ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಅವಿಭಜಿತ ದಕ್ಷಿಣ ಕನ್ನಡ (ಮಂಗಳೂರು-ಉಡುಪಿ)ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರಾಜಕೀಯ ನಿರ್ಲಕ್ಷಕ್ಕೆ ಗುರಿಯಾಗಿರುವ ಕುಲಾಲ, ಕುಂಬಾರ ಜನಾಂಗಕ್ಕೆ ಈ ಬಾರಿ ರಾಜಕೀಯ ಪ್ರಾತಿನಿಧ್ಯತೆಯ ಅವಕಾಶವೊಂದು ಸಿಗುವ ಲಕ್ಷಣ ಗೋಚರಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಅದರಲ್ಲೂ ಕುಲಾಲ ಸಮಾಜಕ್ಕೆ ಸೇರಿದ ಸಮರ್ಥ ನಾಯಕರೊಬ್ಬರನ್ನು ಕಣಕ್ಕಿಳಿಸಬೇಕೆಂದು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು ನಿರ್ಧರಿಸಿರುವುದು ಹೊಸ ನಿರೀಕ್ಷೆ ಮೂಡಿಸಿದೆ. ಜಿಲ್ಲೆಯ ಕುಲಾಲ ಸಂಘಟನೆಗಳ ಜೊತೆ ಹಿಂದುಳಿದ ವರ್ಗಗಳ ಎಲ್ಲಾ ಜಾತಿ ಸಂಘಟನೆಗಳು ಪೂರಕ ಬೆಂಬಲ ನೀಡಿದ್ದಲ್ಲಿ ಈ ಕನಸು ನನಸಾಗುವುದರಲ್ಲಿ ಎರಡು ಮಾತಿಲ್ಲ.
ಅವಿಭಜಿತ ದಕ್ಷಿಣ ಕನ್ನಡ ಜಿಲೆಯ ವ್ಯಾಪ್ತಿಗೊಳಪಡುವ ಮಂಗಳೂರು ಹಾಗೂ ಉಡುಪಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರ ಕಾರ್ಯ ವೈಖರಿಯ ಬಗ್ಗೆ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರಿಗಳಿಂದ ಅಸಮಾಧಾನದ ಮಾತುಗಳು ಕೇಳಿ ಬಂದಿರುವುದರಿಂದ ಸಮರ್ಥ ಪರ್ಯಾಯ ನಾಯಕರನ್ನು ಚುನಾವಣೆಯಲ್ಲಿ ಕಣಕ್ಕಳಿಸಲು ರಾಷ್ಟ್ರೀಯ ನಾಯಕರು ಹಾಗೂ ಆರ್ ಎಸ್ಎಸ್ ಮುಖಂಡರು ತೀರ್ಮಾನಿಸಿದ್ದಾರೆ. ಈ ಪೈಕಿ ವೃತ್ತಿಯಲ್ಲಿ ವೈದ್ಯರಾಗಿ, ಹುಟ್ಟು ಹೋರಾಟಗಾರರಾಗಿ, ವಿವಿಧ ಸಂಘಟನೆಗಳ ಮುಂಚೂಣಿಯಲ್ಲಿರುವ , ಬಿಜೆಪಿ ಪಕ್ಷದದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಎಲ್ಲಾ ವರ್ಗದ ಜನರ ಪ್ರೀತಿಗೆ, ಸ್ನೇಹಕ್ಕೆ ಪಾತ್ರರಾಗಿರುವ ಡಾ. ಅಣ್ಣಯ್ಯ ಕುಲಾಲ್ ಅವರ ಹೆಸರು ಅಗ್ರಸ್ಥಾನದಲ್ಲಿ ಕೇಳಿ ಬರುತ್ತಿದೆ.
