ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸುನಿಲ್ ನ ಬದುಕಿನಲ್ಲಿಂದು ಸಂತಸವೇ ಮರೆಯಾಗಿದೆ. ನಿತ್ಯದಂತೆ ಆ ರಾತ್ರಿಯೂ ಜೋಮಾಟೋ ಫುಡ್ ಡೆಲಿವರಿಯ ಕೆಲಸ ಮುಗಿಸಿಕೊಂಡು ಉದ್ಯಾವರದಿಂದ ಕಾಪುಗೆ ಹೊರಟಿದ್ದ ಸುನಿಲ್ ನ ಪಾಲಿಗೆ ಆ ರಾತ್ರಿ ಎಂದಿನಂತಿರಲಿಲ್ಲ. ರಾತ್ರಿಯ ಕರಾಳತೆಯನ್ನು ತನ್ನ ಬದುಕಿಗೇ ತುಂಬಿದ ದುರ್ಘಟನೆಯೊಂದು ಅನೂಹ್ಯ ರೀತಿಯಲ್ಲಿ ಅರೆಕ್ಷಣದಲ್ಲಿ ನಡೆದು ಹೋಯಿತು.
ಹಿಂದಿನಿಂದ ಶರವೇಗದಲಿ ದಾವಿಸಿ ಬಂದ ಕಾರೊಂದು ಸುನಿಲ್ ನ ದ್ವಿಚಕ್ರ ವಾಹನಕ್ಕೆ ಗುದ್ದಿ ಮರೆಯಾಗಿತ್ತು. ಅನಾಮತ್ತಾಗಿ ಹತ್ತಾರು ಅಡಿ ದೂರಕ್ಕೆ ರಭಸವಾಗಿ ಎಸೆಯಲ್ಪಟ್ಟ ಬೈಕ್ ರಸ್ತೆ ಇಕ್ಕೆಲಗಳಲ್ಲಿದ್ದ ಕಬ್ಬಿಣದ ತಡೆಬೇಲಿಗೆ ಬಡಿದು ಮಗುಚಿ ಬಿದ್ದಿತು. ತಡೆಬೇಲಿಯ ಕಬ್ಬಿಣದ ಕಂಬಕ್ಕೆ ಬಡಿದ ಸುನಿಲ್ ನ ಕಾಲು ಸಂಪೂರ್ಣ ಜಜ್ಜಲ್ಪಟ್ಟಿತ್ತು. ಅಸಾಧ್ಯ ನೋವಿನ ಚೀತ್ಕಾರಕ್ಕೆ ಆ ಅಪರಾತ್ರಿಯಲ್ಲಿ ಸ್ಪಂದಿಸುವ ಹೃದಯಗಳಿಲ್ಲದ ನಿರ್ಜನ ಪ್ರದೇಶ ಅದು. ತುಸು ಹೊತ್ತಿನ ಬಳಿಕ ಹತ್ತಾರು ಸಹಕಾರದ ಕೈಗಳು ಒಗ್ಗೂಡಿದರೂ ಸಹ ಕಾರಿನ ಪತ್ತೆಗೆ ಸಮಯ ಮೀರಿಯಾಗಿತ್ತು. ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಸುನಿಲ್ ನ ದಾಖಲಿಸಲಾಗಿದ್ದು ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಒಂದು ಕಾಲು ನಿಷ್ಪ್ರಯೋಜಕ ಎಂದು ಅಘಾತಕಾರಿ ಮಾಹಿತಿ ಸಿಕ್ಕಿದೆ. ಹೆಚ್ಚಿನ ಚಿಕಿತ್ಸೆಗೆ 4 ಲಕ್ಷ ವೆಚ್ಚದ ಅವಶ್ಯತೆಯಿದ್ದು ಚಿಕಿತ್ಸಾ ವೆಚ್ಚ 1.85 ಲಕ್ಷ ಮುಂಗಡ ಭರಿಸುವಂತೆ ವೈದ್ಯರ ಆದೇಶವಾಗಿದೆ. ಕಡು ಬಡತನದಲ್ಲಿರುವ ಸುನಿಲ್ ನ ಕುಟುಂಬಕ್ಕೆ ಈಗ ದಿಕ್ಕು ತೋಚದ ಸ್ಥಿತಿ.
