ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ನಿಧನರಾದ ಕುಲಾಲ ಸಮಾಜದ ಹಿರಿಯರಾದ ಭೂ ಸೇನೆಯ ನಿವೃತ್ತ ಸುಭೇದಾರ್ ಜೆ ರುಕ್ಮಯ್ಯ ಹಾಗೂ ನಾಟಿ ವೈದ್ಯರೂ, ವ್ಯಾಪಾರಸ್ಥರೂ ಆಗಿದ್ದ ಬಂಟ್ವಾಳದ ಸುಂದರ ಮೂಲ್ಯ ಇವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ್ ಮಾತೃ ಸಂಘದ ನಾರ್ಣಪ್ಪ ಸ್ಮಾರಕ ಕಲಾ ಮಂಟಪದಲ್ಲಿ ಜ. ೨೦ರಂದು ನಡೆಯಿತು. ಈ ಸಂದರ್ಭ ಕುಲಾಲ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀಯ ಭೂಸೇನೆಯಲ್ಲಿ ಸುಭೇದಾರ್ ಆಗಿದ್ದ ಜೆ ರುಕ್ಮಯ್ಯ ಎಡಪದವು (೯೭ವರ್ಷ )ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಮೃತಪಟ್ಟಿದ್ದರು. ೩೭ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಮನುಕುಲವನ್ನೇ ನಡುಗಿಸಿದ 1939 ರಿಂದ 1945ರವರೆಗೆ ನಡೆದ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಗೋವಾ ಮತ್ತು ಹೈದರಾಬಾದ್ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದ ಇವರನ್ನು ರಾಷ್ಟ್ರಪತಿ ಭವನಕ್ಕೆ ಚಹಾ ಕೂಟಕ್ಕೆ ಕರೆದು ಗೌರವಿಸಲಾಗಿತ್ತು.
ಬಂಟ್ವಾಳ ಜಕ್ರಿಬೆಟ್ಟಿನಲ್ಲಿ ವಾಸವಾಗಿದ್ದ ನೇರಂಬೋಳು ಅಚ್ಚುತ ಮೂಲ್ಯರ ಮಗ 67 ವರ್ಷದ ಸುಂದರ ಮೂಲ್ಯ ಅವರು ವ್ಯಾಪಾರಸ್ಥರು ಮತ್ತು ನಾಟಿ ವೈದ್ಯರಾಗಿದ್ದು, ಇತ್ತೀಚೆಗೆ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿದ್ದರು.