ಬಾಲ್ಯದಿಂದಲೇ ಆರ್ಎಸ್ಎಸ್ ಗರಡಿಯಲ್ಲಿ ಪಳಗಿರುವ ಡಾ. ಅಣ್ಣಯ್ಯ ಕುಲಾಲ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು ಒಲವು ತೋರಿದ್ದಾರೆ ಎನ್ನುವ ವಿಚಾರಗಳು ಬಲ್ಲಮೂಲಗಳಿಂದ ಲಭ್ಯವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೋಷಿತ, ಹಿಂದುಳಿದ ವರ್ಗಗಳ ಸಮುದಾಯದ ನಾಯಕರೊಬ್ಬರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೂಡಿ ಬರಲಿದೆ.
ನಾಯಕತ್ವ ಗುಣವಿರುವ ಡಾ| ಅಣ್ಣಯ್ಯ ಕುಲಾಲ್
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಡಾ. ಅಣ್ಣಯ್ಯ ಕುಲಾಲ್ ಅವರು ಕಾರ್ಯಚರಿಸದ ಕ್ಷೇತ್ರವಿಲ್ಲ. ವೃತ್ತಿಯಲ್ಲಿ ವೈದ್ಯರಾದರೂ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ರಾಜಕೀಯ, ಧಾರ್ಮಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಸುಮಾರು 16 ವರ್ಷಗಳ ಕಾಲ ದೇವರಾಜ್ ಅರಸು ಹಿಂದುಳಿದ ಅಲ್ಪಸಂಖ್ಯಾತ ಸರಕಾರೀ ಹಾಸ್ಟೆಲ್ ನಲ್ಲಿ ಓದಿ ಬಡವರ ನೊಂದವರ ಹಿಂದುಳಿದವರ ನೋವು ನಲಿವನ್ನು ಸ್ವತಃ ಅನುಭವಿಸಿಕೊಂಡವರು.
ವೈದ್ಯಕೀಯ ಪದವಿ ಪಡೆದು ಜನಾನುರಾಗಿ ವೈದ್ಯ ಶಿಕ್ಷಕ ಸಾಮಾಜಿಕ ಸಂಘಟಕರಾಗಿ ಭಾರತೀಯ ವೈದ್ಯಕೀಯ ಸಂಘ ಕುಟುಂಬ ವೈದ್ಯರ ಸಂಘ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡ ಕಟ್ಟೆ, ಕರವೇ ಕರಾವಳಿ, ಪರಿಸರ ಸಂರಕ್ಷಣಾ ಒಕ್ಕೂಟ ಬೈರಾಡಿಕೆರೆ ಸಂರಕ್ಷಣಾ ಸಮಿತಿ, ನೇತ್ರಾವತಿ ಉಳಿಸಿ ಹೋರಾಟ, ಕಾಸರಗೋಡು ಉಳಿಸಿ ಹೋರಾಟಗಳ ಮುಂಚೂಣಿಯ ನಾಯಕರಾಗಿ ರಾಜ್ಯ ಮಟ್ಟದಲ್ಲಿ ಜನ ಮನ್ನಣೆ ಗಳಿಸಿ ರಾಜ್ಯೋತ್ಸವ ಪ್ರಶಸ್ತಿ ಜೊತೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳನ್ನ ಸಮಾಜಮುಖೀ ಸೇವೆಗಾಗಿ ಪಡೆದಿರುವ ಇವರು, ವಿವೇಕಾನಂದರ ಭಾರತೀಯ ಬದುಕಿನ ವಿಶ್ವ ಧರ್ಮ ಚಿಂತನೆ, ಸಂಘ ಪರಿವಾರದ ರಾಷ್ಟ್ರೀಯ ಚಿಂತನೆಯ ಜೊತೆಗೆ ಬಿಜೆಪಿಯ ಚಿಂತಕರ ಚಾವಡಿಯ ಸಕ್ರೀಯ ಸದಸ್ಯನಾಗಿರುವುದರಿಂದ ಜನಪ್ರತಿನಿಧಿಯಾಗಲು ಸೂಕ್ತ ವ್ಯಕ್ತಿ ಅಂತ ಸಾಮಾಜಿಕ ಸಂಘಟನೆಗಳು ಹಲವು ಬಾರಿ ರಾಜಕೀಯ ನಾಯಕರುಗಳಿಗೆ ಕಿವಿ ಮಾತು ಹೇಳಿವೆ.
