆಸುತ್ತಾ ಮಕ್ಕಳ ಲಾಲನೆ ಪಾಲನೆಯಲ್ಲಿ ದಿನದೂಡುತ್ತಿದ್ದ ಆ ಮನೆಗಳ ತಾಯಂದಿರ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಎಂತಹ ಶತ್ರುವಿಗಾದರೂ ವಿಧಿ ಈ ರೀತಿಯ ಶಿಕ್ಷೆ ಕೊಡದಿರಲಿ ಎನ್ನುತ್ತಿದೆ ನೋಡುವವರ ಮನಸ್ಸು.. ಮಕ್ಕಳ ಕಿಲ ಕಿಲ ಸದ್ದು ಅಡಗಿದೆ. ಎಲ್ಲೆಂದರಲ್ಲಿ ನೀರವ ಮೌನ ಆವರಿಸಿದೆ.
ಉಡ್ಡಂಗಳದ ಸಹೋದರರಾದ ರವಿ ಮೂಲ್ಯ ಹಾಗೂ ಹರೀಶ್ ಮೂಲ್ಯರವರ ಮಕ್ಕಳಾದ ಜಿತೇಶ್, ವಿಸ್ಮಿತಾ ಹಾಗೂ ಚೈತ್ರಾ ಆಟವಾಡುತ್ತಾ ವಿಧಿಯಾಟಕ್ಕೆ ಬಲಿಯಾದ ಕಂದಮ್ಮಗಳು.. ಭವಿಷ್ಯದ ಹೊಂಗನಸುಗಳೊಂದಿಗೆ ಬಾಳಿ ಬೆಳಗಬೇಕಿದ್ದ ಎಳೆಯ ಜೀವಗಳು ಟ್ಯಾಂಕ್ ನೊಳಗೆ ಕಮರಿ ಹೋಗಿ ಹೆತ್ತ ಅಪ್ಪ ಅಮ್ಮಂದಿರ ಬದುಕು ನಶ್ವರವಾಗಿದೆ.
ಮರದ ಕೆಲಸ ಮಾಡಿಕೊಂಡು ಕಷ್ಟದಿಂದ ಜೀವನ ನಡೆಸುತ್ತಿದ್ದ ರವಿ ಕುಲಾಲ್ ಅವರಿಗೆ ಹೆಣ್ಣು ಮತ್ತು ಗಂಡು ಮಕ್ಕಳಿದ್ದು, ಕಿರಿಯ ಪುತ್ರ ಜಿತೇಶ್ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದ ಅವರ ಸಹೋದರ ಅವರಿಗೆ ಇದ್ದ ಇಬ್ಬರು ಹೆಣ್ಣು ಮಕ್ಕಳೂ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.
ಅಕ್ಕಪಕ್ಕದಲ್ಲಿ ಮನೆ ಮಾಡಿಕೊಂಡಿರುವ ಆರ್ಥಿಕವಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ತಾಯಂದಿರು ಕಟ್ಟಿ ಕುಟುಂಬ ನಿರ್ವಹಣೆಗೆ ನೆರವಾಗುತ್ತಿದ್ದಾರೆ. ಈಗ ಒಂದೇ ಕುಟುಂಬದ ಮೂವರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಮನದ ಸಂಕಟ ಕರುಳು ಹಿಂಡುವಂತಿದೆ. ದುರಂತ ನಡೆದ ಗ್ರಾಮದಲ್ಲೀಗ ಸೂತಕದ ಛಾಯೆ ಆವರಿಸಿದ್ದು, ಸಂತ್ರಸ್ತರ ಮನೆಗೆ ಸಚಿವ ಯು ಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಸೂಕ್ತ ಪರಿಹಾರಕ್ಕೆ ಒತ್ತಾಯ :
ದುರ್ಘಟನೆಯಲ್ಲಿ ಬಲಿಯಾದ ಮಕ್ಕಳ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನು ಒಡಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಕುಂಬಾರರ ಗುಡಿಕೈಗಾರಿಕ ಸಹಕಾರಿ ಸಂಘ, ಪುತ್ತೂರು ಮತ್ತು ಕರಾವಳಿ ಕುಲಾಲಾರ-ಕುಂಬಾರರ ಯುವ ವೇದಿಕೆ ವತಿಯಿಂದ ಪುತ್ತೂರು ಕಂದಾಯ ಉಪವಿಭಾಗಾಧಿಕಾರಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಮೇಲಿನ ಸಂಘ ಸಂಸ್ಥೆಗಳು ಒಟ್ಟಾಗಿ ನೊಂದ ಬಡ ಕುಟುಂಬಕ್ಕೆ ಸಾಧ್ಯ ಆದಷ್ಟು ಆರ್ಥಿಕ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದೆ.
ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಅವರು ಸರಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ, ವೈಯಕ್ತಿಕವಾಗಿ ಐದು ಸಾವಿರ ರೂ. ಧನ ಸಹಾಯ ನೀಡಿ ಮಾನವೀಯತೆಗೆ ಸಾಕ್ಷಿಯಾದರು.
ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು..
ಮೂವರೂ ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಜಿತೇಶ್ ಹಾಗೂ ವಿಸ್ಮಿತಾ ಏಳನೆಯ ತರಗತಿ ವಿದ್ಯಾರ್ಥಿಗಳು.. ಜಿತೇಶ್ ಶಾಲೆಯಲ್ಲಿ ಅತ್ಯಂತ ಚುರುಕಾಗಿದ್ದ. ಎಲ್ಲದಕ್ಕೂ ತಾ ಮುಂದು ತಾ ಮುಂದು ಎಂದು ಬರುತ್ತಿದ್ದ. ಏ. 6 ರಂದು ನಡೆಯಬೇಕಿದ್ದ ಏಳನೇ ತರಗತಿಯ ಮಕ್ಕಳ ಬೀಳ್ಕೊಡುಗೆಗೆ ಎಲ್ಲಾ ರೀತಿಯ ಸಿದ್ದತೆಗಳು ಜಿತೇಶ್ ನ ನೇತೃತ್ವದಲ್ಲಿ ಯೇ ನಡೆದಿತ್ತು. ಇನ್ನು ಪಾಠದಲ್ಲಿಯೂ ಅತ್ಯಂತ ವೇಗವಾಗಿ ಶಿಕ್ಷಕರು ಹೇಳಿದ್ದನ್ನು ಕಲಿತು ಉತ್ತಮ ಜ್ಞಾನವನ್ನು ಹೊಂದಿದ್ದ. ಪ್ರಹಸನ, ಆಶುಭಾಷಣ, ಆಶುನಟನೆ, ಕ್ಲೇ ಮಾಡೆಲಿಂಗ್ ನಲ್ಲಿ ಇವನು ಸದಾ ಎತ್ತಿದ ಕೈ. ಎಲ್ಲರಲ್ಲೂ ನಗೆಯನ್ನು ಚಿಮ್ಮಿಸುತ್ತಿದ್ದ. ಇನ್ನು ಬೆಂಕಿಯಿಲ್ಲದ ಅಡುಗೆ ಮಾಡುವುದರಲ್ಲಿಯೂ ಈತ ಎಕ್ಸ್ ಪರ್ಟ್.. ಪ್ರಾಣ ಕಳೆದುಕೊಳ್ಳುವ ದಿನ ಮಧ್ಯಾಹ್ನ ಚರುಂಬುರಿ, ಜ್ಯೂಸ್ ಮಾಡಿ ತಿಂದು ಕುಡಿದು ಆಟವಾಡಿದ್ದರು. ತುಂಟನಾದರೂ ಮುಗ್ದನಾಗಿದ್ದ ಜಿತೇಶ್ ನಲ್ಲಿ ಸ್ವಲ್ಪ ತುಂಟತನವಿದ್ದರೂ ಆತನ ಮುಗ್ದ ಮುಖ ನೋಡಿ ಎಂತವರೂ ಪ್ರೀತಿಯಿಂದಲೇ ಕಾಣುತ್ತಿದ್ದರು. ಶಾಲೆಯ ಶಿಕ್ಷಕರಿಗೂ ಜಿತೇಶ್ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ವಿಸ್ಮಿತಾಳು ಕೂಡಾ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಳು. ಇತ್ತಿಚೆಗೆ ಪ್ರತಿಭಾ ಕಾರಂಜಿಗೆ ನಡೆದಿದ್ದ ಪೌರಾಣಿಕ ನಾಟಕದಲ್ಲಿ ಈಕೆ ಕಂಸನ ಪಾತ್ರವನ್ನು ಸಂಭಾಷಣೆಯನ್ನು ಕಂಠಪಾಠ ಮಾಡಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಳು.