ಇಂದು ರಾಜ್ಯದೆಲ್ಲಡೆ ದಾರ್ಶನಿಕ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿವಿಧೆಡೆ ಆಚರಿಸಲಾದ ಸರ್ವಜ್ಞ ಜಯಂತಿಯ ಸಮಗ್ರ ಚಿತ್ರ-ಮಾಹಿತಿಯನ್ನು ಈ ಪುಟದಲ್ಲಿ ಅಪ್ ಡೇಟ್ ಮಾಡಲಾಗುವುದು
ಬೆಂಗಳೂರು ವರದಿ
‘1520 ರಲ್ಲಿಯೇ ಸರ್ವಜ್ಞ ಇದ್ದರು ಎಂದು ಅಂದಾಜಿಸಲಾಗಿದೆ. ಹಾವೇರಿಯ ರಟ್ಟೆಹಳ್ಳಿಯ ಮಾಸೂರು ಸರ್ವಜ್ಞನ ಹುಟ್ಟೂರು. ಅಬಲೂರು (ಅಂಬಲೂರು) ಎಂದು ಕೆಲವು ಸಾಹಿತಿಗಳು ತಪ್ಪಾಗಿ ಬಿಂಬಿಸಿದ್ದಾರೆ’ ಎಂದು ಹಾವೇರಿಯ ಸರ್ವಜ್ಞ ಗುರುಪೀಠದ ಶರಣ ಮಂಜಪ್ಪ ಕುಂಬಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
‘ಸರ್ವಜ್ಞ, ಬ್ರಾಹ್ಮಣ (ತಂದೆ) ಹಾಗೂ ಕುಂಬಾರ (ತಾಯಿ) ದಂಪತಿಗೆ ಹುಟ್ಟಿದ ಮಗನೆಂದು ಬಿಂಬಿಸಲಾಗಿದೆ. ಈ ಮೂಲಕ ಅವರ ಹುಟ್ಟಿಗೆ ಕಳಂಕ ತರಲಾಗಿದ್ದು, ಜನರಲ್ಲಿ ತಪ್ಪು ಭಾವನೆಯನ್ನು ಬಿತ್ತಲಾಗಿದೆ. ಉತ್ತಂಗಿ ಚೆನ್ನಪ್ಪನವರ ಆದಿಯಾಗಿ ಇಂದಿನ ಕವಿ, ಸಾಹಿತಿಗಳು ಸಹ ಅದನ್ನೇ ಬರೆದುಕೊಂಡು ಬಂದಿದ್ದಾರೆ. ಆದರೆ, ಯಾರೊಬ್ಬರು ಸಹ ಈ ಬಗ್ಗೆ ಪ್ರಶ್ನಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪುರೋಹಿತ ಶಾಹಿಗಳ ಮೋಸದ ಬಲೆಗೆ ಸಿಕ್ಕ ಸರ್ವಜ್ಞರನ್ನು ಕುಲಗೆಡಿಸಲಾಗಿದೆ. ಆದರೆ, ಭಕ್ತರು ಮತ್ತು ದೇವರ ನಡುವಿನ ದಲ್ಲಾಳಿ(ಪುರೋಹಿತ)ಗಳನ್ನು ಝಾಡಿಸಿದವರು ಸರ್ವಜ್ಞ. ಉಮಾಪತಿ ಶಾಸ್ತ್ರೀ ತಮ್ಮ ವಚನಗಳಲ್ಲಿ ಅವರ ಹುಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ವಜ್ಞ, ಕುಂಬಾರ ದಂಪತಿಗಳಿಗೆ ಹುಟ್ಟಿದವರು ಎಂದು ಹೇಳಿದ್ದಾರೆ. ಈ ಮೂಲಕ ಸರ್ವಜ್ಞರ ಹುಟ್ಟಿಗೆ ಅಂಟಿದ ಕಳಂಕ ಕಳಚಿದೆ’ ಎಂದರು.