ಈಗ ಕುಲಾಲ್ ಕುಂಬಾರ ಪ್ರಜಾಪತಿ ಸಮುದಾಯದ ಪರವಾಗಿ ವೈದ್ಯ ಶಿಕ್ಷಕ ಸಂಘಟಕ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಅವರನ್ನ ಸಂಸತ್ ಅಥವಾ ರಾಜ್ಯ ಸಭೆಗೆ ಬಿಜೆಪಿ ಆರಿಸಿ ಕಳುಹಿಸಬೇಕು ಎಂದು ಕರ್ನಾಟಕ ,ಗೋವಾ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳ್ನಾಡು, ಗುಜರಾತ್ ರಾಜಸ್ತಾನ್ ರಾಜ್ಯಗಳ ಪ್ರಜಾಪತಿ ಕುಂಬಾರ ಸಂಘಗಳಿಂದ ಸಾಮಾಜಿಕ ರಾಜಕೀಯ ನ್ಯಾಯ ಕೊಡಿಸಿ ಅಂತ , ಬಿಜೆಪಿಯ ಹಿರಿಯ ರಾಷ್ಟ್ರ ಮತ್ತು ರಾಜ್ಯ ನಾಯಕರುಗಳಿಗೆ ಮನವಿಯನ್ನು ಕೊಟ್ಟು ಒತ್ತಾಯಿಸಲಾದ ಮಾಹಿತಿ ದೊರೆತಿದೆ. ಬಿಜೆಪಿ ಪಕ್ಷದ ಹಿರಿಯ ನಾಯಕರುಗಳು ಈ ವಿಚಾರ ವನ್ನ ಗಂಭೀರವಾಗಿ ಪರಿಗಣಿಸಿರುವ ಬಗ್ಗೆ ಮಾಹಿತಿ ದೊರೆತಿದ್ದು , ಕುಂಬಾರ ಸಮುದಾಯಕ್ಕೆ ರಾಜಕೀಯ ನ್ಯಾಯ ಸಿಗುವ ಕಾಲ ಕೂಡಿ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಕುಲಾಲ, ಕುಂಬಾರರ ನಿರ್ಲಕ್ಷ್ಯ:
ರಾಷ್ಟ್ರದಲ್ಲಿ 10 ಕೋಟಿ ಸಂಖ್ಯೆ ಇರುವ ಪ್ರಜಾಪತಿ ಕುಂಬಾರರು ಕರ್ನಾಟಕದಲ್ಲಿ ಸುಮಾರು 25 ಲಕ್ಷ ಮಂದಿ ಇದ್ದಾರೆ. ಕರಾವಳಿಯಲ್ಲಿ ಬಂಟ್ಸ್ ಮತ್ತು ಬಿಲ್ಲವರನ್ನ ಬಿಟ್ಟರೆ ಮೂರನೇ ಸ್ಥಾನದಲ್ಲಿ ಕುಲಾಲ್ ಕುಂಬಾರ ಸಮುದಾಯದವರು ಇದ್ದಾರೆ. ರಾಜ್ಯದಲ್ಲಿ ಕುರುಬ ಮತ್ತು ಈಡಿಗ ಸಮುದಾಯದ ಬಳಿಕ ಮೂರನೇ ಸ್ಥಾನ ಕುಂಬಾರರದ್ದು. ಆದರೆ ಕುಂಬಾರರಿಗೆ ರಾಜಕೀಯ ಸ್ಥಾನಮಾನ ಸಿಗಲೇ ಬೇಕು ಎಂಬ ಕೂಗು ಕಳೆದ ಎರಡು ದಶಕ ಗಳಿಂದ ಕೇಳಿಬರುತ್ತಿದ್ದರೂ ಸಹಾ ರಾಜಕೀಯ ಪಕ್ಷಗಳು ಮಣೆ ಹಾಕಿಲ್ಲ.
…………………………………………………………………………………………………..
