ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕ್ಷಣ ಕ್ಷಣದ ಸ್ಥಳೀಯ ತಾಜಾ ಸುದ್ದಿಗಳನ್ನು ನೀಡುವ ಸಲುವಾಗಿ ಕುಲಾಲ ಸಮುದಾಯದ ಯುವ ಪ್ರತಿಭಾವಂತ ಪತ್ರಕರ್ತ ಸಂದೀಪ್ ಸಾಲ್ಯಾನ್ ಅವರು ನೂತನ ಸುದ್ದಿ ವೆಬ್ ಸೈಟ್ ಹಾಗೂ ಯೂ ಟ್ಯೂಬ್ ಚಾನೆಲನ್ನು ಇತ್ತೀಚೆಗಷ್ಟೇ ಸದ್ದಿಲ್ಲದೇ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುದ್ದಿ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಎದುರಾಗಿದ್ದು, ಈ ಪೈಪೋಟಿ ನಡುವೆ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಗುರಿಯನ್ನು ಇಟ್ಟಿಕೊಂಡು ನೂತನ ವೆಬ್ ಸೈಟ್ `ಅಕ್ಷರ ನ್ಯೂಸ್ ಡಾಟ್ ಇನ್’ (http://aksharanews.in) ನ್ನು ಲೋಕಾರ್ಪಣೆಗೊಳಿಸಲಾಗಿದೆ.
ಈಗಾಗಲೇ ತಮ್ಮ ಪತ್ರಿಕಾರಂಗದ ಅನುಭವದ ಹುರುಪಿನಲ್ಲಿ ಕಟ್ಟಿರುವ ಈ ಹೊಸ ನ್ಯೂಸ್ ವೆಬ್ ಸೈಟನ್ನು ಮಾರ್ಚ್ ಒಂದರಂದು ಮಾಣಿಲದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೋಹನದಾಸ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು. ಮಾಧ್ಯಮ ಲೋಕದ ಪೈಪೋಟಿಯ ನಡುವೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ, ಆರೋಗ್ಯಕರ ಸುದ್ದಿ ನೀಡುವ ಮೂಲಕ ಸಮಾಜದ ಒಳಿತಿಗೆ ಈ ವೆಬ್ ಸೈಟ್ ಶ್ರಮಿಸಲಿ ಎಂದು ಅವರು ಆಶಿಸಿದರು. ಅದೇ ದಿನ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಬಾಳೆಕೋಡಿ ಡಾ. ಶಶಿಕಾಂತ ಮಣಿ ಸ್ವಾಮೀಜಿ ಕೂಡಾ ಸಾಲ್ಯಾನರ ಪ್ರಯತ್ನಕ್ಕೆ ಶುಭಾಶೀರ್ವಾದ ನೀಡಿ ಹರಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ದಿ. ಲಿಂಗಪ್ಪ ಬಂಗೇರ-ಕುಸುಮ ದಂಪತಿಗಳ ಸುಪುತ್ರರಾದ ಸಂದೀಪ್ ಸಾಲ್ಯಾನ್ ಅವರು ಪತ್ರಿಕೋದ್ಯಮ ಹಾಗೂ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಳೆದ ಹದಿನೈದು ವರ್ಷಗಳಿಂದ ವಿವಿಧ ಮಾಧ್ಯಮಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಪ್ರಸ್ತುತ ಅವರು ವಿಜಯವಾಣಿ, ವಿ-ಫೋರ್ ನ್ಯೂಸ್, ನಮ್ಮ ಟೀವಿ ವರದಿಗಾರರಾಗಿ ದುಡಿಯುತ್ತಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ತುಳು ವಾರ್ತಾ ವಾಚಕರಾಗಿ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ಜೇಸಿಐಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನ ಮಾಧ್ಯಮ ಸಲಹೆಗಾರರಾಗಿ, ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಜಾಗೃತಿ ನಾಟಕಗಳ ಕಲಾವಿದನಾಗಿ ಗುರುತಿಸಿಕೊಂಡಿರುವ ಸಂದೀಪ್ ವಸ್ತುನಿಷ್ಠ ವರದಿಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಅಪರೂಪದ ಪತ್ರಕರ್ತರು.
`ವೃತ್ತಿಯಲ್ಲಿ ಏನಾದರೊಂದು ವಿಶೇಷತೆ ಮಾಡಿ ತೋರಿಸಬೇಕೆಂಬ ಮಹತ್ವಾಕಾಂಕ್ಷೆ ,ಹಂಬಲ ಇತ್ತು. ಅದರಂತೆ ಈ ಹಿಂದೆ ಅಕ್ಷರ ಪಬ್ಲಿಸಿಟಿ, ಅಕ್ಷರ ಡಿಜಿಟಲ್ಸ್ ಸ್ಟುಡಿಯೋ ಆರಂಭಿಸಿದ್ದೇನೆ. ಸಮಾಜಕ್ಕೆ ನನ್ನನ್ನು ಪರಿಚಯಿಸಿದ್ದು ನನ್ನ ಅಕ್ಷರಗಳು. ಅದಕ್ಕಾಗಿ ಸುದ್ದಿವಾಹಿನಿಗೂ `ಅಕ್ಷರ’ ಎಂಬ ಹೆಸರೇ ನೀಡಿದ್ದೇನೆ. ನನ್ನ ಸೋದರ ಸಂಬಂಧಿ ದೀಪಕ್ ಸಾಲ್ಯಾನ್ ಅವರ ನೆರವಿನೊಂದಿಗೆ ಈ ಕನಸು ನನಸಾಗಿದೆ. ಸಮಾಜದ ಉತ್ತಮ ಬದಲಾವಣೆಗಾಗಿ, ಡಿಜಿಟಲ್ ಜಗತ್ತಿನ ಹೊಸ ಆಶಾಕಿರಣವಾಗಿ ನೂತನ ವೆಬ್ ಸೈಟ್ ಪಾದಾರ್ಪಣೆ ಮಾಡಿದ್ದು, ಓದುಗರು, ಹಿತೈಷಿಗಳು ಬೆಂಬಲ ನೀಡಬೇಕು’ ಎಂದು ಸಂದೀಪ್ ಸಾಲ್ಯಾನ್ ವಿನಂತಿಸಿದ್ದಾರೆ.