‘ಸರ್ವಜ್ಞರ ಬಗೆಗೆ ಹುಟ್ಟು ಹಾಕಿದ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಿ, ಸಮಾಜಕ್ಕೆ ನಿಜ ಏನೆಂಬುದನ್ನು ತಿಳಿಸಲು ಬೇಕಾದ ಸಾಕ್ಷ್ಯಾಧಾರಗಳು ನಮ್ಮಲ್ಲಿವೆ. ಈ ಕುರಿತು ನ್ಯಾಯಕ್ಕಾಗಿ ನ್ಯಾಯಲಯದ ಮೆಟ್ಟಿಲು ಏರಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.
ಪ್ರಾಧಿಕಾರ ರಚಿಸಿ: ಮಾಸೂರಿನಲ್ಲಿ ‘ಸರ್ವಜ್ಞ ಪ್ರಾಧಿಕಾರ’ ರಚಿಸಬೇಕು. ಇದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನೀಡುತ್ತೇವೆ’ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, ‘ಸರ್ವಜ್ಞನ ತ್ರಿಪದಿಗಳು ಪಾಠಶಾಲೆ ಇದ್ದಂತೆ. ಹುಟ್ಟಿನಿಂದ ಸಾವಿನ ತನಕ ಬೇಕಾದ ಎಲ್ಲ ಮಾರ್ಗದರ್ಶನಗಳನ್ನು ಇಲ್ಲಿ ಕಂಡುಕೊಳ್ಳಬಹುದು. ಯಾವುದೇ ಪೂರ್ವಾಗ್ರಹವಿಲ್ಲದೇ ಜನರ ಬದುಕಿನ ಓರೆಕೋರೆಗಳನ್ನು ತಿದ್ದಿದ ಮೇರು ವ್ಯಕ್ತಿತ್ವ ಅವರದ್ದು. ಹಾಗಾಗಿ ಅವರು, ಎಲ್ಲ ಕಾಲಕ್ಕೂ ಪ್ರಸ್ತುತರಾಗಿದ್ದಾರೆ’ ಎಂದರು.
——————————————————————————————————————–
ಅಸಮಾನತೆ ಖಂಡಿಸಿದ ಕವಿ ಸರ್ವಜ್ಞ
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸ್ತ್ರೀ ಪುರುಷರ ನಡುವಿನ ಅಸಮಾನತೆಯನ್ನು ತನ್ನ ತ್ರಿಪದಿಗಳ ಮೂಲಕ ಖಂಡಿಸಿದ ಕವಿ ಸರ್ವಜ್ಞ, ಆದರೆ ಇಂದಿಗೂ ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಅಸಮಾನತೆ ಇರುವುದು ವಿಷಾದನೀಯ ಎಂದು ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಲೋಕೇಶ್ ಕುಲಾಲ್ ಹೇಳಿದರು.
ಅವರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಹಾಗೂ ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಶ್ರೀ ಸರ್ವಜ್ಞ ಜಯಂತಿ ಆಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸರ್ವಜ್ಞನ ತ್ರಿಪದಿಗಳನ್ನು ಎಲ್ಲರಿಗೂ ಪಸರಿಸಬೇಕು. ಸಂಶೋಧನೆಯ ಮೂಲಕ ಸರ್ವಜ್ಞನ ತ್ರಿಪದಿಗಳ ಸಂಗ್ರಹವಾಗಬೇಕು ಈ ಬಗ್ಗೆ ಸರಕಾರ ಗಮನಹರಿಸ ಬೇಕಿದೆ ಎಂದರು. ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಯಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ.ಕುಲಾಲ್, ಬಂಟ್ವಾಳ ಯೋಜನ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೇಷಪ್ಪ, ಪುರಸಭಾ ಸದಸ್ಯ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪತಹಶೀಲ್ದಾರ್ ರವಿಶಂಕರ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಗ್ರೆಟ್ಟಾ ಮಸ್ಕರೇಞಸ್, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಯುವ ವೇದಿಕೆಯ ಸಂಚಾಲಕ ಸತೀಶ್ ಜಕ್ರಿಬೆಟ್ಟು ಮೊದಲಾದವರು ಹಾಜರಿದ್ದರು.
ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಸ್ವಾಗತಿಸಿ, ವಂದಿಸಿದರು.
————————————————————————————————————–
ಕುಂಬಾರ ಜನಾಂಗಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಘೋಷಿಸಿದ ನಾಗೇಂದ್ರ
ಮೈಸೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಸಂತ ಕವಿ ಸರ್ವಜ್ಞ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಶ್ರೀ ಸಂತ ಕವಿ ಸರ್ವಜ್ಞ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಕಲಾಮಂದಿರದ ಕಿರು ರಂಗಮಂದಿರ, ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ದೀಪ ಬೆಳಗಿಸಿ,ಸರ್ವಜ್ಞನರ ಭಾವಚಿತ್ರ ಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು17 ನೇ ಶತಮಾನದವರು ಸರ್ವಜ್ಞ. ಸರ್ವಜ್ಞ ಒಬ್ಬ ಕುಂಬಾರ ಜನಾಂಗದವರು. ಹಿಂದೆ ಕುಂಬಾರರು ಇರಲಿಲ್ಲ ಅಂದಿದ್ದರೆ ನಾವು ರುಚಿ ರುಚಿಯಾಗಿ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ.ಇಂದಿಗೂ ಕುಂಬಾರರ ಅವಶ್ಯಕತೆ ಜಗತ್ತಿಗಿದೆ.77 ಸಾವಿರ ಪದ್ಯ ಬರೆದ ಕೀರ್ತಿ ಸರ್ವಜ್ಞರಿಗೆ ಸಲ್ಲುತ್ತದೆ.ಇಂದಿಗೂ ಸರ್ವಜ್ಞನನ್ನ ನಾವು ನೆನಪಿಸಿಕೊಳ್ಳುತ್ತೇನೆ.ಲಕ್ಷ್ಮೀ ಸಾಗರ್ ಎಂಬುವವರು ನಿಮ್ಮ ಜನಾಂಗದವರು.ಅವರು ಮಂತ್ರಿಯಾಗಿದ್ರು ಇದು ನಿಮ್ಮ ಜನಾಂಗದ ಹೆಮ್ಮೆ. ನೀವು ಯಾವಾಗಲು ಒಗ್ಗಟ್ಟಾಗಿರಬೇಕು ಆಗ ನೀವು ಅಂದುಕೊಂಡದ್ದನ್ನು ಸಾಧಿಸಬಹುದು.ಶಾಸಕರ ನಿಧಿಯಿಂದ 10 ಲಕ್ಷ ರೂಗಳನ್ನು ಕುಂಬಾರ ಜನಾಂಗದವರಿಗೆ ಅನುಧಾನ ನೀಡುತ್ತಾನೆ. ಇನ್ನೇನು ಚುನಾವಣೆ ನೀತಿ ಸಂಮಿತೆ ಜಾರಿಯಾಗುವ ಬಂಧವವಿದೆ. ಚುನಾವಣೆ ನಂತರ ಅನುಧಾನ ನೀಡುವುದಾಗಿ ವೇದಿಕೆಯಲ್ಲಿ ಘೋಷಿಸಿದರು.
———————————————————————————————————————
ಸರ್ವಜ್ಞ ವಚನ ಜೀವನಕ್ಕೆ ಅನುಭವ – ಕಸ್ತೂರಿ ಪಂಜ
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿದೆ. ವಚನ ಹಾಗೂ ತನ್ನ ಮಾತಿನ ಮೂಲಕ ಜನತೆಯನ್ನು ಸೆಳೆದ ಕವಿ ಸರ್ವಜ್ಞ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಕುಲಾಲರ/ಕುಂಬಾರರ ಯುವವೇದಿಕೆ, ಕರಾವಳಿ ವಿಭಾಗ ಕರಾವಳಿ ಕುಲಾಲರ ಸಂಘಟನೆಗಳ ಒಕ್ಕೂಟ, ಮಂಗಳೂರು ಇವರ ಸಂಯುಕ್ತ ಆಶ್ರಯದೊಂದಿಗೆ ಫೆಬ್ರವರಿ 20 ರಂದು ಸಿರಿ ಚಾವಡಿ, ತುಳು ಭವನ, ಊರ್ವಸ್ಟೋರ್ ಮಂಗಳೂರಿನಲ್ಲಿ ನಡೆದ 4ನೇ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಯತ್ನ ಸರ್ವಜ್ಞರ ವಚನಗಳ ಮೂಲಕ ನಡೆದಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಮಾಜದ ವ್ಯವಸ್ಥೆ ಗಮನಿಸಿ ಜನರ ಕಷ್ಟ, ಸುಖಗಳನ್ನು ತನ್ನ ವಚನದ ಮೂಲಕ ಎತ್ತಿ ಹಿಡಿದ ಕವಿ ಸರ್ವಜ್ಞರು ಎಂದು ಹೇಳಿದರು.
16 ನೇ ಶತಮಾನದ ಕವಿ, ತ್ರಿಪದಿಗಳ ಸೃಷ್ಟಿಕರ್ತನೇ ಸರ್ವಜ್ಞ ! ಮಣ್ಣನ್ನೇ ಬದುಕಾಗಿಸಿಕೊಂಡು ಜೀವನ ನಿರ್ವಹಿಸಿದ ಇವರು ತಮ್ಮ ತ್ರಿಪದಿಗಳ ಮೂಲಕ ಇಂದಿಗೂ ಜನಮಾನಸದಲ್ಲಿದ್ದಾರೆ. ಎಂದು ನಿವೃತ್ತ ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಡಾ ಕೆ ಜನಾರ್ಧನ್ ಹೇಳಿದರು.
ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಇವರು ಸರ್ವಜ್ಞರು ಕರ್ನಾಟಕದ ಸಾಂಸ್ಕøತಿಕ ಮತ್ತು ಸಾಹಿತ್ಯ ಜಗತ್ತಿನ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರ್ವಜ್ಞರ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಪಾರ ಕೊಡುಗೆಯಾಗಿದೆ. ಹಾಗೂ ತ್ರಿಪದಿಯಲ್ಲಿ ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಸರ್ವಜ್ಷರು ಕವಿಯಷ್ಟೇ ಅಲ್ಲ ಸಂತರಾಗಿ ಬದುಕನ್ನು ಸರಳತೆಯೆಡೆಗೆ ಕೊಂಡೊಯ್ದ ಮಹಾಪುರುಷ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ (ರಿ) ಬೆಂಗಳೂರು ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಇನ್ನಿತರರು ಉಪಸ್ಥತರಿದ್ದರು.
———————————————————————————————————————–
ಕಾರ್ಕಳದಲ್ಲಿ ಸರ್ವಜ್ಞ ಜಯಂತಿ ಆಚರಣೆ
————————————————————————————————————————-
ಸರ್ವಜ್ಞನ ನಿಗೂಢಗಳ ಸಂಶೋಧನೆ ನಡೆಸಿ : ಎಂ.ಪಿ. ಕುಂಬಾರ ಅಭಿಮತ
ಹಾವೇರಿ: ಸರ್ವಜ್ಞರ ಹುಟ್ಟು, ಇತಿಹಾಸ, ಸ್ಥಳ ಸೇರಿದಂತೆ ಅನೇಕ ನಿಗೂಢಗಳಿವೆ. ಈ ಬಗ್ಗೆ ಸರ್ಕಾರ ಸಂಶೋಧನೆ ನಡೆಸಬೇಕು ಎಂದು ಸಮಾಜದ ಮುಖಂಡ ಎಂ.ಪಿ.ಕುಂಬಾರ ಒತ್ತಾಯಿಸಿದರು.
ನಗರದ ದೇವರಾಜ ಅರಸು ಭವನದಲ್ಲಿ ಬುಧವಾರ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ವಜ್ಞರ ಕುರಿತ ಸಂಶೋಧನೆ, ಅಧ್ಯಯನ ಹಾಗೂ ಪ್ರಾಧಿಕಾರಕ್ಕೆ ಸರ್ಕಾರ ಅನುದಾನ ನೀಡಬೇಕು. ಅಲ್ಲದೇ, ಹಿಂದುಳಿದ ಕುಂಬಾರ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದರು.
ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕವಾಗಿವೆ. ಭವಿಷ್ಯ, ಒಗಟು, ದಾನ, ಕೌಟುಂಬಿಕ, ವೈದ್ಯಕೀಯ, ರಾಜಕೀಯ, ಕಲೆ ಇತ್ಯಾದಿ ವಿಷಯದ ಕುರಿತು ತ್ರಿಪದಿ ರಚಿಸಿದ್ದಾರೆ ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ‘ಕುಂಬಾರ ಸಮುದಾಯವು ಸಣ್ಣದಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬೆಳೆಯಬೇಕಾಗಿದೆ’ ಎಂದರು.
ಉಪನ್ಯಾಸಕ ಡಾ.ಎಸ್.ವಿ. ಚನ್ನಗೌಡ್ರ ಮಾತನಾಡಿ, ಸರ್ವಜ್ಞರ ವಚನವನ್ನು ಕೇಳುತ್ತಿದ್ದರೆ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ’ ಎಂದರು.
ಸರ್ವಜ್ಞರು ಯಾವುದೇ ರಾಜರ ಆಶ್ರಯದಲ್ಲಿ ಇರದೇ ಸ್ವತಂತ್ರವಾಗಿ ಬೆಳೆದರು. ಸಮಾಜದ ಉನ್ನತಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು ಎಂದರು. ಸರ್ವಜ್ಞ ಭವನ ನಿರ್ಮಾಣಕ್ಕಾಗಿ ಕುಂಬಾರ ಸಮುದಾಯದಿಂದ ಮನವಿ ಸಲ್ಲಿಸಲಾಯಿತು. ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ತಹಶೀಲ್ಧಾರ ಶಿವಕುಮಾರ, ಸುಶೀಲವ್ವ ಚಕ್ರಸಾಲಿ, ಬಸವರಾಜ, ರೇವಣಪ್ಪ ಚಕ್ರಸಾಲಿ ಇದ್ದರು.
————————————————————————————————————–
ಬಳ್ಳಾರಿಯಲ್ಲಿ ಸರ್ವಜ್ಞ ಜಯಂತಿ
ಸರ್ವಜ್ಞ ಒಬ್ಬರು ಮಹಾನ್ ಚೇತನ, ಸಂತನೂ ಹೌದು, ಕವಿಯು ಹೌದು. ಸರ್ವಜ್ಞರು ಅಪಾರ ಜ್ಞಾನವುಳ್ಳವರಾಗಿದ್ದರು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಮಹಮ್ಮದ್ ಮುನೀರ್ ಅವರು ಬಣ್ಣಿಸಿದರು.ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಸಂತ ಕವಿ ಸರ್ವಜ್ಞ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ಅನಾದಿ ಕಾಲದಿಂದಲೂ ನಮ್ಮ ದೇಶದ ನಾಡು ನುಡಿ, ಸಂಸ್ಕøತಿ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹಾತ್ಮರು ಅನೇಕರು. ಅವರೆಲ್ಲರೂ ಮುಂದಿನ ಪೀಳಿಗೆಗಾಗಿ ತಮ್ಮಲ್ಲಿ ಇರುವಂತಹ ಜ್ಞಾನವನ್ನು ನೀಡಿದ ಮಹಾ ಚೇತನಗಳು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಸಾಧಕರು ಉದಯಿಸಿ ತಮ್ಮ ಆದರ್ಶಗಳಿಂದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಖರದಲ್ಲಿ ನಿಲ್ಲಿಸಿದಂತಹ ವ್ಯಕ್ತಿಗಳಲ್ಲಿ ಅತಂತ್ಯ ಮುಖ್ಯವಾಗಿ ಕಂಡು ಬರುವಂತಹ ಸರ್ವರಿಗೂ ಜ್ಞಾನವನ್ನು ಹಂಚಿದಂತಹ ಮಹಾನ್ ಚೇತನ ನಮ್ಮ ಕವಿ ಸರ್ವಜ್ಞ ಎಂದು ಅವರು ಹೇಳಿದರು.
