ಮಣಿಪಾಲ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಮೂಡು ಸಗ್ರಿ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಬಾದಾಮಿ ತಾಲೂಕಿನ ಹನುಮಂತ ಬಸಪ್ಪ ಕಂಬಳಿ (39)ಯನ್ನು ಬಂಧಿಸಲು ಸಕಾಲದಲ್ಲಿ ಮಾಹಿತಿ ನೀಡಿ ನೆರವಾದ ಕುಲಾಲಯ ದಂಪತಿ ಕಾರ್ಯಕ್ಕೆ ಸ್ಥಳೀಯವಾಗಿ ಭಾರೀ ಪ್ರಸಂಶೆ ವ್ಯಕ್ತವಾಗಿದೆ.
ಹನುಮಂತ ಬಸಪ್ಪ ಕಂಬಳಿಯನ್ನು ಹಿರಿಯಡ್ಕ ಸಮೀಪದ ಪೆರ್ಣಂಕಿಲ ಹಾಡಿಯಲ್ಲಿ ಎ.1 ರಂದು ಸಂಜೆ 6:45ರ ಸುಮಾರಿಗೆ ಪತ್ತೆ ಹಚ್ಚಿ ಬಂಧಿಸುವಲ್ಲಿ ವರ್ವಾಡಿಯ ಕೃಷ್ಣ ಕುಲಾಲ್ ಎಂಬವರ ಪತ್ನಿ ಶ್ರೀಲತಾ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಅಲರ್ಟ್ ಆದ ಪೊಲೀಸರು ಪೆರ್ಣಂಕಿಲ ಪರಿಸರದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹನುಮಂತನಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದರು. ಸಂಜೆ ವೇಳೆ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಲಾಂಜೋಳಿ ಬಸ್ ನಿಲ್ದಾಣ ಸಮೀಪದ ಹಾಡಿಯಲ್ಲಿ ಆರೋಪಿ ಹನುಮಂತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಮಾ. 30ರಂದು ಬಂಧಿಸಲ್ಪಟ್ಟ ಹುನುಮಂತನನ್ನು ಮಣಿಪಾಲ ಪೊಲೀಸರು ಮಾ.31ರಂದು ಸಂಜೆ 6:15ರ ಸುಮಾರಿಗೆ ಜಿಲ್ಲಾ ಪ್ರಭಾರ ನ್ಯಾಯಾಧೀಶ ರಾದ ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಳಿಕ ಆತನನ್ನು ಹಿರಿಯಡ್ಕ ಕಾರಾಗೃಹಕ್ಕೆ ಪೊಲೀಸ್ ವಾಹನಲ್ಲಿ ಕರೆದುಕೊಂಡು ಹೋಗಿದ್ದರು. ಕಾರಾಗೃಹದ ಮುಖ್ಯ ದ್ವಾರದ ಬಳಿ ವಾಹನ ತಿರುವು ಪಡೆಯಲು ನಿಧಾನ ಗತಿಯಲ್ಲಿ ಚಲಾಯಿಸಿದಾಗ ಸಂಜೆ 7:15ರ ಸುಮಾರಿಗೆ ಆರೋಪಿ ಹನುಮಂತ ಬೆಂಗಾವಲು ಸಿಬ್ಬಂದಿಯನ್ನು ತಳ್ಳಿ ಜೀಪಿನ ಬಾಗಿಲಿನಿಂದ ಹೊರ ನೆಗೆದು ಕಾಡಿನೊಳಗೆ ಓಡಿ ತಪ್ಪಿಸಿಕೊಂಡು ಪರಾರಿಯಾಗಿದ್ದ.
ನೀರು ಕೇಳಿ ಮನೆಗೆ ಬಂದ:
ಭಾನುವಾರ ರಾತ್ರಿ ಇಡೀ ಕಾಜಾರಗುತ್ತು, ಪೆರಣಂಕಿಲ ಕಾಡಿನಲ್ಲಿ ಅಲೆದಾಡಿಕೊಂಡಿದ್ದ ಆರೋಪಿ ಸೋಮವಾರ ಬೆಳಗ್ಗೆ ವರ್ವಾಡಿಯ ಕೃಷ್ಣ ಕುಲಾಲ್ ಎಂಬುವರ ಮನೆಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಭಾನುವಾರ ರಾತ್ರಿ ಅರೋಪಿ ತಪ್ಪಿಸಿಕೊಂಡಿರುವ ಬಗ್ಗೆ ಪೊಲೀಸರು ಪ್ರಕಟಣೆ ನೀಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಕೃಷ್ಣ ಕುಲಾಲ್ ಪತ್ನಿಗೆ ಆರೋಪಿಯ ಫೋಟೋ ತೋರಿಸಿದ್ದರು. ಇದರಿಂದಾಗಿ ಆರೋಪಿಯ ಗುರುತು ಹಿಡಿದ ಮಹಿಳೆ ಕೃಷ್ಣ ಕುಲಾಲ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆರೋಪಿ ತಾನು ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದು, ರಾತ್ರಿ ಇಡೀ ಕಾಡಿನಲ್ಲಿ ಓಡಿ, ಬಳಲಿದ್ದೇನೆ, ಕುಡಿಯಲು ನೀರು ಕೊಡಿ ಎಂದು ಆತ ಅಂಗಲಾಚಿದ್ದ. ಕೃಷ್ಣ ಕುಲಾಲ್ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ ಪೊಲೀಸರು ಬರುವಷ್ಟರಲ್ಲಿ ಆರೋಪಿ ಮತ್ತೆ ಕಾಡಿನ ಕಡೆಗೆ ಓಡಿ ಪರಾರಿಯಾಗಿದ್ದ.
ಬಟ್ಟೆ ಬದಲಾಯಿಸಿದ ಆರೋಪಿ: ಅಲ್ಲಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾದ ಹನುಮಂತ, ತಾನು ಹಾಕಿದ ಹಳದಿ ಬಣ್ಣದ ಶರ್ಟ್ ಮತ್ತು ಚಪ್ಪಲಿಯನ್ನು ದಾರಿ ಮಧ್ಯೆ ಎಸೆದು ಹೋಗಿದ್ದನು. ಕಾಜಾರಗುತ್ತು ಎಂಬಲ್ಲಿರುವ ಕಲ್ಲಿನ ಕೋರೆಯಲ್ಲಿ ಒಣಗಲು ಹಾಕಿದ್ದ ನೀಲಿ ಬಣ್ಣದ ಟೀಶರ್ಟ್ ಧರಿಸಿಕೊಂಡು ಹೋಗಿದ್ದನು. ಕಾಲು ನೋವಿನಿಂದ ಬಳಲುತ್ತಿದ್ದ ಹನುಮಂತ ಹೆಚ್ಚು ದೂರ ಹೋಗಲು ಸಾಧ್ಯ ಇಲ್ಲ ಎಂಬುದನ್ನು ಅರಿತ ಪೊಲೀಸರು ಅದೇ ಪರಿಸರದಲ್ಲಿ ಹುಡುಕಾಟ ಮುಂದುವರೆಸಿದ್ದರು. ಸಕಾಲಕ್ಕೆ ಸಮಯಪ್ರಜ್ಞೆ ಮೆರೆದು ಪೊಲೀಸರಿಗೆ ಮಾಹಿತಿ ನೀಡಿದ ಶ್ರೀಲತಾ ಕುಲಾಲ್ ಹಾಗೂ ಕೃಷ್ಣ ಕುಲಾಲರ ಕಾರ್ಯಕ್ಕೆ ಪೊಲೀಸರು ಸಹಿತ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.