ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಯಾರೇ ಕರೆದರೂ ಹಗಲು ರಾತ್ರಿಯೆನ್ನದೆ ನೊಂದವರ ಬಡವರ ನೆರವಿಗೆ ಧಾವಿಸುವ ಯುವಕ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರಿಗೆ ಕಾಪು ಮೂಳೂರಿನ `ನಿರೆಲ್’ ವಾಟ್ಸಾಪ್ ಗ್ರೂಪ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಂಗಳೂರು ಪೊಲೀಸ್ ಲೇನ್ ಶ್ರೀದೇವಿ ದೇವಸ್ಥಾನದಲ್ಲಿ ಫೆ.೧೦ರಂದು ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರು ಸನ್ಮಾನಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಹೇಮಂತ್ ಅವರು ಗುರುತಿಸಿಕೊಂಡಿರುವ ವಿವಿಧ ವಾಟ್ಸಾಪ್ ಗ್ರೂಪ್ ನ ವತಿಯಿಂದ ಒಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಸನ್ಮಾನದ ವೇಳೆ ರಮೇಶ್ ಕುಮಾರ್ ವಗ್ಗ, ರಂಜಿತ್ ಕುಮಾರ್ ಮೂಡಬಿದರೆ, ನಿತೇಶ್ ಕುಕ್ಯಾನ್ ಏಳಿಂಜೆ, ಕಿರಣ್ ಕುಲಾಲ್ ಮರಕಡ, ದಿನೇಶ್ ಕುಲಾಲ್ ಬೀಡು, ನರೇಶ್ ಕೆ.ಟಿ. ಬೆಳ್ತಂಗಡಿ, ಅರುಣ್ ಕುಲಾಲ್ ಮೂಳೂರು, ಉದಯ್ ಕುಲಾಲ್ ಕಳತ್ತೂರು, ಪ್ರಸಾದ್ ಕುಲಾಲ್ ಸಿದ್ಧಕಟ್ಟೆ, ಅನಿಲ್ ಪೂಜಾರಿ, ಚಂದ್ರ ಪ್ರಭಾ ಮಂಗಳೂರು, ಶೃತಿ ಕುಲಾಲ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.
ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಕುಮಾರ್ ಅವರು ವಿವಿಧ ಸಾಮಾಜಿಕ ಚಟುವಟಿಗಳಲ್ಲಿ ಸಕ್ರಿಯರಾಗಿದ್ದು, `ಆಸರೆ ಗೆಳೆಯರ ಬಳಗ’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಬಡರೋಗಿಗಳನ್ನು ಗುರುತಿಸಿ ಸಹಾಯಹಸ್ತ ಚಾಚುತ್ತ ಮಾನವೀಯತೆ ಮೆರೆಯುತ್ತಿದ್ದಾರೆ. `ಕುಲಾಲ್ ವರ್ಲ್ಡ್’ ಸಹಿತ ಸಮಾನ ಮನಸ್ಕರ ಹಲವು ಗ್ರೂಪ್ ಗಳಲ್ಲಿ ತೊಡಗಿಸಿಕೊಂಡಿರುವ ಇವರು ಎಷ್ಟೇ ಒತ್ತಡದ ಕೆಲಸದಲ್ಲಿದ್ದರೂ ಎಲ್ಲ ಕೆಲಸ ಬದಿಗೊತ್ತಿ ನೆರವಿಗೆ ಧಾವಿಸುವ ಅಪರೂಪದ ವ್ಯಕ್ತಿತ್ವವುಳ್ಳವರಾಗಿದ್ದಾರೆ.