ಸರ್ವಜ್ಞರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರಿ(ಅಂಬಲೂರು)ನಲ್ಲಿ ಸಾಕು ತಾಯಿ ಮಲ್ಲಕ್ಕ ಮತ್ತು ತಂದೆ ಬಸವರಸ ಎಂಬ ದಂಪತಿಗಳಿಗೆ ಮಕ್ಕಳ ಭಾಗ್ಯ ಇಲ್ಲದ ಕಾರಣ ತಂದೆ ಬಸವರಸನು ಪುತ್ರ ಸಂತಾನಕ್ಕಾಗಿ ಕಾಶಿ ಕ್ಷೇತ್ರಕ್ಕೆ ಪಯಣಿಸಿ ಅಲ್ಲಿನ ಕಾಶಿ ವಿಶ್ವನಾಥನ ಮೊರೆ ಹೋದಾಗ, ಕನಸಿನಲ್ಲಿ ಪ್ರತ್ಯಕ್ಷನಾಗಿ ನನ್ನ ಪ್ರಸಾದದಿಂದ ಹುಟ್ಟುವ ನಿನ್ನ ಮಗನು ಸಂಸಾರಿಯಾಗದೆ, ಲೋಕವನ್ನು ಬೆಳಗಿಸುವ ಮಹಾನ್ ಜ್ಯೋತಿಯಾಗುತ್ತಾನೆ ಎಂದು ಹೇಳಿದ ಮಾತಿನ ಬಳಿಕ, ತನ್ನ ಹಳ್ಳಿಗೆ ಮರಳುವ ಮಾರ್ಗ ಮಧ್ಯದಲ್ಲಿ ಅಂಬಲೂರು ಎಂಬ ಗ್ರಾಮಕ್ಕೆ ಬರುತ್ತನೆ. ದಾರಿಯಲ್ಲಿ ಗುಡುಗು ಸಿಡಿಲುಗಳಿಂದ ಮಳೆ ಸುರಿಯುತ್ತಿರುವಾಗ ಹತ್ತಿರದಲ್ಲಿ ‘ಕುಂಬಾರ ಮಾಳಿ’ ಎಂಬ ಮಹಿಳೆಯ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮಧ್ಯದಲ್ಲಿ ಅವಳ ಅಪಾರ ಸೇವೆಯನ್ನು ನೋಡಿ ಅವಳಿಗೆ ಮನಸೊತು ವಿವಾಹನಾಗುತ್ತನೆ. ಈ ದಂಪತಿಗೆ ಜನಿಸಿದ ಮಗುವಿಗೆ ‘ಪುಷ್ಪದತ್ತ’ ಎಂದು ನಾಮಕರಣ ಮಾಡಿದರು ಎಂಬುದಾಗಿ ಇತಿಹಾಸದ ಪುಟಗಳಲ್ಲಿ ನಾವು ಕಾಣಬಹುದು ಎಂದು ಅವರು ಹೇಳಿದರು.
ಶಿಕ್ಷಕರು, ಸಾಹಿತಿ, ಗಾಯಕ ಅಮಾತಿ ಬಸವರಾಜ್ ಅವರು ವಿಶೇಷ ಉಪನ್ಯಾಸ ನೀಡಿ, ಸರ್ವಜ್ಞ ಸ್ವತಃ ತಮ್ಮ ತ್ರಿಪದಿಯಲ್ಲಿ ತಿಳಿಸಿರುವಂತೆ ಏಳು ಕೋಟಿ ಏಳು ಲಕ್ಷ ಏಳು ಸಾವಿರ ಎಪ್ಪತ್ತು ವಚನಗಳನ್ನು ರಚನೆ ಮಾಡಿದ್ದು, ಇಂದು ಸಾವಿರಗಳಲ್ಲಿ ಮಾತ್ರ ವಚನಗಳು ಲಭ್ಯವಿದೆ ಎಂದು ಸಂಶೋಧಕ ಮಲ್ಲೇಪುರಂ ವೆಂಕಟೇಶ್ವರವರ ಸಂಶೋಧನೆಯಲ್ಲಿ ತಿಳಿದು ಬಂದಿದೆ ಹಾಗೂ ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಮೂರ್ತಿ ಬರೆಯದ ವಿಷಯವಿಲ್ಲ ಎಂಬ ಮಹಾನ್ ಹೇಳಿಕೆಯನ್ನು ಇತಿಹಾಸಕಾರರು ನುಡಿದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಫೆ.14ರಂದು ಕಾಶ್ಮೀರದಲ್ಲಿ ನಡೆದ ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಾಲಿವಾಹನ ಕುಂಬಾರ ಸಂಘದ ಅಧ್ಯಕ್ಷ ಕೆ.ರಂಗಸ್ವಾಮಿ, ಸಹ ಕಾರ್ಯದರ್ಶಿ ಕೆ.ವಿ.ನಾರಾಯಣ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಕೆ.ಎಮ್. ಗುರುರಾಜ್, ಕೆ.ಬಸಪ್ಪ ಹಾಗೂ ಸಮಾಜದ ಮುಂಖಂಡರು ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.
