ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) ಸಣ್ಣ ಪುಟ್ಟ ದುಡಿಮೆ ಮಾಡಿ ಸಂಸಾರ ನೌಕೆ ಸಾಗಿಸುತ್ತಿದ್ದ ತೋಡಾರಿನ ರವಿ ಕುಲಾಲ್ ಎಂಬವರು ಕಳೆದೊಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕುಳಿತಲ್ಲಿಂದ ಎದ್ದೇಳಲಾಗದೆ ಮನೆಯಲ್ಲೇ ಉಳಿದಿದ್ದ ಅವರನ್ನು ತೋಡಾರಿನ ಹಕೀಮ್ ಮತ್ತು ಅಲ್ತಾಫ್ ಮುಸ್ಲಿಯಾರ್ ನೇತೃತ್ವದಲ್ಲಿ ತೋಡಾರು ಎಸ್ಕೆ.ಎಸ್.ಎಸ್.ಎಫ್ ನ ಸಹಕಾರದೊಂದಿಗೆ ಸಹಾಯಹಸ್ತ ಚಾಚಿ ನೆರವಿಗೆ ಮುಂದಾಗಿದ್ದು, ರವಿಯವರ ಮನೆಗೆ ಭೇಟಿ ನೀಡಿದ ತಂಡವು ಅವರನ್ನು ಶುಶ್ರೂಷೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.
ರವಿ ಕುಲಾಲ್ ಕಳೆದೊಂದು ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದು, ಅನಾರೋಗ್ಯದಿಂದ ಕೆಲಸ ಮಾಡದೆ ಜೀವನ ನಡೆಸಲು ತುಂಬಾ ಕಷ್ಟಕರವಾಗಿತ್ತು. ಅವಿವಾಹಿತರಾದ 37 ವರ್ಷ ಪ್ರಾಯದ ಅವರು ಮನೆಯಲ್ಲಿ ತಾಯಿಯ ಜೊತೆ ವಾಸಿಸುತ್ತಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿದ್ದ ರವಿಯವರನ್ನು ಕಂಡು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ತೋಡಾರು ಎಸ್ಕೆ.ಎಸ್.ಎಸ್.ಎಫ್ ನ ಈ ಶ್ಲಾಘನೀಯ ಕಾರ್ಯವೈಖರಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿವೆ. ಈ ಸಂದರ್ಭದಲ್ಲಿ ನಯಾಝ್ ಪ್ರೇಮ್ ಸಾಗರ್, ತ್ವಲ್ಹತ್, ರಿಯಾಝ್, ನೌಫಲ್ ಟಿ.ಎಚ್ , ಕುಂಞಿಮೋನು ಮೊಗರು ತಂಡದಲ್ಲಿದ್ದರು.