ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಆಟವಾಡುವ ವೇಳೆಯಲ್ಲಿ ಪಂಚಾಯತ್ನ ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಇಲ್ಲಿನ ಉಡ್ಡಂಗಳ ನಿವಾಸಿ ರವಿ ಮೂಲ್ಯರ ಪುತ್ರ ಮಿತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ 7ನೇ ತರಗತಿಯ ವಿದ್ಯಾರ್ಥಿ ಜಿತೇಶ್(13), ರವಿ ಮೂಲ್ಯರ ಸಹೋದರ ಹರೀಶ್ ಮೂಲ್ಯರ ಪುತ್ರಿಯರಾದ ಇದೇ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ವಿಸ್ಮಿತಾ(13) ಮತ್ತು 4ನೇ ತರಗತಿ ವಿದ್ಯಾರ್ಥಿನಿ ಚೈತ್ರಾ(9) ಮೃತಪಟ್ಟವರು.
ಬುಧವಾರ ಸಂಜೆ ವೇಳೆಗೆ ಶಾಲೆಯಿಂದ ಹಿಂದಿರುಗಿದ ಬಳಿಕ ಮನೆಯ ಸಮೀಪದಲ್ಲಿ ಪಂಚಾಯತ್ನ ವತಿಯಿಂದ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್ನ ಬಳಿಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಟ್ಯಾಂಕ್ನ ಮೇಲೆ ಹತ್ತಿದವರು ಆಯತಪ್ಪಿ ಮೂವರು ಟ್ಯಾಂಕ್ ಒಳಗಡೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಟ್ಯಾಂಕ್ ಒಡೆದು ಹಾಕಿದ ಉದ್ರಿಕ್ತರು:
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಆಕ್ರೋಶಿತರು ನೀರಿನ ಟ್ಯಾಂಕನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಟ್ಯಾಂಕ್ಗೆ ನೀರು ತುಂಬಿಸಿರುವ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಲೋಕಾರ್ಪಣೆಗೊಳ್ಳದ ನೀರಿನ ಟ್ಯಾಂಕ್ಗೆ ನೀರು ತುಂಬಿಸಿ ಬೇಜವಾಬ್ದಾರಿ ಮೆರೆಯಲು ಪಂಚಾಯತ್ ಅಧ್ಯಕ್ಷರು ಕಾರಣಕರ್ತರಾಗಿದ್ದು, ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಕ್ರೋಶಿತ ಸ್ಥಳೀಯರು ಆಗ್ರಹಿಸಿದರು. ಸುಮಾರು 6 ಅಡಿ ಎತ್ತರದ 20 ಸಾವಿರ ಲೀಟರ್ ಸಾಮಥ್ರ್ಯದ ಸಿಮೆಂಟ್ ನಿರ್ಮಿತ ನೀರಿನ ಟ್ಯಾಂಕ್ ಇದಾಗಿದೆ. ಟ್ಯಾಂಕ್ ನಿರ್ಮಿಸಿ 3 ತಿಂಗಳಾಗಿದ್ದರೂ ಈ ತನಕ ಟ್ಯಾಂಕ್ನ ಮುಚ್ಚಳಕ್ಕೆ ಬೀಗ ಹಾಕದಿರುವ ಪಂಚಾಯತ್ನ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ಅಕ್ರೋಶ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಬೇಬಿ ಜಯರಾಮ ಪೂಜಾರಿ, ಪುತ್ತೂರು ಸಹಾಯಕ ಕಮೀಷನರ್ ಹೆಚ್.ಕೆ. ಕೃಷ್ಣಮೂರ್ತಿ ಭೇಟಿ ನೀಡಿದ್ದಾರೆ.