———————————————————————————————————–
ಸರ್ವಜ್ಞನ ವಚನಗಳಲ್ಲಿ ಮಾನವತೆಯ ಸಂದೇಶ: ಹರೀಶ್ ಪೂಂಜ
ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸರ್ವಜ್ಞನ ವಚನಗಳು ಮಾನವತೆಯ ಸಂದೇಶ ನೀಡುವುದರೊಂದಿಗೆ ಜನಸಾಮಾನ್ಯರ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನೂ ಮಾಡಿವೆ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ಮಾರ್ಗ ದರ್ಶಕವಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಬುಧವಾರ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಬೆಳ್ತಂಗಡಿ ತಾ| ಆಡಳಿತದ ವತಿಯಿಂದ ತಾ| ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಸಹಯೋಗದಲ್ಲಿ ನಡೆದ ಸರ್ವಜ್ಞ ಜಯಂತಿ ಆಚರಣೆ-2019 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ ಮಾತನಾಡಿ, ಸರಕಾರ ಸಾಧಕರ ಜಯಂತಿ ಆಚರಿಸುವುದರ ಜತೆಗೆ ಅವರು ಹುಟ್ಟಿದ ಸಮುದಾಯದ ಬೆಳವಣಿಗೆಗೂ ಕೊಡುಗೆ ನೀಡುತ್ತಿದೆ ಎಂದರು.
ರಾಜ್ಯ ಕುಂಬಾರರ ಮಹಾ ಸಂಘದ ಸಂಘಟನ ಕಾರ್ಯದರ್ಶಿ ಎಚ್. ಪದ್ಮಕುಮಾರ್ ಉಪನ್ಯಾಸ ನೀಡಿ, ಸರ್ವಜ್ಞ ಅವರು ಸಮಾಜದ ಜಾತಿ ವ್ಯವಸ್ಥೆ, ವರ್ಣಭೇದ ನೀತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಸರಳ ಕನ್ನಡದ ಮೂಲಕ ಸಾಹಿತ್ಯ ರಚಿಸಿ, ಸಾಕಷ್ಟು ಬದಲಾವಣೆಗೂ ಕಾರಣವಾಗಿದ್ದರು ಎಂದರು. ಬಂದಾರಿನ ರಾಷ್ಟ್ರ ಮಟ್ಟದ ಕ್ರೀಡಾಪಟು ಚಿತ್ರಾ ಅವರನ್ನು ಸಮ್ಮಾನಿಸಲಾಯಿತು. ಹುತಾತ್ಮ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಸದಸ್ಯರಾದ ಗೋಪಿನಾಥ್ ನಾಯಕ್, ಕೃಷ್ಣಯ್ಯ ಆಚಾರ್ಯ, ವಸಂತಿ, ನ.ಪಂ. ಸದಸ್ಯ ಜನಾರ್ದನ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಬಿ. ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸುಭಾಸ್ ಜಾಧವ್ ವಂದಿಸಿದರು. ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.
ಕುಲಾಲ ಭವನಕ್ಕೆ ನಿಧಿ
ಸ್ಥಳೀಯ ಕುಲಾಲ ಭವನಕ್ಕೆ ತನ್ನ ಶಾಸಕ ನಿಧಿಯಿಂದ 5 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, ಸಂಸದರ ನಿಧಿಯಿಂದಲೂ ಅನುದಾನ ದೊರಕಿಸಿ ಕೊಡುವ ಪ್ರಯತ್ನ ಮಾಡುವೆ.
- ಹರೀಶ್ ಪೂಂಜ, ಶಾಸಕರು
—————————————————————————————————————–