ಬಡ ವೃದ್ಧ ಮಹಿಳೆಯ ನೋವಿಗೆ ಮಾನವೀಯ ಸ್ಪಂದನೆ
ಮಂಗಳೂರು(ಮಾ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸುರತ್ಕಲ್ ಸಮೀಪ ಮುರಿದು ಬೀಳುವ ಸ್ಥಿತಿಯಲ್ಲಿದ್ದ ಮುರುಕಲು ಮನೆಯಲ್ಲಿ ದಯನೀಯ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಒಬ್ಬಂಟಿ ಮಹಿಳೆ ಲಕ್ಷ್ಮೀ ಮೂಲ್ಯರ ನೋವಿಗೆ ಸ್ಪಂದಿಸಿರುವ ಕರಾವಳಿ ಕುಲಾಲ ಯುವವೇದಿಕೆಯು ಮನೆಯನ್ನು ದುರಸ್ತಿ ಮಾಡಿ ಕೊಡುವ ಮೂಲಕ ಮಾದರಿಯಾಗಿದೆ.
ಸುರತ್ಕಲ್ ಕೃಷ್ಣಾಪುರದ ಏಳನೇ ಬ್ಲಾಕ್ ನಲ್ಲಿ ವಾಸವಾಗಿರುವ ಲಕ್ಷ್ಮೀ ಮೂಲ್ಯ ಅವರು ಬಾಗಿಲು, ವಿದ್ಯುತ್ ಸಂಪರ್ಕ, ಶೌಚಾಲಯ ಇಲ್ಲದ, ಆಗಲೋ ಈಗಲೋ ಮುರಿದುಬೀಳುವ ಅಪಾಯಕಾರಿ ಸ್ಥಿತಿಯಲ್ಲಿದ್ದ ಮನೆಯಲ್ಲಿ ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದರು. ವರ್ಷದ ಹಿಂದೆ ಇವರ ದುಃಸ್ಥಿತಿಯ ಕುರಿತು `ಮಂಗಳೂರು ನಗರದಲ್ಲೇ ಹಿರಿಜೀವಕ್ಕಿಲ್ಲ ಆಸರೆ ; ಬದುಕು ಕತ್ತಲೆ’ ಎಂಬ ಶಿರೋನಾಮೆಯಲ್ಲಿ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ಗಮನಸೆಳೆದಿತ್ತು.
ಈ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸುರತ್ಕಲ್ ವಲಯದ ಕರಾವಳಿ ಕುಲಾಲ ಯುವವೇದಿಕೆಯ ನೇತೃತ್ವದಲ್ಲಿ ಲಕ್ಷ್ಮೀ ಅವರ ಮನೆಗೆ ಕಾಯಕಲ್ಪ ನೀಡುವ ಸಲುವಾಗಿ ವಿವಿಧೆಡೆಗಳಿಂದ ನೆರವು ಪಡೆದು ದುರಸ್ತಿ ಕಾರ್ಯ ನಡೆಸಿದೆ. ಮನೆಯ ಹಳೆಯ ರೀಪು, ಪಕ್ಕಾಸು-ಹೆಂಚನ್ನು ಬದಲಿಸಿ, ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಹಾಗೂ ಶೌಚ ಗೃಹವನ್ನು ನಿರ್ಮಿಸಿ ಕೊಡುವ ಮೂಲಕ ಲಕ್ಷ್ಮೀ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಹೀಗೆ ದುರಸ್ಥಿಗೊಂಡ ಸುಸಜ್ಜಿತ ಮನೆಯ ಪ್ರವೇಶವು ಮಾ.೨೪ರಂದು ನಡೆಯಿತು. ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕ ಅಣ್ಣಯ್ಯ ಕುಲಾಲ್ ಉಳ್ತೂರು, ವೇದಿಕೆಯ ರಾಜ್ಯಾಧ್ಯಕ್ಷ ತೇಜಸ್ವಿರಾಜ್, ಜಿಲ್ಲಾ ಅಧ್ಯಕ್ಷರಾದ ಜಯೇಶ್ ಗೋವಿಂದ್ , ಯುವವೇದಿಕೆ ಮಂಗಳೂರು ಉತ್ತರ(ಸುರತ್ಕಲ್) ವಿಧಾನ ಸಭಾ ಘಟಕದ ಅಧ್ಯಕ್ಷರಾದ ಗಣೇಶ್ ಕುಲಾಲ್ ಕುಳಾಯಿ , ಗಂಗಾಧರ ಬಂಜನ್, ಶ್ರೀನಾಥ್ ಕುಲಾಲ್, ಹರೀಶ್ ಕುಳಾಯಿ, ದೀಕ್ಷಿತ್ ಕುಲಾಲ್, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಸುಧಾಕರ ಕುಲಾಲ್ , ಜಿಲ್ಲಾ ಕುಲಾಲ ಸಂಘದ ಮಾಜಿ ಅಧ್ಯಕ್ಷ ಸುಜೀರ್ ಕುಡುಪು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.