ಬೈಲೂರು ನೀರೆಯ ಬೇಬಿ ಮತ್ತು ಕೂಲಿ ಕಾರ್ಮಿಕರಾದ ರಾಮ ಮೂಲ್ಯ ದಂಪತಿಯ ಒಬ್ಬನೇ ಮಗ ಸುನಿಲ್ ಕುಲಾಲ್ . ಇದೀಗ ಕುಟುಂಬ ರಾಮ ಮೂಲ್ಯರ ಸಂಪಾದನೆಯಿಂದಲೇ ಸಂಸಾರ ನಿರ್ವಹಣೆಯಾಗ ಬೇಕಾದ ಅನಿವಾರ್ಯತೆ. ಕಡು ಬಡತನದ ನಡುವೆಯೇ ತನ್ನ ವಿದ್ಯಾಭ್ಯಾಸ ಪೂರೈಸಿದ ಸುನಿಲ್ ಮೊಬೈಲ್ ಶಾಪ್ ಒಂದರಲ್ಲಿ ದುಡಿಯುತಿದ್ದ. ಭವಿಷ್ಯದ ಬಗ್ಗೆ ಅಗಾಧ ಕನಸು ಕಟ್ಟಿದ್ದ ಈ ಚಿಗುರು ಮೀಸೆಯ ತರುಣ ಹುಟ್ಟು ಶ್ರಮಜೀವಿ. 8 ಗಂಟೆಯ ಮೊಬೈಲ್ ಶಾಪ್ ನ ದುಡಿಮೆಯ ನಂತರ ಜೋಮಾಟೋದಲ್ಲಿ ಡೆಲಿವರಿ ಬಾಯ್ ಆಗಿ ರಾತ್ರಿ ಹನ್ನೊಂದರ ತನಕದ ದುಡಿಮೆ. ಬದುಕು ಕಟ್ಟಿಕೊಳ್ಳುವ ಅದಮ್ಯ ಉತ್ಸಾಹದೊಂದಿಗೆ ಸಮಾಜದ ದುರ್ಬಲರಿಗೆ ಸ್ಪಂದಿಸುವ ಸಹೃದಯಿ ಕೂಡ. `ಕುಲಾಲ ಚಾವಡಿ’ ವಾಟ್ಸಪ್ ಬಳಗದ ಹಲವಾರು ಧನ ಸಹಾಯದ ಕೈಂಕರ್ಯದಲ್ಲಿ ನೆರವಿನ ಹಸ್ತ ಚಾಚಿದ ಈ ತರುಣ ಇಂದು ತನ್ನ ಬದುಕಿಗಾಗಿ ಹಸ್ತ ಚಾಚುವ ಸಂದಿಗ್ಧತೆಯಲ್ಲಿ ಸಿಲುಕಿದ್ದರೆ ಅದು ವಿಧಿ ವಿಕೃತಿಯ ಪರಮಾವಧಿ.
ಒಂದೆಡೆ ಬಡತನ ಬದುಕನ್ನು ಹಿಂಡಿದರೆ ಇನ್ನೊಂದೆಡೆ ವಿಧಿ ತನ್ನ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದ ಅಘಾತದಲ್ಲಿ ಶಾಶ್ವತ ಅಪಾಂಗತೆಯ ನೋವಿನಲಿ ಜರ್ಝರಿತಗೊಂಡ ಹೃದಯಕ್ಕೆ ಸಹೃದಯಿ ದಾನಿಗಳ ಧನ ಸಹಾಯದ ಸಹಕಾರವು ಭರವಸೆಯ ನುಡಿಗಳಾಗಿ ಆತ್ಮಬಲ ತುಂಬಬಹುದು. ಕುಲಾಲ ಚಾವಡಿಯ ಮುಖಾಂತರ ಆರ್ಥಿಕ ಸಂಕಷ್ಟಕ್ಕೆ ನೆರವವಿಗಾಗಿ ಕೆಳಗಿನ ಖಾತೆಗೆ ಹಣ ವರ್ಗಾಯಿಸಬಹುದು.
Hraday
Corporation Karkala branch
Ac/n: 520101233866414
IFC:CORP0000148