ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲರು ಸತ್ಯ, ಧರ್ಮ ಮತ್ತು ನಿಷ್ಠೆಗೆ ಹೆಸರಾದವರು. ಇಂತಹ ಸತ್ ಚಿಂತನೆಯಿಂದ ಬಾಳುತ್ತಿರುವ ನಮಗೆ ಸತ್ಯ ಮಾರ್ಗವೇ ಸಮಾಜ ಹಿಂದುಳಿಯಲು ಕಾರಣವಾಗಿದ್ದು, ಕುಲಾಲರು ಬಲಿಷ್ಠ ಸಂಘಟನೆ ಕಟ್ಟುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಭಿಪ್ರಾಯಪಟ್ಟರು.
ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಫೆ.೩ರಂದು ನಡೆದ ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕಾರ ಅತ್ಯಗತ್ಯ. ಸಂಸ್ಕಾರವಿಲ್ಲದ ಜೀವನ ಸಹ್ಯವೆನಿಸುವುದಿಲ್ಲ. ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಸಂಸ್ಕೃತಿಗಳ ಪಾಠ ಸಿಗಬೇಕು. ಆ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ಬೆಳೆಸಿ ಸಮಾಜಕಟ್ಟುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ದಿನೇಶ್ ಪಿ ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಸೌಂದರ್ಯ ರಮೇಶ್, ದ.ಕ ಕುಲಾಲ ಸಂಘದ ಉಪಾಧ್ಯಕ್ಷ ರಮೇಶ್, ಶಿಕ್ಷಕ ದೇವದಾಸ್, ಉದ್ಯಮಿ ರಾಮ, ಸಾಹಿತಿ-ಇಂಜಿನಿಯರ್ ಆನಂದ ಬಂಜನ್, ಭಾಸ್ಕರ್, ರತ್ನ ಕೃಷ್ಣಪ್ಪ, ಸಚ್ಚಿದಾನಂದ ಮೊದಲಾದವರು ಭಾಗವಹಿಸಿದ್ದರು.
ಆನಂದ ಅಳಿಕೆ, ಜನಾರ್ಧನ, ಧರ್ಣಪ್ಪ, ಕವಿತಾ ದಿನಕರ್, ಮಹೇಶ್ ಕೆ ಸವಣೂರು, ಶಿವಪ್ಪ ಮೂಲ್ಯ, ಯಶವಂತ ಉರ್ಲಾ೦ಡಿ, ಸುಧಾಕರ ಕುಲಾಲ್, ಚಿತ್ರ ಬಲ್ನಾಡು, ಮುರಳಿ, ಧರ್ಣಪ್ಪ, ತ್ರಿವೇಣಿ ದಿನಕರ್, ನವೀನ ಕುಲಾಲ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಸನ್ಮಾನ : ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಚಂದ್ರಶೇಖರ್, ಡಾ. ರಾಕೇಶ್ ಕೆ, ಬಂಗೇರ, ಯಶಸ್ವೀ ಕೆದಿಲ ಅವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಕಾರ್ಯಕ್ರಮ: ಬೆಳಿಗ್ಗೆ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಮತ್ತು ಭಜನೆ ನಡೆಯಿತು. ಸಭೆಯ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.