ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಲ್ಲಿಗೆ ಸಮೀಪದ ಮೂಳೂರಿನ ಸೊಸೈಟಿ ಕಟ್ಟಡದಲ್ಲಿ ಗೃಹೋಪಯೋಗಿ ಹಾಗೂ ಅಲಂಕಾರಿಕ ಮಣ್ಣಿನ ಪರಿಕರಗಳ ನೂತನ ಶ್ರೀ ಸರ್ವೇಶ್ವರ ಮಳಿಗೆಯು ಜ.೨೧, ಸೋಮವಾರದಂದು ಶುಭಾರಂಭಗೊಂಡಿತು.
ಪ್ರಾಚೀನ ಅಡುಗೆ ಪದ್ಧತಿಗೆ ಮರುಜೀವ ಕೊಡುವ ನಿಟ್ಟಿನಲ್ಲಿ ಆರಂಭಿಸಲಾದ ಉದ್ಯಮಿ ಅರುಣ್ ಕುಲಾಲ್ ಮೂಳೂರು ಅವರ ಮಾಲಕತ್ವದ ಈ ಮಳಿಗೆಯ ಉದ್ಘಾಟನೆಯನ್ನು ಮೂಳೂರು ಶ್ರೀ ಸರ್ವೇಶ್ವರ ಬೊಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಮೊಕ್ತೇಸರರಾದ ಸುಂದರ ಹೆಗ್ಡೆ ನೆರವೇರಿಸಿದರು. ಈ ಸಂದರ್ಭ ಇಲ್ಲಿಯ ಅರ್ಚಕರಾದ ಸುಧೀರ್ ಶೆಟ್ಟಿ ಹಾಗೂ ಹಿತೈಷಿಗಳಾದ ಪ್ರಕಾಶ ಅಂಚನ್, ಜಗನ್ನಾಥ ಪೂಜಾರಿ, ರಾಮ ಪೂಜಾರಿ, ಕಿಶೋರ್ ಪೂಜಾರಿ , ಕುಲಾಲ ಸಮಾಜದ ಸಂತೋಷ್ ಕುಲಾಲ್ ಪದವು, ಉದಯ ಕುಲಾಲ್ ಕಳತ್ತೂರು, ರಮೇಶ್ ಕುಮಾರ್ ವಗ್ಗ, ರಂಜಿತ್ ಕುಮಾರ್ ಮೂಡಬಿದ್ರೆ, ಮೊದಲಾದವರು ಉಪಸ್ಥಿತರಿದ್ದರು.
ಆಧುನಿಕತೆ ಹಾಗೂ ಜನರ ಮನೋಭಾವದಲ್ಲಾದ ಬದಲಾವಣೆಗಳಿಂದ ಕುಂಬಾರರ ಕುಲಕಸುಬಾದ ಕುಂಬಾರಿಕೆ ನಶಿಸುವ ಹಂತ ತಲುಪಿರುವ ಸಂದರ್ಭದಲ್ಲಿ ಆರೋಗ್ಯಕರವಾದ ಮಣ್ಣಿನ ಪಾತ್ರೆ, ನಾನಾ ವಿನ್ಯಾಸದ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಪ್ರೇರಣೆ ನೀಡುವ ಸಲುವಾಗಿ ಈ ಮಾರಾಟ ಮಳಿಗೆಯನ್ನು ತೆರೆದಿದ್ದು ಇಲ್ಲಿ ಮನೆ, ಹೋಟೆಲ್ ಗಳಿಗೆ ಬೇಕಾದ ನವನವೀನ ರೀತಿಯಲ್ಲಿ ತಯಾರಿಸಿದ ಮಣ್ಣಿನ ಪಾತ್ರೆಗಳು, ಹೂಕುಂಡಗಳು, ಮಣ್ಣಿನ ಆಭರಣಗಳು ಮತ್ತು ಅಲಂಕಾರಿಕಾ ವಸ್ತುಗಳು ಲಭ್ಯವಿರುತ್ತದೆ ಎಂದು ಮಾಲಕ ಅರುಣ್ ಕುಲಾಲ್ ತಿಳಿಸಿದ್ದಾರೆ.