ಮಂಗಳೂರು(ಮಾ.೨೫, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಮುದಾಯದ ಹಿರಿಯ ಮುಂದಾಳು, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಏಳಿಂಜೆ ಕೃಷ್ಣ ಸಾಲ್ಯಾನ್ (73 ವರ್ಷ) ಅವರು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಏಳಿಂಜೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಕೃಷ್ಣ ಸಾಲ್ಯಾನ್ ಅವರು ಕಳೆದ ಶುಕ್ರವಾರದಂದು ವ್ಯವಹಾರ ನಿಮಿತ್ತ ಪಡುಬಿದ್ರೆಗೆ ತೆರಳಿದ್ದು ಅಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಅಪಘಾತ ಸಂಭವಿಸಿತ್ತು. ಈ ವೇಳೆ ಕಾಲಿಗೆ ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡಿದ್ದರು. ಇಂದು ಮುಂಜಾನೆ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ಸಾಲ್ಯಾನ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಐಕಳ ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಏಳಿಂಜೆ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಪೆರುಗುಂಡಿ ಏತ ನೀರಾವರಿ ಸಮಿತಿ ಸದಸ್ಯರಾಗಿಯೂ ಸಾಲ್ಯಾನ್ ಕಾರ್ಯ ನಿರ್ವಹಿಸಿದ್ದ ಅವರು ದ.ಕ ಕುಲಾಲ ಮಾತೃ ಸಂಘದ ಹಿರಿಯ ಸದಸ್ಯರೂ ಆಗಿದ್ದರು. ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರ ಅಪೂರ್ವ ಸಾಧನೆಗೆ ೨೦೧೭ರಲ್ಲಿ ಜಿಲ್ಲಾಡಳಿತವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕೃಷ್ಣ ಸಾಲ್ಯಾನ್ ಅವರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.