ಸಹಾಯ ಹಸ್ತಕ್ಕಾಗಿ ಎದುರು ನೋಡುತ್ತಿರುವ ಚಂದ್ರಶೇಖರ ಮೂಲ್ಯ
ಬಂಟ್ವಾಳ: ರೈಲ್ವೇ ಮೇಲ್ಸೆತುವೆಯಿಂದ 50 ಅಡಿ ಆಳದ ಕಂದಕಕ್ಕೆ ಬಿದ್ದ ಯುವಕನೋರ್ವ ಕಳೆದ 17ವರ್ಷಗಳಿಂದ ವ್ಹೀಲ್ ಚೇರ್ನಲ್ಲಿ ದಿನ ಸಾಗಿಸುತ್ತಿದ್ದಾನೆ. ಬದುಕಿನಲ್ಲಿ ಎದುರಾದ ಆಕಸ್ಮಿಕ ದುರ್ಘಟನೆಯಿಂದ ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡು ನಿತ್ಯದ ಪ್ರತಿ ಕೆಲಸಗಳಿಗೂ ಮನೆಮಂದಿಯನ್ನೇ ಆಶ್ರಿಸುವ ದಯನೀಯ ಸ್ಥಿತಿ ಆತನಿಗೆ ಒದಗಿದೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮಿತ್ತ ಪರಾರಿ ನಿವಾಸಿ ಕುಲಾಲ ಸಮುದಾಯಕ್ಕೆ ಸೇರಿದ ಚಂದ್ರಶೇಖರ್ ಮೂಲ್ಯ (37) ಆ ನತದೃಷ್ಠ ಯುವಕ. ಪರಮೇಶ್ವರ ಮೂಲ್ಯ ಹಾಗೂ ಕಾವೇರಿ ದಂಪತಿಗಳ ಐದು ಮಕ್ಕಳ ಪೈಕಿ ನಾಲ್ಕನೆಯವನಾದ ಚಂದ್ರಶೇಖರ್ಗೆ ಈಗ ಮನೆಯೇ ಪ್ರಪಂಚ. ಮನೆಮಂದಿಯೇ ಬಂಧು ಬಳಗ ಸ್ನೇಹಿತರು. ಎಲ್ಲರೊಡನೆ ಕೂಡಿ, ಬೆರೆತು ಬದುಕುವ ಕಾಲದಲ್ಲಿ ವಿಧಿಯ ಕ್ರೂರತೆಗೆ ಬಲಿಯಾಗಿ ಎಲ್ಲವನ್ನೂ ಕಳಕೊಂಡವನಂತೆ ಜೀವಿಸುವ ಅಸಹಾಯಕ ಪರಿಸ್ಥಿತಿ ಆತನದ್ದು.
ನಡೆದಿದ್ದೇನು?
ಅಂದು ಆಗಸ್ಟ್ 15,1998. ದೇಶದ ಜನತೆ 52ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದ್ದ ದಿನ. ಆದರೆ ಚಂದ್ರಶೇಖರ್ ಪಾಲಿಗೆ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯವನ್ನೇ ಕಳೆದುಕೊಂಡ ಕರಾಳ ದಿನ.
ಗ್ಯಾರೇಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಕೂಡ ಗೆಳೆಯರೊಂದಿಗೆ ಸ್ವಾತಂತ್ರ್ಯ ಆಚರಿಸಲು ಅಂದು ಮನೆಯಿಂದ ಹೊರಟಿದ್ದ. ಮನೆಯಿಂದ ಕೂಗಳತೆಯ ದೂರದಲ್ಲಿರುವ ರೈಲ್ವೇ ಹಳೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಸೊಂಟದ ಕೆಳಬಾಗದಿಂದ ಚೈತನ್ಯವನ್ನೇ ಕಳೆದುಕೊಂಡ ಪರಿಣಾಮ ಸುದೀರ್ಘ ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ತಾನು ಮೊದಲಿನಂತಾಗಬೇಕೆನ್ನುವ ಶತ ಪ್ರಯತ್ನವನ್ನು ನಡೆಸಿದ ಚಂದ್ರಶೇಖರ್ ಮಣಿಪಾಲ, ಬೆಂಗಳೂರಿಗೂ ತೆರಳಿ ಚಿಕಿತ್ಸೆ ಪಡಕೊಂಡಿದ್ದ . ಯಾವುದೂ ಇರೀಕ್ಷಿತ ಫಲ ನೀಡಲಿಲ್ಲ. ಆದರೂ ಇನ್ನೂ ಆಶಾ ಭಾವನೆ ಇಟ್ಟುಕೊಂಡಿರುವ ಚಂದ್ರಶೇಖರ್ ತಾನು ಮೊದಲಿನಂತಾಗುತ್ತೇನೆ ಎನ್ನುವ ಭರವಸೆಯಲ್ಲಿ ಬದುಕು ಸಾಗಿಸುತ್ತಿದ್ದಾನೆ.
ರಿಮೋಟ್ ಆಧರಿತ ನಡಿಗೆಯ ವಿಶೇಷ ಚಿಕಿತ್ಸೆ ನೀಡಿದರೆ ಕನಿಷ್ಟ ನಡೆದಾಡಲು ಸಾಧ್ಯ ಎನ್ನುವ ವೈದ್ಯರೋರ್ವರ ಸಲಹೆ ಚಂದ್ರಶೇಖರ್ಗೆ ಹೊಸ ಹುರುಪು ನೀಡಿದೆ. ಈ ಚಿಕಿತ್ಸೆ ಮಾಡಿಸಿದರೆ ನಡೆದಾಡಬಹುದು ಎನ್ನುವ ನಿರೀಕ್ಷೆ ಆತನಲ್ಲಿ ಹುಟ್ಟಿಕೊಂಡಿದೆ. ಈಗಾಗಲೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೈ ಬರಿದಮಾಡಿಕೊಂಡಿರುವ ಚಂದ್ರಶೇಖರ್ ದಾನಿಗಳ ನೆರವು ಎದುರು ನೋಡುತ್ತಿದ್ದಾನೆ. ಈಗಾಗಲೇ ಕೆಲ ವ್ಯಕ್ತಿಗಳು, ಸಂಘ ಸಂಸ್ಥೆಗಳು ನೆರವು ನೀಡಿರುವುದನ್ನು ನೆನಪಿಸಿಕೊಳ್ಳುವ ಆತ ದೈನ್ಯದಿಂದಲೇ ನೆರವಿಗಾಗಿ ಮೊರೆ ಇಡುತ್ತಿದ್ದಾನೆ. ನೆರವು ನೀಡುವವರು ಚಂದ್ರಶೇಖರ್ ಅವರ ಬಿ.ಸಿ.ರೋಡಿನ ವಿಜಯಬ್ಯಾಂಕ್ನ ಖಾತೆ ಸಂಖ್ಯೆ 14490 ಜಮಾ ಮಾಡಬಹುದು. (VIJAYA BANK B.C Road, a/c No. 14490, IFSC Code: VIJB0001012).
ದೂರವಾಣಿ ಸಂಖ್ಯೆ 9731244323 ಗೆ ಕರೆ ಮಾಡಿ ಚಂದ್ರಶೇಖರ್ ಜೊತೆ ಮಾತನಾಡಬಹುದು.
ಬರಹ : ಸಂದೀಪ್ ಸಾಲ್ಯಾನ್, ಬಂಟ್ವಾಳ