ಹೀಗೊಂದು ಸಂದೇಶ ವೈರಲ್
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದರಿಬ್ಬರ ಕಾರ್ಯವೈಖರಿಯ ಬಗ್ಗೆ ಬೇಸತ್ತ ಕಾರ್ಯಕರ್ತರ ಮನದಾಳದ ಮಾತು ಸಾಮಾಜಿಕ ಜಾಲಾತಾಣದಲ್ಲಿ ಈ ರೀತಿ ವೈರಲ್ ಆಗುತ್ತಿದೆ.
ಪರಶುರಾಮ ಸೃಷ್ಟಿಯ ತುಳುನಾಡು ನಮ್ಮ ಹೆಮ್ಮೆಯ ಅವಿಭಜಿತ ದಕ್ಷಿಣ ಕನ್ನಡ (ಮಂಗಳೂರು ಮತ್ತು ಉಡುಪಿ ಲೋಕಸಭಾ ) ಕಳೆದ ಹಲವು ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಕರಾವಳಿ ಬಿಜೆಪಿಯ ಭದ್ರ ಕೋಟೆಯಾಗಿದೆ.
ಈಗ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸಿದೆ. ಮತ್ತೆ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರೆ ಕಳೆದ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾದ ಸಂಸದರ ಬಗ್ಗೆ ಆಗಾಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅದಕ್ಕೆ ಸೂಕ್ತ ಕಾರಣಗಳು ಹಲವಿದೆ. ವಿರೋಧಿಗಳು ಟೀಕಿಸಿದರೆ ಚಿಂತೆ ಪಡಬೇಕಾಗಿರಲಿಲ್ಲ. ಆದರೆ ಬಿಜೆಪಿ ಪಾಳಯದಲ್ಲಿ ಅದರಲ್ಲೂ ಬಿಜೆಪಿ ನಾಯಕರು, ಸಂಘ ಪರಿವಾರದ ನಾಯಕರಿಗೂ ನಮ್ಮ ಸಂಸದರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಇರುವುದು ಗುಟ್ಟಾಗಿ ಉಳಿದಿಲ್ಲ. ಹಾಗಾದರೆ ಹಾಲಿ ಸಂಸದರನ್ನು ಹೊರತು ಪಡಿಸಿದರೆ ಲೋಕಸಭೆಗೆ ಅಭ್ಯರ್ಥಿಯಾಗುವ ಪರ್ಯಾಯ ವ್ಯಕ್ತಿಗಳು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿಲ್ಲವೇ ? ಎನ್ನುವ ಪ್ರಶ್ನೆ ಬಿಜೆಪಿ ಕಾರ್ಯಕರ್ತರದ್ದು.
ಜಿಲ್ಲೆಯ ಜನತೆಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಅರ್ಹತೆಯುಳ್ಳ ವಿದ್ಯಾವಂತ, ಬುದ್ಧಿವಂತ, ಪ್ರತಿಭಾವಂತ, ಪಕ್ಷದ ನಿಷ್ಠಾವಂತ ಹಾಗೂ ಸಮರ್ಥ ನಾಯಕರು ಹಲವರಿದ್ದಾರೆ . ಆದರೆ ಅಂತವರನ್ನ ಗುರುತಿಸಿ, ಅವರಿಗೆ ಅವಕಾಶ ನೀಡುವ ಕೆಲಸ ಆಗಿಲ್ಲವಷ್ಟೇ.
ಹೌದು, ವೃತ್ತಿಯಲ್ಲಿ ವೈದ್ಯರಾಗಿ, ಹಿಂದುಳಿದ ಸಮಾಜದ ಮುಖಂಡರಾಗಿ, ಶೋಷಿತರ ಧ್ವನಿಯಾಗಿ, ಹುಟ್ಟು ಹೋರಾಟಗಾರನಾಗಿ, ಲೇಖಕನಾಗಿ, ಸಂಘಟಕನಾಗಿ ಗುರುತಿಸಿಕೊಂಡಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು. ಹಿಂದುಳಿದ ಸಮಾಜದಲ್ಲಿ ಹುಟ್ಟಿದ್ದರೂ ದೇವರಾಜ್ ಅರಸು ಸರಕಾರೀ ಹಾಸ್ಟೆಲ್ ನಲ್ಲಿ 16 ವರ್ಷಗಳ ಕಾಲ ಓದಿ , ತನ್ನ ಸ್ವಯಂ ಪರಿಶ್ರಮದ ಮೂಲಕ ಉನ್ನತ ವಿದ್ಯಾಭ್ಯಾಸ ಮಾಡಿ ವೈದ್ಯರಾಗಿ ಮಂಗಳೂರು ನಗರದಲ್ಲಿ ಪರಿಚಿತರಾದವರು. ವಿದ್ಯಾರ್ಥಿ ಹಂತದಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಜಿಲ್ಲೆಯ ವಿವಿಧ ಸಂಘಟನೆಗಳ ಮುಂಚೂಣಿಯಲ್ಲಿದ್ದುಕೊಂಡುಹೋರಾಟದ ನಾಯಕತ್ವ ವಹಿಸಿ ಜಿಲ್ಲೆಯ ಜನರಿಗೆ ಆಪ್ತರಾದವರು.
