ಕುಂಭ ನಿಗಮಕ್ಕೆ ಒತ್ತಾಯಿಸಿ ಪೋಸ್ಟ್ ಕಾರ್ಡ್ ಚಳುವಳಿಗೆ ಚಾಲನೆ
ಕುಂದಾಪುರ(ಮಾ.೧೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಾವಳಿ ಕುಲಾಲ ಯುವ ವೇದಿಕೆ ಹೆಂಗವಳ್ಳಿ ಘಟಕದ ಎರಡನೇ ವರ್ಷದ ವಾರ್ಷಿಕೋತ್ಸವ ಹೆಂಗವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ‘ಕುಲಾಲರು ಸಂಘಟನೆಯ ಮೂಲಕ ಒಗ್ಗೂಡುತ್ತಿದ್ದು ಸಾಮಾಜಿಕ-ರಾಜಕೀಯ ಸ್ಥಾನಮಾನಕ್ಕಾಗಿ ಹಕ್ಕೋತ್ತಾಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಕೆ. ಸಮುದಾಯ ಸಂಘಟನೆಗೆ ಯುವಕರು ಜಾಸ್ತಿ ಸಂಖ್ಯೆಯಲ್ಲಿ ಬಂದಾಗ ಇನ್ನಷ್ಟು ಸಂಘಟಿತರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕುಂಭ ನಿಗಮಕ್ಕೆ ಒತ್ತಾಯಿಸಿ ಪೋಸ್ಟ್ ಕಾರ್ಡ್ ಚಳುವಳಿಗೆ ಚಾಲನೆ:
ಇದೇ ಸಂದರ್ಭದಲ್ಲಿ ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಸ್ವತಂತ್ರ ಕುಂಭ ನಿಗಮಕ್ಕೆ ಒತ್ತಾಯಿಸಿ ಬೃಹತ್ ಕಾರ್ಡ್ ಚಳುವಳಿಗೆ ಚಾಲನೆ ನೀಡಿದರು. ಕುಂಬಾರರು ಮಣ್ಣಿನ ಕಾಯಕದಿಂದ ವೃತ್ತಿ ಬದುಕನ್ನು ಆರಂಭಿಸಿದವರು. ಆದರೆ ಕುಂಬಾರಿಕೆ ಇಂದು ನಶಿಸುತ್ತಿದ್ದು ಇದರ ಉಳಿವಿಗಾಗಿ ಕುಂಬಾರಿಕೆಯನ್ನೆ ನೆಚ್ಚಿಕೊಂಡು ಬಂದಿರುವ ಸಮುದಾಯಕ್ಕೆ ಸ್ವತಂತ್ರ ಕುಂಭ ನಿಗಮವನ್ನು ಮುಖ್ಯಮಂತ್ರಿಗಳು ನೀಡಬೇಕು. ಈ ನೆಲೆಯಲ್ಲಿ ಮುಖ್ಯಮಂತ್ರಿಗೆ ಪೋಸ್ಟ್ ಕಾರ್ಡ್ ಬರೆದು ಕುಂಭ ನಿಗಮ ನೀಡುವಂತೆ ಒತ್ತಾಯಿಸಲಾಗುವುದು. ಅಲ್ಲದೇ ಕರಾವಳಿ ಕುಲಾಲ ಯುವ ವೇದಿಕೆಯ ದಶಮಾನೋತ್ಸವದ ಅಂಗವಾಗಿ ಜಗದ್ವಿಖ್ಯಾತ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ಕುಂಬಾರ ಸಮಾವೇಶವನ್ನು ನಡೆಸಲಾಗುವುದು ಎಂದು ಅವರು ದಿಕ್ಸೂಚಿ ಭಾಷಣದಲ್ಲಿ ನುಡಿದರು.
ಸನ್ಮಾನ:
ಹೆಂಗವಳ್ಳಿ ಕುಲಾಲ ಯುವ ವೇದಿಕೆಯ ವಾರ್ಷಿಕೋತ್ಸವದಲ್ಲಿ ನಿವೃತ್ತ ಯಕ್ಷಗಾನ ಕಲಾವಿದ ಜೋಗು ಕುಲಾಲ್, ವೃತ್ತಿ ನಿರತ ಯಕ್ಷಗಾನ ಕಲಾವಿದ ಕೃಷ್ಣ ಕುಲಾಲ್, ಅನ್ನದಾನಿ ಪಾರ್ವತಿ ಜಯರಾಮ್ ಕುಲಾಲ್, ಕ್ರೀಡಾ ಪ್ರತಿಭೆಗಳು, ಆರ್ಥಿಕ ಸಹಾಯ ಮಾಡಿದ ಧಾನಿಗಳನ್ನು ಗುರುತಿಸಿ ಸನ್ಮಾನಿಸಲಾಯ್ತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಹಾಯಧನ, ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಪುರಸ್ಕರಿಸಲಾಯ್ತು.
ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಕುಲಾಲ ಯುವ ವೇದಿಕೆ ಹೆಂಗವಳ್ಳಿ ಘಟಕದ ಅಧ್ಯಕ್ಷರಾದ ಗೋವಿಂದ ಕುಲಾಲ್ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರಾವಳಿ ಕುಲಾಲ ಯುವ ವೇದಿಕೆಯ ರಾಜ್ಯಧ್ಯಕ್ಷ ತೇಜಸ್ವಿರಾಜ್, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾದ ಐತು ಕುಲಾಲ್ ಕನ್ಯಾನ, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಬೋಜು ಕುಲಾಲ್, ಕುಂಬಾರರ ಗುಡಿ ಕೈಗಾರಿಕ ಸಹಕಾರಿ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಶಿಕ್ಷಕ ಮಹಾಬಲ ಕುಲಾಲ್ ಮಂಗಳೂರು, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾದ ನಿರಂಜನ ಅಸೋಡು, ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕುಲಾಲ್, ಕರಾವಳಿ ಕುಲಾಲ ಯುವ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಲಾಲ್ ನಡೂರು, ಕುಂದಾಪುರ ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕುಲಾಲ್ ನಡೂರು, ಹೆಂಗವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಸರೋಜ ಉದಯ್ ಕುಲಾಲ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕರಾವಳಿ ಕುಲಾಲ ಯುವ ವೇದಿಕೆ ಹೆಂಗವಳ್ಳಿ ಘಟಕದ ಕಾರ್ಯದರ್ಶಿ ವಸಂತ ಕುಲಾಲ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ರಮೇಶ್ ಕುಲಾಲ್ ಹೆಂಗವಳ್ಳಿ ಪ್ರಸ್ತಾವಿಸಿದರು. ಅಥಿಲ ಧನ್ಯವಾದ ಸಮರ್ಪಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.