ಕುಲಾಲರಿಗೆ ಬೇಕಿರುವುದು ಕರುಣೆಯಲ್ಲ; ಅವಕಾಶ: ತೇಜಸ್ವಿರಾಜ್
ಮೆಟ್ಟಿನಹೊಳೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಣ್ಣಿನ ಸಂಸ್ಕೃತಿ ಪರಂಪರೆಗಳ ಮೂಲದಿಂದ ಬೆಳೆದು ಬಂದ ಕುಂಬಾರರು ದೇಶದ ಮೂಲೆಮೂಲೆಯಲ್ಲಿ ಇಪ್ಪತ್ತು ಕೋಟಿಗೂ ಅಧಿಕ ಮಂದಿ ಇದ್ದಾರೆ. ರಾಜ್ಯದಲ್ಲಿ ಅಂದಾಜು ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ತರದಲ್ಲಿ ಬೆಳೆಯುತ್ತಿರುವ ಕುಲಾಲರಿಗೆ ಬೇಕಿರುವುದು ಕರುಣೆಯಲ್ಲ; ಅವಕಾಶ. ಜೊತೆಗೆ ನಮ್ಮ ಹಕ್ಕುಗಳಿಗೆ ಮಾನ್ಯತೆ ಸಿಗಬೇಕಾಗಿದೆ ಎಂದು ಕರಾವಳಿ ಕುಲಾಲ ಯುವ ವೇದಿಕೆಯ ರಾಜ್ಯಾಧ್ಯಕ್ಷ ತೇಜಸ್ವಿರಾಜ್ ಅಭಿಪ್ರಾಯಪಟ್ಟರು.
ಕರಾವಳಿ ಕುಲಾಲ ಯುವ ವೇದಿಕೆ ಮೆಟ್ಟಿನಹೊಳೆ ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಟ್ಟಿನಹೊಳೆ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಜಗನ್ನಾಥ ಕುಲಾಲ್ ಮೆಟ್ಟಿನಹೊಳೆ ವಹಿಸಿಕೊಂಡಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಪ್ರಭಾಕರ ಕುಲಾಲ್ ಮಾತನಾಡುತ್ತಾ ಕುಲಾಲರು ಇತಿಹಾಸದ ಕಾಲಘಟ್ಟದಿಂದಲೂ ಈ ಸಮಾಜದ ಮುಖ್ಯ ಜನಾಂಗವಾಗಿ ಬೆಳೆದವರು. ಗುಡಿಕೈಗಾರಿಕೆಯ ಮೂಲಕ ಬದುಕನ್ನು ಕಟ್ಟಿಕೊಂಡು ಈ ಸಮಾಜದ ಸರ್ವರಿಗೂ ಬೇಕಾದವರು. ಪ್ರಸ್ತುತ ಶೈಕ್ಷಣಿಕ, ಸಾಮಾಜಿಕ ವಲಯಗಳಲ್ಲಿ ಕುಲಾಲರು ಮುಂಚೂಣಿಗೆ ಬರಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರಾವಳಿ ಕುಲಾಲ ಯುವ ವೇದಿಕೆ ಮೆಟ್ಟಿನಹೊಳೆಯ ಗೌರವಾಧ್ಯಕ್ಷರಾದ ಸೀತರಾಮ್ ಕುಲಾಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಲಾಲ್ ನಡೂರು, ಬೈಂದೂರು ವಿಧಾನಸಭಾ ಕ್ಷೇತ್ರದ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಶೇಖರ ಕುಲಾಲ್, ಕಾಲ್ತೋಡು ಗ್ರಾ. ಪಂ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ, ಕಾಲ್ತೋಡು ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಚಂದು ಕುಲಾಲ್, ಕಾಲ್ತೋಡು ಶ್ರೀ ಜೈನ ಜಟ್ಟಿಗೇಶ್ವರ ದೇವಳದ ಆಡಳಿತ ಮುಕ್ತೇಸರರಾದ ಕರುಣಾಕರ ಶೆಟ್ಟಿ, ತೆಲಂಗಾಣದಲ್ಲಿ ಹೊಟೇಲ್ ಉದ್ಯಮಿಗಳಾಗಿರುವ ನಾರಾಯಣ್ ಕುಲಾಲ್, ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮಿಗಳಾದ ವಿಜಯ ಕುಲಾಲ್, ಕರಾವಳಿ ಕುಲಾಲ ಯುವ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ ಕುಲಾಲ್ ಜನ್ಸಾಲೆ, ನಿವೃತ್ತ ಶಿಕ್ಷಕ ಬಡಿಯ ಹಾಂಡ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್, ಕುಂಬಾರ ಗುಡಿಕೈಗಾರಿಕೆ ಕಲಾಕೃತಿ ಸಾಧಕ ರಾಜೇಶ್ ಕುಲಾಲ್ ಮೆಟ್ಟಿನಹೊಳೆ, ನಿರೂಪಕ ಮಂಜುನಾಥ ಹಿಲಿಯಾಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೆಟ್ಟಿನಹೊಳೆ ಕುಲಾಲ ಯುವ ವೇದಿಕೆ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಲಾಲ್ ಮೆಟ್ಟಿನಹೊಳೆ ಪ್ರಸ್ತಾಪಿಸಿ ಸರ್ವರನ್ನು ಸ್ವಾಗತಿಸಿದರು. ವಿಜಯಲಕ್ಷ್ಮಿ ಮೆಟ್ಟಿನಹೊಳೆ ಧನ್ಯವಾದ ಸಮರ್ಪಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.
ವರದಿ: ಮಂಜುನಾಥ ಹಿಲಿಯಾಣ