ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರಿನ ಪುರಭವನದಲ್ಲಿ ಜನವರಿ 29 ರಂದು ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವು ಪ್ರಜ್ಞಾ ಕುಲಾಲ್ ಅವರ “ಭಾವ ತಂತಿ ಮೀಟಿದಾಗ ” ಎಂಬ ಚೊಚ್ಚಲ ಕವನ ಸಂಕಲನ ಬಿಡುಗಡೆಗೊಂಡಿತು.
ಹಿರಿಯ ಸಾಹಿತಿ ಎ. ಪಿ ಮಾಲತಿ ಅವರು ಕವನ ಸಂಕಲನ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಡಾ.ಬಿ.ಎಂ. ಹೆಗ್ಡೆಯವರು ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದಲ್ಲಿ ನಾಡಿನ ಅನೇಕ ಗಣ್ಯರು ಉಪಸ್ಥಿತರಿದ್ದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಬಿ.ಐತ್ತಪ್ಪ ನಾಯ್ಕ ಪುಸ್ತಕ ಬಿಡುಗಡೆಗೆ ಸಹಕರಿಸಿದರು.
ಸೃಜನಶೀಲ ಕವಯಿತ್ರಿಯಾಗಿರುವ ಪ್ರಜ್ಞಾ ಕುಲಾಲ್ ಅವರು ಪುತ್ತೂರು ಕಾವು ವೆಂಕಪ್ಪ ಕುಲಾಲ್ ಮತ್ತು ಮಿನಾಕ್ಷಿ ದಂಪತಿಗಳ ಪುತ್ರಿ. ಎಂ.ಕಾಂ ಪದವೀಧರೆಯಾಗಿರುವ ಇವರು ಪ್ರಸ್ತುತ ಕುಂಬ್ರ ಶಾರದಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವು, ಫ್ರೌಡ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಪಾಪೆಮಜಲು, ಪಿಯುಸಿ ಶಿಕ್ಷಣವನ್ನು ಪುತ್ತೂರಿನಲ್ಲಿ , ಬಿ.ಕಾಂ ಪದವಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರಿನಲ್ಲಿ , ಎಂ.ಕಾಂ ಉನ್ನತ ಶಿಕ್ಷಣವನ್ನು ಡಾ. ಕೆ.ಶಿವರಾಮ ಕಾರಂತ ಕಾಲೇಜು ಪೆರುವಾಜೆಯಲ್ಲಿ ಮುಗಿಸಿಕೊಂಡು 73% ಫಲಿತಾಂಶ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅನೇಕ ಆಸಕ್ತಿಕರ ಹವ್ಯಾಸ ಹೊಂದಿರುವ ಇವರು ಎಳವೆಯಲ್ಲೇ ಹಾಡು ಹಾಗೂ ಸಾಹಿತ್ಯದ ಗೀಳು ಬೆನ್ನಿಗಂಟಿಸಿಕೊಂಡಿದ್ದು, ಕಾಲೇಜು ದಿನಗಳಲ್ಲಿ ನಾರಾಯಣ ರೈ ಕುಕ್ಕುವಳ್ಳಿಯವರು ಮಾರ್ಗದರ್ಶನದಲ್ಲಿ ಕವನ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಭಾವತನ್ಮಯತೆಯ ಕವಿತೆಗಳಿಂದಲೇ ಓದುಗರ ಮನ ಸೆಳೆಯುವತ್ತ ಸಾಗಿರುವ ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಐತ್ತಪ್ಪ ಅವರ ಪ್ರೇರಣೆಯಂತೆ ಭಾಗವಹಿಸಿ ಕವನ ವಾಚಿಸುವ ಅವಕಾಶವನ್ನು ಪಡೆದಿದ್ದಾರೆ. ಅಲ್ಲದೆ ಹಲವು ಕಡೆ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಕವನ ವಾಚನದ ಮೂಲಕ ತೋರಿಸಿಕೊಟ್ಟಿದ್ದಾರೆ. ಇವರು ಬರೆದ ಕವನಗಳು `ಮಧುಪ್ರಪಂಚ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.
ಹರ್ಷಿತಾ ಕುಲಾಲ್ ಕಾವು