ಉಡುಪಿ(ಫೆ.೨೮, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜಿಲ್ಲಾಡಳಿತ ಉಡುಪಿ,ಕಾರ್ಮಿಕ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವರ ಸಹಯೋಗದಲ್ಲಿ ಕೊಡಮಾಡುವ ಶ್ರಮ ಸಮ್ಮಾನ ಗೌರವ ಪುರಸ್ಕಾರಕ್ಕೆ ಅಸಂಘಟಿತ ಕಾರ್ಮಿಕ ವಲಯದ ಕುಂಬಾರಿಕೆ ವೃತ್ತಿ ನಿರತ ಉಡುಪಿ ಜಿಲ್ಲೆಯ ಹನ್ನೊಂದು ಮಂದಿ ಕುಲಾಲರು ಆಯ್ಕೆಯಾಗಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಕೆಂಚಲ್ ಮನೆ ನಿವಾಸಿ ರಾಘು ಮೂಲ್ಯ, ಕಾರ್ಕಳ ಬೇಲಾಡಿ ಮಂಚದಬೈಲುಮನೆ ನಿವಾಸಿ ರಮೇಶ ಮೂಲ್ಯ, ಹೆಬ್ರಿ ಚಾರ ಬಸದಿಯ ನಿವಾಸಿ ಕೃಷ್ಣ, ಉಡುಪಿ ಬ್ರಹ್ಮಾವರದ ಆರೂರು ಕೀರ್ತಿನಗರದ ನಿವಾಸಿ ಕುಮಾರ್ ಕುಲಾಲ್, ಉಡುಪಿ ಬ್ರಹ್ಮಾವರದ ಅರೂರು ಕೀರ್ತಿನಗರದ ನಿವಾಸಿ ಸರೋಜಿನಿ, ಉಡುಪಿ ಹೊಸೂರು ಕರ್ಜೆ ಹಾಡಿಬೆಟ್ಟುವಿನ ಪುಟ್ಟ ಹಾಂಡ, ಕುಂದಾಪುರ ಆಲೂರು ಗ್ರಾಮದ ದೂಮನ ಪಾಲು ನಿವಾಸಿ ಗಣೇಶ ಕುಲಾಲ್, ಕುಂದಾಪುರ ಆಲೂರು ಬಂಗ್ಲೆಯ ನಿವಾಸಿ ರಘುರಾಮ ಕುಲಾಲ್, ಕುಂದಾಪುರ ಆಲೂರಿನ ಹಡಗಿನ ಮುಳ್ಳಿ ನಿವಾಸಿ ನೀಲಾವತಿ, ಕುಂದಾಪುರ ಕಾಲ್ತೋಡು ಮೆಟ್ಟಿನಹೊಳೆ ನಿವಾಸಿ ರಾಜೇಶ ಕುಲಾಲ್, ಕುಂದಾಪುರ ಆಲೂರಿನ ಸುಜಾತ ಕುಲಾಲ್ ಈ ಶ್ರಮ ಸಮ್ಮಾನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ವ್ಯಕ್ತಿಗಳಾಗಿದ್ದಾರೆ.
ಈ ಒಂದು ಜನ ಕುಂಬಾರಿಕೆ ವೃತ್ತಿನಿರತ ಕುಂಬಾರರನ್ನು ಗುರುತಿಸಿ ಕಾರ್ಮಿಕ ಇಲಾಖೆಗೆ ಅವರ ಕುಂಬಾರಿಕೆ ಕೆಲಸಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಈ ಗೌರವ ಪುರಸ್ಕಾರವನ್ನು ನೀಡಲು ಶ್ರಮವಹಿಸಿದ್ದು ಕುಂಬಾರಿಕೆ ಗುಡಿಕೈಗಾರಿಕ ಸಹಕಾರಿ ಸಂಘ ಪೆರ್ಡೂರು. ಇದರ ಅಧ್ಯಕ್ಷರು ಮತ್ತು ಸಿಬ್ಬಂದಿಗಳ ಶ್ರಮದಿಂದ ಒಂಬತ್ತು ಜನ ಅಸಂಘಟಿತ ವಲಯದ ಕುಂಬಾರರಿಗೆ ಈ ಪುರಸ್ಕಾರ ಒಲಿದು ಬರಲು ಸಾಧ್ಯವಾಗಿದೆ.
ಈ ಶ್ರಮ ಸಮ್ಮಾನ ಗೌರವ ಪುರಸ್ಕಾರವನ್ನು ಮಾರ್ಚ್ ೧, ಶುಕ್ರವಾರದಂದು ಉಡುಪಿ-ಮಣಿಪಾಲದ ಜಿಲ್ಲಾಡಳಿತ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗುವ ಕಾರ್ಮಿಕ ಸಮ್ಮಾನ ದಿನಾಚರಣೆಯ ಸಂಧರ್ಭದಲ್ಲಿ ನೀಡಿ ಪುರಸ್ಕರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ, ಶಾಸಕ ರಘುಪತಿ ಭಟ್ ಇನ್ನಿತರ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಈ ಸಂಧರ್ಭ ಉಪಸ್ಥಿತರಿರಲಿದ್ದಾರೆ.