ಹಿಂದುಳಿದ ಸಮಾಜವೊಂದರ ಮುಖಂಡನಾಗಿ ಆ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟು ಶೋಷಿತರ ಧ್ವನಿಯಾದವರು. ತನ್ನ ವೃತ್ತಿ ಪರತೆ , ಪ್ರತಿಭೆ ಮತ್ತು ಸಂಘಟನಾ ಚಾತುರ್ಯದಿಂದಾಗಿ ವೈದ್ಯಕೀಯ ಸಂಘಟನೆಯಲ್ಲಿ ರಾಷ್ಟ್ರೀಯ ಮಟ್ಟದ ನಾಯಕನಾಗಿ ಗುರುತಿಸಿಕೊಂಡವರು. ತನ್ನ ಪ್ರತಿಭೆ, ಸಂಘಟನಾ ಶಕ್ತಿ ಸಮಾಜ ಮುಖೀ ಚಿಂತನೆಗಳಿಂದಾಗಿ ಮೇಲ್ವರ್ಗ, ಕೆಳವರ್ಗ ಮತ್ತು ಹಿಂದುಳಿದ ವರ್ಗಗಳ ಸಮರ್ಥ ಪ್ರತಿನಿಧಿಯಾಗಬಲ್ಲ ಅವರ ಕಾರ್ಯ ಚಟುವಟಿಕೆ ಹೀಗೆ ಮುಂದುವರೆಯುತ್ತದೆ.
ಮುಂದೆಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬರಬೇಕು ಎನ್ನುವ ಹಂಬಲ ನಮ್ಮೆಲ್ಲರದ್ದು. ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಬಹುತೇಕ ಮೇಲ್ವರ್ಗದವರೇ ಶಾಸಕರಾಗಿದ್ದಾರೆ. ಸಂಸದ ಅಭ್ಯರ್ಥಿಯ ಆಯ್ಕೆಯ ಗೊಂದಲದಲ್ಲಿರುವ ಕ್ಷೇತ್ರಗಳಲ್ಲಿ ನಮ್ಮ ನಾಯಕರು ಲೋಕಸಭೆಗೆ ಸ್ಪರ್ಧಿಸಲು ಸಮರ್ಥರಾಗಿರುವ, ಹಿಂದುಳಿದ ವರ್ಗದ ನಾಯಕರಾಗಿರು ಡಾ. ಅಣ್ಣಯ್ಯ ಕುಲಾಲ್ ರಂಥ ಹಿಂದುಳಿದ ಸಮುದಾಯದ ವ್ಯಕ್ತಿಗೆ ಯಾಕೆ ಅವಕಾಶ ಮಾಡಿ ಕೊಡಬಾರದು? ಎಲ್ಲಾ ವರ್ಗದವರನ್ನು ಪ್ರತಿನಿಧಿಸಬಲ್ಲ ವ್ಯಕ್ತಿತ್ವದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಈ ಬಾರಿ ಮಂಗಳೂರು ಅಥವಾ ಉಡುಪಿ ಲೋಕಸಭಾ ಕ್ಷೇತ್ರದ ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಯಾಗಲಿ ಎನ್ನುವುದು ನನ್ನ ಆಶಯ.