ಕಾಪು (ಫೆ ೧೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ರಾತ್ರಿಯ ಕಾರ್ಯಕ್ರಮಕ್ಕೆ ರಿಕ್ಷಾದಲ್ಲಿ ಹೊರಟಿದ್ದ ಕುಟುಂಬವೊಂದು ಅಪಘಾತದಲ್ಲಿ ಸಿಲುಕಿ ಪುಟ್ಟ ಮಗುವಿನ ಕಾಲೊಂದು ತೀವ್ರ ತರದಲ್ಲಿ ಜಖಂಗೊಂಡಿದ್ದು, ಬಡ ಮಗುವಿನ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆಯಿಂದ ಧನ ಸಹಾಯ ನೀಡಲಾಯಿತು.
ಅಪಘಾತಕ್ಕೀಡಾದ ಮಗುವನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದಾಗ ಜಜ್ಜಲ್ಪಟ್ಟ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಸೂಚನೆ ನೀಡಿದರು. ಕೂಲಿ ಕೆಲಸ ಮಾಡುತಿದ್ದ ಮಗುವಿನ ಪಾಲಕರು ಶಸ್ತ್ರ ಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚವನ್ನು ಕೇಳಿಯೇ ಹೌಹಾರಿದ್ದರು. ಮಗುವಿನ ಭವಿಷ್ಯವನ್ನು ನೆನೆದು ಕಣ್ಣೀರಾದ ಪಾಲಕರು ಕಾಪು ಕುಲಾಲ ಯುವ ವೇದಿಕೆಗೆ ಸಹಕಾರಕ್ಕಾಗಿ ವಿನಂತಿಸಿಕೊಂಡರು.
ಕಾಪು ಕುಲಾಲ ಯುವ ವೇದಿಕೆಯು ಪುಟ್ಟ ಮಗು ದೈವಿಕ್ ನ ವಸ್ತುಸ್ಥಿತಿ ವಿವರಣೆಯ ಸಚಿತ್ರ ವರದಿಯೊಂದಿಗೆ ಸಹೃದಯಿ ದಾನಿಗಳಿಂದ ಧನ ಸಹಾಯಕ್ಕಾಗಿ ಮಾಡಿದ ಕಳಕಳಿಯ ಮನವಿಗೆ ಶೀಘ್ರ ಗತಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ ಪರಿಣಾಮ ಸಂಗ್ರಹವಾದ 39, 000 ರೂ ಧನಸಹಾಯವನ್ನು ದೈವಿಕ್ ನ ಪಾಲಕರಿಗೆ ದಿನಾಂಕ 17/ 02/ 2019 ರಂದು ಹಸ್ತಾಂತರಿಸಲಾಯಿತು.
ಈ ಸಂದರ್ಭ ಕಾಪು ಕುಲಾಲ ಯುವವೇದಿಕೆ ಅಧ್ಯಕ್ಷ ಉದಯ ಕುಲಾಲ್ ಕಳತ್ತೂರು, ಕಾಪು ವಲಯ ಕುಲಾಲ ಸಂಘದ ಉಪಾಧ್ಯಕ್ಷ ಸಂದೀಪ್ ಬಂಗೇರ ಶಂಕರಪುರ, ಧೀರಜ್ ಕುಲಾಲ್ ಕುತ್ಯಾರು, ದಿನೇಶ್ ಶಂಕರಪುರ,ರವಿರಾಜ್ ಆಚಾರ್ಯರವರು ಉಪಸ್ಥಿತರಿದ್ದರು.
ಮಗುವಿನ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಧನ ಸಹಾಯದ ಅಗತ್ಯವಿರುವ ಕಾರಣ ಸಹಾಯ ಧನ ನೀಡುವ ಸಹೃದಯರು ಮಗುವಿನ ತಂದೆ ಸಂತೋಷ್ ಕುಲಾಲ್ ರವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ : 9945713444